ನರ್ಸ್‌ಗಳ ರಜೆ: ರೋಗಿಗಳಿಗೆ ಸಜೆ

Update: 2017-03-18 03:30 GMT

ಹೊಸದಿಲ್ಲಿ, ಮಾ.18: ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಎನಿಸಿದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ಇತಿಹಾಸದಲ್ಲೇ ಮೊದಲ ಬಾರಿಗೆ ನರ್ಸ್‌ಗಳ ರಜೆ ಕಾರಣದಿಂದ ಆಸ್ಪತ್ರೆಯ ತುರ್ತು ನಿಗಾ ಘಟಕವನ್ನು ಸ್ಥಗಿತಗೊಳಿಸಿದ ಘಟನೆ ಶುಕ್ರವಾರ ನಡೆದಿದೆ.

ಏಳನೇ ವೇತನ ಆಯೋಗದ ಭತ್ತೆಗಳನ್ನು ನೀಡುವಂತೆ ಆಗ್ರಹಿಸಿ ಶುಕ್ರವಾರ ಎಲ್ಲ ದಾದಿಯರು ಸಾಮೂಹಿಕವಾಗಿ ಸಾಂದರ್ಭಿಕ ರಜೆ ಹಾಕಿದರು. ಆಸ್ಪತ್ರೆಯ 5,400 ನರ್ಸಿಂಗ್ ಸಿಬ್ಬಂದಿ ಪೈಕಿ ಕೇವಲ 400ರಷ್ಟು ಹಿರಿಯ ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು. ನೂರಾರು ಮಂದಿ ತೀವ್ರ ಅಸ್ವಸ್ಥ ರೋಗಿಗಳನ್ನು ಕೂಡಾ ಸಿಬ್ಬಂದಿ ಕೊರತೆಯಿಂದಾಗಿ ಚಿಕಿತ್ಸೆಗೆ ದಾಖಲಿಸಿಕೊಳ್ಳಲು ನಿರಾಕರಿಸಲಾಯಿತು.

ಶುಕ್ರವಾರಕ್ಕೆ ನಿಗದಿಯಾಗಿದ್ದ ಎಲ್ಲ ಶಸ್ತ್ರಚಿಕಿತ್ಸೆ ಹಾಗೂ ಸಣ್ಣಪುಟ್ಟ ಚಿಕಿತ್ಸೆಯನ್ನು ಕೂಡಾ ದಿಢೀರನೇ ರದ್ದುಪಡಿಸಲಾಯಿತು. ಆಸ್ಪತ್ರೆಯಲ್ಲಿ ಪ್ರತೀದಿನ 200ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ. "ಶುಕ್ರವಾರ ಹಿರಿಯ ಅರೆವೈದ್ಯಕೀಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ನೆರವಿನೊಂದಿಗೆ ತೀರಾ ಅನಿವಾರ್ಯ ಶಸ್ತ್ರಚಿಕಿತ್ಸೆಗಳನ್ನಷ್ಟೇ ನೆರವೇರಿಸಲಾಯಿತು" ಎಂದು ಹಿರಿಯ ವೈದ್ಯರೊಬ್ಬರು ವಿವರಿಸಿದರು.

ಇದರಿಂದಾಗಿ ಹಲವಾರು ಮಂದಿ ರೋಗಿಗಳು ಆಸ್ಪತ್ರೆ ಆವರಣದಲ್ಲಿ ನರಳುತ್ತಿದ್ದ ದೃಶ್ಯ ಹೃದಯವಿದ್ರಾವಕವಾಗಿತ್ತು. "ನನ್ನ ಸಂಬಂಧಿಯೊಬ್ಬರ ಸ್ಥಿತಿ ತೀವ್ರವಾಗಿತ್ತು. ಆದರೆ ರಕ್ಷಣಾ ಸಿಬ್ಬಂದಿ, ತುರ್ತು ನಿಗಾ ಘಟಕಕಕ್ಕೆ ಒಯ್ಯಲು ಅವಕಾಶ ನೀಡಲಿಲ್ಲ" ಎಂದು ಪೂರ್ವದಿಲ್ಲಿಯ ತಾಹೀರ್‌ಪುರದಿಂದ ಆಗಮಿಸಿದ್ದ ನೂತನ್ ವರ್ಮಾ ಎಂಬವರು ಬೇಸರ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News