×
Ad

ಉಪಹಾರ್ ದುರಂತ: ತಕ್ಷಣ ಶರಣಾಗುವಂತೆ ಅನ್ಸಾಲ್‌ಗೆ ಸುಪ್ರೀಂ ಖಡಕ್ ಸೂಚನೆ

Update: 2017-03-20 19:20 IST

ಹೊಸದಿಲ್ಲಿ,ಮಾ.20: 1997ರ ಉಪಹಾರ್ ಸಿನೆಮಾ ಅಗ್ನಿ ದುರಂತ ಪ್ರಕರಣದ ದೋಷಿ ಗೋಪಾಲ ಅನ್ಸಾಲ್‌ಗೆ ಯಾವುದೇ ಪರಿಹಾರವನ್ನೊದಗಿಸಲು ಸೋಮವಾರ ನಿರಾಕರಿಸಿದ ಸರ್ವೋಚ್ಚ ನ್ಯಾಯಾಲಯವು ತಕ್ಷಣವೇ ಶರಣಾಗುವಂತೆ ಮತ್ತು ಒಂದು ವರ್ಷದ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸುವಂತೆ ಆದೇಶಿಸಿದೆ.

ತಾನು ರಾಷ್ಟ್ರಪತಿಗಳಿಗೆ ದಯಾಭಿಕ್ಷೆ ಅರ್ಜಿಯನ್ನು ಸಲ್ಲಿಸಿರುವುದರಿಂದ ಶರಣಾಗತಿಗೆ ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಕೋರಿ ರಿಯಲ್ ಎಸ್ಟೇಟ್ ಉದ್ಯಮಿ ಅನ್ಸಾಲ್ (69) ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರ ನೇತೃತ್ವದ ಪೀಠವು ತಿರಸ್ಕರಿಸಿತು.

ರಾಷ್ಟ್ರಪತಿಗಳ ಬಳಿ ಬಾಕಿಯಾಗಿರುವ ದಯಾಭಿಕ್ಷೆ ಅರ್ಜಿಯ ತ್ವರಿತ ಇತ್ಯರ್ಥಕ್ಕೆ ನಿರ್ದೇಶ ಕೋರಿ ಅನ್ಸಾಲ್ ಪರ ವಕೀಲ ರಾಮ ಜೇಠ್ಮಲಾನಿ ಅವರ ಮನವಿಯನ್ನೂ ತಿರಸ್ಕರಿಸಿದ ಪೀಠವು, ಅದು ಸಂಪೂರ್ಣವಾಗಿ ರಾಷ್ಟ್ರಪತಿಗಳ ಅಧಿಕಾರ ವ್ಯಾಪ್ತಿಗೆ ಸೇರಿದೆ ಮತ್ತು ತಾನು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ತಿಳಿಸಿತು.

ಅನ್ಸಾಲ್ ತನಗೆ ವಿಧಿಸಲಾಗಿರುವ ಒಂದು ವರ್ಷದ ಶಿಕ್ಷೆಯ ಪೈಕಿ ನಾಲ್ಕೂವರೆ ತಿಂಗಳುಗಳನ್ನು ಈ ಮೊದಲು ಜೈಲಿನಲ್ಲಿ ಕಳೆದಿದ್ದಾರೆ.

1997,ಜೂ.13ರಂದು ಅನ್ಸಾಲ್ ಸೋದರರ ಒಡೆತನದ ಉಪಹಾರ್ ಚಿತ್ರಮಂದಿರದಲ್ಲಿ ‘ಬಾರ್ಡರ್ ’ಚಿತ್ರ ಪ್ರದರ್ಶನದ ವೇಳೆ ಸಂಭವಿಸಿದ್ದ ಭೀಕರ ಅಗ್ನಿ ದುರಂತದಲ್ಲಿ 59 ಜನರು ಮೃತಪಟ್ಟಿದ್ದು, ಬಳಿಕ ಸಂಭವಿಸಿದ್ದ ನೂಕುನುಗ್ಗಲಿನಲ್ಲಿ 100ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

ಅನ್ಸಾಲ್ ಸೋದರ ಸುಶೀಲ್ ಅನ್ಸಾಲ್(76) ಕೂಡ ಪ್ರಕರಣದಲ್ಲಿ ದೋಷಿಯಾಗಿದ್ದು, ಮೇ 9ರಂದು ನ್ಯಾಯಾಲಯವು ಅವರ ವೃದ್ಧಾಪ್ಯ ಸಂಬಂಧಿ ಸಮಸ್ಯೆಗಳನ್ನು ಪರಿಗಣಿಸಿ ಶಿಕ್ಷೆಯನ್ನು ಈಗಾಗಲೇ ಅನುಭವಿಸಿರುವ ಜೈಲುವಾಸಕ್ಕೆ ಸೀಮಿತಗೊಳಿಸಿ ಬಿಡುಗಡೆ ಮಾಡಿತ್ತು. ಸೋದರರಿಗೆ ತಲಾ 30 ಕೋ.ರೂ. ದಂಡವನ್ನು ವಿಧಿಸಿರುವ ನ್ಯಾಯಾಲಯವು ಅದನ್ನು ಟ್ರಾಮಾ ಸೆಂಟರ್ ಸ್ಥಾಪನೆಗೆ ಮಾತ್ರ ಬಲಸುವಂತೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News