ಆದಿತ್ಯನಾಥ್ ಮುಖ್ಯಮಂತ್ರಿ ಆದ ನಂತರ ಅಲಹಾಬಾದ್‌ನ 2 ಕಸಾಯಿಖಾನೆಗೆ ಬೀಗ
ಅಲಾಹಾಬಾದ್, ಮಾ. 20: ಅತ್ತ ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರತಿಜ್ಞೆ ಸ್ವೀಕರಿಸಿದ್ದರೆ ಇತ್ತ ಅಲಹಾಬಾದ್ ನಗರ ನಿಗಮವು ತಡರಾತ್ರೆ ವೇಳೆ ಅಲಹಾಬಾದ್‌ನ ಅಟಾಲ ಮತ್ತು ನೈನಿಯ ಮೊಹಲ್ಲಾಗಳಲ್ಲಿರುವ ಎರಡು ಕಸಾಯಿಖಾನೆಗಳಿಗೆ ಬೀಗ ಜಡಿದು ಸೀಲು ಹಾಕಿದ ಘಟನೆ ನಡೆದಿದೆ.
ಇವೆರಡು ಕಸಾಯಿಖಾನೆಗಳು ಪರವಾನಿಗೆ ಹೊಂದಿಲ್ಲ ಎನ್ನಲಾಗಿದೆ. ನಗರ ನಿಗಮದ ಪಶುವೈದ್ಯಾಧಿಕಾರಿ ಡಾ. ಧೀರಜ್ ಗೋಯಲ್ ಮೆಹತಾನೇತೃತ್ವದ ತಂಡ ಕರೇಲಿ ಪೊಲೀಸ್ ಠಾಣೆಯ ಪೊಲೀಸರನ್ನು ಕರೆದುಕೊಂಡು ಮೊದಲು ಅಟಾಲದ ಕಸಾಯಿ ಖಾನೆಗೆ ಹೋಗಿದ್ದಾರೆ. ಕಸಾಯಿಖಾನೆಯ ಗೇಟಿಗೆ ಬೀಗ ಹಾಕಿ ಸೀಲು ಜಡಿದಿದ್ದಾರೆ. ಈ ರೀತಿ ನೈನಿಯ ಕಸಾಯಿಖಾನೆಗೂ ಸೀಲು ಹಾಕಲಾಗಿದೆ.
ತಾನು ಅಧಿಕಾರಕ್ಕೆ ಬಂದರೆ ಅಕ್ರಮವಾಗಿ ಕಾರ್ಯವೆಸಗುವ ಕಸಾಯಿಖಾನೆಗಳನ್ನು ಮುಚ್ಚಿಸುವುದಾಗಿ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿ ಘೋಷಿಸಿತ್ತು. ಈ ಘೋಷಣೆಯನ್ನು ಬಿಜೆಪಿ ಸರಕಾರ ಜಾರಿಗೆ ತಂದಿದೆ. ಉತ್ತರಪ್ರದೇಶದಲ್ಲಿ 250ಕ್ಕೂ ಹೆಚ್ಚು ಪರವಾನಿಗೆ ರಹಿತ ಕಸಾಯಿಖಾನೆಗಳಿವೆ ಎನ್ನಲಾಗುತ್ತಿದೆ. ಇಲ್ಲಿ ಪ್ರತಿದಿನ ನೂರಾರು ಪ್ರಾಣಿಗಳನ್ನು ಮಾಂಸಕ್ಕಾಗಿ ಹತ್ಯೆ ಮಾಡಲಾಗುತ್ತಿದೆ.
ಸೀಲು ಹಾಕಿದ ಕಸಾಯಿಖಾನೆಯನ್ನು ತೆರೆದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.