ಮುಖ್ಯಮಂತ್ರಿಯಾಗಲು ಹೋಗಿ ಮುಗ್ಗರಿಸಿದ ಒಡಿಶಾದ ಚಾಣಾಕ್ಯ

Update: 2017-03-20 09:20 GMT

ಭುಬನೇಶ್ವರ್, ಮಾ.20: ದೀರ್ಘಕಾಲದ ಅಸೌಖ್ಯದ ಬಳಿಕ ರವಿವಾರ ನಿಧನ ಹೊಂದಿದ ಹಿರಿಯ ರಾಜಕಾರಣಿ ಹಾಗೂ ಮಾಜಿ ಅಧಿಕಾರಿ ಪ್ಯಾರಿ ಮೋಹನ್ ಮಹಾಪಾತ್ರ ಅವರು ಒಂದೊಮ್ಮೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸಮೀಪವರ್ತಿಯಾಗಿದ್ದರೂ ನಂತರ ಪಟ್ನಾಯಕ್ ಅವರಿಂದಲೇ ‘‘ಬೆನ್ನಿಗೆ ಚೂರಿ ಹಾಕುವ ದ್ರೋಹಿ' ಎಂದು ನಿಂದನೆಕ್ಕೊಳಗಾದವರು.

ತಮ್ಮ ತಂದೆ ಬಿಜು ಪಟ್ನಾಯಕ್ ನಿಧನಾನಂತರ ಒಡಿಶಾಗೆ ನವೀನ್ ಪಟ್ನಾಯಕ್ ಬಂದಾಗ ಅವರಿಗೆ 1997ರಲ್ಲಿ ಮಹಾಪಾತ್ರ ಪರಿಚಯವಾಗಿತ್ತು. 1990 ಹಾಗೂ 1995 ಅವಧಿಯಲ್ಲಿ ಬಿಜು ಪಟ್ನಾಯಕ್ ಮುಖ್ಯಮಂತ್ರಿಯಾಗಿದ್ದಾಗ ಮಹಾಪಾತ್ರ ಅವರ ಮುಖ್ಯ ಕಾರ್ಯದರ್ಶಿಯಾಗಿದ್ದರು. ಒಡಿಶಾಗೆ ಮುಂದೆ ನವೀನ್ ಬಂದಾಗ ಸಮೀಪವರ್ತಿಗಳ್ಯಾರೂ ಇಲ್ಲದೇ ಇದ್ದಾಗ ತಾಯಿಯ ಸಲಹೆಯಂತೆ ಪ್ಯಾರಿ ಬಾಬು ಬಳಿ ಬಂದಿದ್ದರು.

2000ರಲ್ಲಿ ನವೀನ್ ಪಟ್ನಾಯಕ್ ಮುಖ್ಯಮಂತ್ರಿಯಾಗಲು ಮಹಾಪಾತ್ರ ಬಹಳಷ್ಟು ಸಹಾಯ ಮಾಡಿದ್ದರು. ಮಹಾಪಾತ್ರ ನವೀನ್ ಅವರ ಪಾಲಿನ ‘ಅಂಕಲ್’ ಆಗಿದ್ದರಲ್ಲದೆ ಅವರ ಪ್ರತಿಯೊಂದು ಹೆಜ್ಜೆಯೂ ಮಹಾಪಾತ್ರ ಸಲಹೆಯಂತೆಯೇ ನಡೆಯುತ್ತಿತ್ತು. ಇದರಿಂದ ಬಹಳ ಬೇಗನೇ ಮಹಾಪಾತ್ರ ಅವರ ಮನೆಯ ಮುಂದೆ ಅಧಿಕಾರಿಗಳು ಸರತಿ ನಿಲ್ಲಲು ಆರಂಭಿಸಿ ಸರಕಾರದ ನೀತಿ ಸಂಬಂಧ ಅವರಿಂದ ಸಲಹೆ ಸೂಚನೆ ಪಡೆಯಲಾರಂಭಿಸಿದ್ದರು.

ಮಹಾಪಾತ್ರ ಅವರನ್ನು ಸೂಪರ್ ಚೀಫ್ ಮಿನಿಸ್ಟರ್ ಹಾಗೂ ಒಡಿಶಾ ರಾಜಕಾರಣದ ‘ಚಾಣಕ್ಯ’ ಎಂದೇ ಕರೆಯಲ್ಪಡುತ್ತಿದ್ದು. ನರೇಂದ್ರ ಮೋದಿಗೆ ಅಮಿತ್ ಶಾ ಇದ್ದಂತೆ ನವೀನ್ ಪಟ್ನಾಯಕ್ ಅವರಿಗೆ ಮಹಾಪಾತ್ರ ಇದ್ದಿದ್ದರು, ಎಂದು ಕೆಲವರು ಹೇಳುತ್ತಿದ್ದರು.

2004ರಲ್ಲಿ ಮಹಾಪಾತ್ರ ರಾಜ್ಯಸಭೆಗೆ ಆಯ್ಕೆಯಾಗುವಲ್ಲಿ ನವೀನ್ ಪಟ್ನಾಯಕ್ ಪ್ರಮುಖ ಪಾತ್ರವಹಿಸಿದ್ದರು. ಬಿಜೆಪಿ ಒಂದು ಕಾಲದಲ್ಲಿ ಬಿಜೆಡಿಯ ಪ್ರಮುಖ ಮೈತ್ರಿ ಪಕ್ಷವಾಗಿದ್ದರೂ 2009ರಲ್ಲಿ ಬಿಜೆಪಿಯನ್ನು ದೂರಕ್ಕೆ ತಳ್ಳಿ ಹೋರಾಡುವಂತೆ ಮಹಾಪಾತ್ರ ನೀಡಿದ ಸಲಹೆ ಫಲ ಕಂಡಿತಲ್ಲದೆ ಬಿಜೆಪಿ 147ರಲ್ಲಿ 109 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.

ಆದರೆ 2009ರ ಚುನಾವಣೆಯ ನಂತರ ಇಬ್ಬರ ನಡುವಿನ ಸಂಬಂಧಗಳಲ್ಲಿ ಬಿರುಕು ಮೂಡಿದ್ದು ಮಹಾಪಾತ್ರ ಅವರಲ್ಲಿ ಸಲಹೆ ಕೇಳದಂತೆ ನವೀನ್ ತಮ್ಮ ಅಧಿಕಾರಿಗಳಲ್ಲಿ ಹೇಳಿದ್ದರು. 2012ರ ಪಂಚಾಯತ್ ಚುನಾವಣೆಯ ಸಂದರ್ಭ ನವೀನ್ ಅವರು ಒಬ್ಬಂಟಿಯಾಗಿಯೇ ಪ್ರಚಾರ ಕೈಗೊಂಡರಲ್ಲದೆ ರಾಷ್ಟ್ರಪತಿ ಹುದ್ದೆಗಾಗಿ ಪಿ.ಎ. ಸಂಗ್ಮಾ ಅವರಿಗೆ ಬೆಂಬಲ ಕೂಡ ಸೂಚಿಸಿದ್ದರು.

ಮೇ 2012ರಲ್ಲಿ ನವೀನ್ ಪಟ್ನಾಯಕ್ ಅವರು ಲಂಡನ್ ನಲ್ಲಿದ್ದಾಗ ಪಕ್ಷದಲ್ಲಿ ಬಂಡಾಯವೊಂದನ್ನು ಎಬ್ಬಿಸಿದ್ದರು ಮಹಾಪಾತ್ರ. ಆದರೆ 104 ಶಾಸಕರ ಪೈಕಿ ಈ ಒಡಿಶಾದ ಚಾಣಕ್ಯನಿಗೆ ಒಲಿದಿದ್ದು ಕೇವಲ 33 ಶಾಸಕರು ಮಾತ್ರ. ಹಿಂದಿರುಗಿ ಬಂದ ಪಟ್ನಾಯಕ್ ತಮ್ಮ ಒಂದು ಕಾಲದ ಆತ್ಮೀಯನನ್ನು ವಂಚಕ, ದ್ರೋಹಿ, ಬೆನ್ನಿಗೆ ಚೂರಿ ಹಾಕಿದವ ಎಂದು ಜರಿದರು.

ನವೀನ್ ಅವರ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗಗೊಳಿಸುವೆ ಎಂದ ಮಹಾಪಾತ್ರ ಬೆದರಿಸಿದ್ದರೂ ಅವರ ಒಡಿಶಾ ಜನ ಮೋರ್ಚ 2014ರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ನೆಲ ಕಚ್ಚಿತ್ತು. ಕಳೆದ ವರ್ಷ ಅವರ ರಾಜ್ಯಸಭಾ ಸದಸ್ಯತನದ ಅವಧಿ ಮುಗಿದ ನಂತರ ಅವರು ಮತ್ತಷ್ಟು ತೆರೆಮರೆಗೆ ಸರಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News