ಪ್ರಶಾಂತ ಕಿಶೋರ್ ಪತ್ತೆಗೆ ಐದು ಲಕ್ಷ ರೂ.ಬಹುಮಾನ!
ಲಕ್ನೋ,ಮಾ.20: ಖ್ಯಾತ ಚುನಾವಣಾ ತಂತ್ರಜ್ಞ ಪ್ರಶಾಂತ ಕಿಶೋರ್ ಅವರನ್ನು ಪತ್ತೆ ಹಚ್ಚಿ, ಪಕ್ಷದ ಕಾರ್ಯಕರ್ತರ ಮುಂದೆ ಹಾಜರುಪಡಿಸುವವರಿಗೆ ಐದು ಲಕ್ಷ ರೂ.ಬಹುಮಾನವನ್ನು ಘೋಷಿಸಿರುವ ಪೋಸ್ಟರ್‌ನ್ನು ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ರಾಜೇಶ ಸಿಂಗ್ ಅವರು ಲಕ್ನೋದಲ್ಲಿರುವ ಪಕ್ಷದ ಕಚೇರಿಯ ಹೊರಗೆ ಪ್ರದರ್ಶಿಸಿದ್ದಾರೆ.
ಕಾಂಗ್ರೆಸ್ ಇತ್ತೀಚಿಗೆ ನಡೆದ ನಿರ್ಣಾಯಕ ಪಂಚರಾಜ್ಯ ಚುನಾವಣೆಗಳಲ್ಲಿ ತನ್ನ ಗೆಲುವಿಗೆ ನೆರವಾಗಲು ಕಿಶೋರ್ ಅವರನ್ನು ನೇಮಕ ಮಾಡಿಕೊಂಡಿತ್ತು. ಆದರೆ ಉ.ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿನ ಬಳಿಕ ಕಿಶೋರ್ ಕೈಗೆ ಸಿಗುತ್ತಿಲ್ಲವೆನ್ನಲಾಗಿದೆ.
ಎಲ್ಲ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ತಾನು ಈ ಬಹುಮಾನ ಘೋಷಣೆಯ ಪೋಸ್ಟರ್‌ನ್ನು ಪ್ರದರ್ಶಿಸಿರುವುದಾಗಿ ಹೇಳಿದ ಸಿಂಗ್, ಈ ಬಾರಿ ಪಕ್ಷದ ಕಾರ್ಯಕರ್ತ ರಿಗೆ ಕೆಲವು ಉತ್ತರಗಳ ಅಗತ್ಯವಿದೆ ಎಂದರು.
ಕಳೆದೊಂದು ವರ್ಷದಿಂದಲೂ ನಾವು ಕಠಿಣ ಶ್ರಮವನ್ನು ವಹಿಸಿದ್ದೆವು. ಕಿಶೋರ್ ಹೇಳಿದ್ದನ್ನು ಚಾಚೂ ತಪ್ಪದೇ ಪಾಲಿಸಿದ್ದೆವು. ಅದು ಪಕ್ಷದ ಪಾಲಿಗೆ ಅತ್ಯುತ್ತಮ ಪರಿಣಾಮ ನೀಡುತ್ತದೆಂದು ನಾವು ಭಾವಿಸಿದ್ದೆವು. ಆದರೆ ಈಗ ನಮಗೆ ಉತ್ತರಗಳು ಬೇಕಾಗಿವೆ ಎಂದು ಅವರು ಹೇಳಿದರು.
ಆದರೆ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ರಾಜ್ ಬಬ್ಬರ್ ಅವರು ತಕ್ಷಣವೇ ಪೋಸ್ಟರ್‌ನ್ನು ತೆಗೆಯುವಂತೆ ಪಕ್ಷದ ಕಾರ್ಯಕರ್ತರಿಗೆ ನಿರ್ದೇಶ ನೀಡಿದ್ದಾರೆ.
ಚುನಾವಣಾ ಸೋಲಿಗೆ ಯಾರನ್ನೂ ದೂರಲು ಇನ್ನೂ ಕಾಲ ಪಕ್ವವಾಗಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.