ಮನಪಾದಲ್ಲೀಗ ಪಾರದರ್ಶಕ ಮಂತ್ರ, 50 ವರ್ಷಗಳಲ್ಲಿ 285 ಶಾಸಕರ ಅಮಾನತು

Update: 2017-03-20 19:05 GMT

ಮನಪಾದಲ್ಲಿನ್ನು ಇ-ಫೈಲ್, ಆನ್‌ಲೈನ್ ಪೇಮೆಂಟ್...

ಇದೀಗ ಮುಂಬೈ ಮಹಾನಗರ ಪಾಲಿಕೆ ಕಮಿಷನರ್ ಅಜಯ್ ಮೆಹ್ತಾ 'ಪಾರದರ್ಶಕ' ಮಂತ್ರ ಪಠಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮನಪಾದ ಹಲವು ಸೌಲಭ್ಯಗಳನ್ನು ಆನ್‌ಲೈನ್ ಮುಖಾಂತರವೇ ಆರಂಭಿಸಲಾಗುವುದಂತೆ ಮತ್ತು ನೌಕರರ ಹಾಜರಿ ವ್ಯವಸ್ಥೆ ಕೂಡಾ ಬಯೋಮೆಟ್ರಿಕ್ ರೀತಿಯಲ್ಲಿ ಇರಲಿದೆಯಂತೆ. ಕೆಲವು ದಿನಗಳ ಹಿಂದೆಯೇ ಮಹಾನಗರ ಪಾಲಿಕೆ ತನ್ನ ವೆಬ್‌ಸೈಟ್‌ನ್ನು ಅಪ್‌ಡೇಟ್ ಮಾಡಿದೆ. ಜನರು ಮನೆಯಲ್ಲೇ ಕುಳಿತು ಕೆಲವು ಸೌಲಭ್ಯಗಳಿಗಾಗಿ ಆನ್‌ಲೈನ್ ಪೇಮೆಂಟ್ ಕೂಡಾ ಮಾಡಬಹುದಾಗಿದೆ. ಮನಪಾ ಬಜೆಟ್‌ನಲ್ಲಿ ಐ.ಟಿ.ಗೆ ಸಂಬಂಧಿಸಿದ ಸೌಲಭ್ಯಗಳಿಗೆ ಬೇಕಾದ ಹಣಕಾಸನ್ನು ಕಾಯ್ದಿರಿಸಲಾಗುತ್ತದೆಯಂತೆ.

ಹೀಗಾಗಿ ಭವಿಷ್ಯದಲ್ಲಿ ಮಹಾನಗರ ಪಾಲಿಕೆಯಲ್ಲಿ ಫೈಲುಗಳ ಹೊರೆ ಕಡಿಮೆಯಾಗಬಹುದಾಗಿದೆ. ಆಡಳಿತವು ಎಲ್ಲಾ ಕಡತಗಳನ್ನು ಆನ್‌ಲೈನ್ ಮಂಜೂರು ನೀಡುವ ಪ್ರಕ್ರಿಯೆ ಕೈಗೊಂಡಿದೆ. ಮುಂದಿನ ಮೇ ತಿಂಗಳಿನಿಂದ ಇದು ಆರಂಭವಾಗುವ ಸಾಧ್ಯತೆಗಳಿವೆ. ಅಲ್ಲದೆ ಮಹಾನಗರ ಪಾಲಿಕೆಯ ಎಲ್ಲಾ ಸಮಿತಿಗಳ ಕೆಲಸ ಕಾರ್ಯಗಳ ಅಜೆಂಡಾ ಕೂಡಾ ಆನ್‌ಲೈನ್ ಮುಖಾಂತರ ಮಾಡಲು ತಯಾರಿ ನಡೆದಿದೆ. ವರ್ತಮಾನದಲ್ಲಿ ಸಮಿತಿ ಸದಸ್ಯರ ಮನೆಗಳಿಗೆ ಮನಪಾ ನೌಕರರು ಅಜೆಂಡಾ ಹಿಡಿದು ತೆರಳುತ್ತಾರೆ ಹಾಗೂ ಇದರಿಂದ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಪೇಪರ್ ಕೂಡಾ ದುರುಪಯೋಗವಾಗುತ್ತಿದೆ. ಮಹಾನಗರ ಪಾಲಿಕೆಯ ಎಲ್ಲಾ ಸೌಲಭ್ಯಗಳಿಗಾಗಿ ಶುಲ್ಕ ಪಾವತಿಯನ್ನು ಕೂಡಾ ಆನ್‌ಲೈನ್ ಮುಖಾಂತರ ಆರಂಭಿಸುವ ತಯಾರಿ ನಡೆದಿದೆ. ಇದರಿಂದ ಜನರಿಗೆ ವಾರ್ಡ್ ಆಫೀಸ್ ತನಕ ಬರುವ ಅಗತ್ಯವಿರುವುದಿಲ್ಲ.

ಮುಂಬೈ ಮಹಾನಗರ ಪಾಲಿಕೆಯಲ್ಲಿ ಎಪ್ರಿಲ್15ರಿಂದ ಬಯೋಮೆಟ್ರಿಕ್ ಹಾಜರಿ ಪದ್ಧತಿ ಆರಂಭವಾಗಲಿದೆ. ಮುಂಬೈ ಮನಪಾ ದಲ್ಲಿ ಒಂದು ಲಕ್ಷಕ್ಕೂ ಅಧಿಕ ನೌಕರರಿದ್ದಾರೆ. ಇವರಲ್ಲಿ 40 ಸಾವಿರದಷ್ಟು ಜನರ ಡೇಟಾ ಪಡೆಯಲಾಗಿದೆ. ಎಲ್ಲಾ ನೌಕರರ ಡೇಟಾ ಪಡೆದ ನಂತರ ಸೇವೆ ಆರಂಭವಾಗಲಿದೆ.

''ನಾವು ಜನಸಾಮಾನ್ಯರನ್ನು ಗಮನದಲ್ಲಿರಿಸಿ ಪೂರ್ತಿ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರಯತ್ನಿಸಿದ್ದೇವೆ. ಇದರಿಂದ ಪ್ರತಿಯೊಬ್ಬರಿಗೂ ಸುಲಭವಾಗಿ ಎಲ್ಲಾ ಸೌಲಭ್ಯಗಳ ಮಾಹಿತಿಯನ್ನು ಪಡೆಯಬಹುದಾಗಿದೆ ಎನ್ನುತ್ತಾರೆ'' ಕಮಿಷನರ್ ಅಜಯ್ ಮೆಹ್ತಾ.
* * *

ಪೆಂಗ್ವಿನ್ ವೀಕ್ಷಣೆಗೆ ನೂರು ರೂಪಾಯಿ!
 ದೇಶದ ಮಹಾನಗರಪಾಲಿಕೆಗಳಲ್ಲಿ ಪೆಂಗ್ವಿನ್ ಇರುವ ಏಕೈಕ ಮಹಾನಗರಪಾಲಿಕೆ ಎಂದರೆ ಮುಂಬೈ ಮನಪಾ. ಕಳೆದ ವರ್ಷ ವಿದೇಶದಿಂದ ತರಿಸಲಾದ 8 ಪೆಂಗ್ವಿನ್‌ಗಳಲ್ಲಿ ಒಂದು ಪೆಂಗ್ವಿನ್ ಸಾವನ್ನಪ್ಪಿದ ನಂತರ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಭೈಕಲಾ ರಾಣಿಬಾಗ್ ಉದ್ಯಾನ, ಆನಂತರ ಸಾರ್ವಜನಿಕರಿಗೆ ಪೆಂಗ್ವಿನ್ ವೀಕ್ಷಣೆಯನ್ನು ನಿರಾಕರಿಸಿತ್ತು. ಇದರ ಗುತ್ತಿಗೆಯನ್ನು ಯಾರಿಗೆ ನೀಡಲಾಗಿತ್ತೋ ಅವರೂ ವಿವಾದಕ್ಕೆ ಸಿಲುಕಿದ್ದರು. ಹೀಗಾಗಿ ಪೆಂಗ್ವಿನ್ ವೀಕ್ಷಣೆಯ ನಿರೀಕ್ಷೆಯಲ್ಲಿದ್ದ ಪ್ರವಾಸಿಗರಿಗೆ ನಿರಾಶೆಯಾಗಿತ್ತು.

ಇದೀಗ ಪೆಂಗ್ವಿನ್ ಎನ್‌ಕ್ಲೋಸರ್‌ನ ಜೊತೆಗೆ ರಾಣಿಬಾಗ್ ಪ್ರಾಣಿ ಸಂಗ್ರಹಾಲಯನ್ನು ಹೊಸರೀತಿಯಲ್ಲಿ ನಿರ್ಮಿಸಲಾಗಿದ್ದು ಜನರ ವೀಕ್ಷಣೆಗೆ ಮಾರ್ಚ್ 17ರಿಂದ ಬಿಟ್ಟುಕೊಡಲಾಗಿದೆ. ಮಾರ್ಚ್ 31ರ ತನಕ ಇಲ್ಲಿಗೆ ಉಚಿತ ಪ್ರವೇಶವಿದ್ದು, ಎಪ್ರಿಲ್ 1ರಿಂದ ಶುಲ್ಕ ಇರುತ್ತದೆ. ಎಪ್ರಿಲ್ 1ರಿಂದ ಪೆಂಗ್ವಿನ್ ನೋಡಲು ಬರುವ ವಯಸ್ಕರಿಗೆ 100 ರೂಪಾಯಿ ಮತ್ತು ಮಕ್ಕಳಿಗೆ 50 ರೂಪಾಯಿ ಪ್ರವೇಶ ಶುಲ್ಕ ಇದೆ. ಇದರಲ್ಲಿ 50 ರೂಪಾಯಿ ರಾಣಿಬಾಗ್ ಉದ್ಯಾನ ಪ್ರವೇಶಕ್ಕೆ ಮತ್ತು 50 ರೂಪಾಯಿ ಪೆಂಗ್ವಿನ್ ನೋಡುವುದಕ್ಕಂತೆ. ಈ ವ್ಯವಸ್ಥೆಗೆ ಸಂಬಂಧಿಸಿದ ಅಧಿಕಾರಿಯ ಅನುಸಾರ ಪ್ರತೀದಿನ ಸುಮಾರು 6ರಿಂದ 7ಸಾವಿರ ಜನರಿಗೆ ಪ್ರವೇಶ ನೀಡಲಾಗುತ್ತದೆ. (ಒಂದು ಸಲಕ್ಕೆ 100 ಮಂದಿಯಂತೆ). ಈ ಪೆಂಗ್ವಿನ್‌ಗಳನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗಿದೆ. ಪ್ರತೀದಿನ ಬೆಳಗ್ಗೆ 9ರಿಂದ ಸಂಜೆ 6ರ ತನಕ ವೀಕ್ಷಿಸಬಹುದಾಗಿದ್ದು ಬುಧವಾರ ರಜೆ ಇದೆ. ಮುಂಬೈಗೆ ಬರುವ ಪ್ರವಾಸಿಗರು ಇನ್ನು ಮುಂದೆ ಪೆಂಗ್ವಿನ್ ವೀಕ್ಷಿಸಬಹುದಾಗಿದೆ. ರಾಣಿಬಾಗ್‌ನಲ್ಲಿ ಪ್ರವೇಶಕ್ಕಾಗಿ ಸದ್ಯ ವಯಸ್ಕರಿಗೆ 5 ರೂಪಾಯಿ ಮತ್ತು ಮಕ್ಕಳಿಗೆ 2 ರೂಪಾಯಿ ಪ್ರವೇಶ ಶುಲ್ಕವಿದೆ. ಹೊಸ ಪ್ರಸ್ತಾವದ ಅನುಸಾರ ವಯಸ್ಕರಿಗೆ 50 ರೂ. ಮತ್ತು ಮಕ್ಕಳಿಗೆ 25 ರೂ. ನೀಡಬೇಕಾಗುತ್ತದೆ. ಆದರೆ ಪೆಂಗ್ವಿನ್ ವೀಕ್ಷಿಸಲು ಮತ್ತೆ ಇಷ್ಟೇ ಶುಲ್ಕ ನೀಡಬೇಕಾಗಿದೆ.
''ಈಗ ಪ್ರತೀದಿನ ಸರಾಸರಿ 5 ಸಾವಿರ ಜನರು ಇಲ್ಲಿಗೆ ಬರುತ್ತಾರೆ. ಶನಿವಾರ, ರವಿವಾರದಂದು ಸುಮಾರು 15 ಸಾವಿರ ಮಂದಿ ಬರುತ್ತಿದ್ದಾರೆ ಎನ್ನುತ್ತಾರೆ ರಾಣಿಬಾಗ್‌ನ ಡೈರೆಕ್ಟರ್ ಡಾ. ಸಂಜಯ್ ತ್ರಿಪಾಠಿ.


* * *

ಟಿಕೆಟ್ ರಹಿತ ಪ್ರಯಾಣಿಕರು ಇನ್ನು ಎಟಿಎಂನತ್ತ
ರೈಲ್ವೆ ಆಡಳಿತವು ಟಿಕೆಟ್ ರಹಿತ ಪ್ರಯಾಣಿಕರ ವಿರುದ್ಧ ಕಾಲಕಾಲಕ್ಕೆ ವಿಶೇಷ ಅಭಿಯಾನ ನಡೆಸಿ ದಂಡ ವಸೂಲಿ ಮಾಡುತ್ತಾ ಬಂದಿದೆ. ಹಾಗಿದ್ದೂ ಟಿಕೆಟ್ ಪಡೆಯದೆ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಇಂತಹ ಪ್ರಯಾಣಿಕರು ತಮ್ಮ 'ಅಭ್ಯಾಸ'ವನ್ನು ಬಿಡಲು ಸಿದ್ಧರಿಲ್ಲ! ಒಂದು ವೇಳೆ ಟಿ.ಸಿ. ಹಿಡಿದರೆ ಹತ್ತಾರು ನೆಪ ಹೇಳಿ ದಂಡ ಕಟ್ಟುವುದರಿಂದ ಪಾರಾಗಲು ಪ್ರಯತ್ನಿಸುತ್ತಾರೆ. ಆದರೆ ಇನ್ನು ಇಂತಹ ಟಿಕೆಟ್ ರಹಿತ ಪ್ರಯಾಣಿಕರು ಒಂದು ವೇಳೆ ಸಿಕ್ಕಿ ಬಿದ್ದರೆ ದಂಡ ವಸೂಲಿಗಾಗಿ ಟಿ.ಸಿ.ಗಳು ಅವರನ್ನು ಎಟಿಎಂ ತನಕ ಒಯ್ಯಲಿದ್ದಾರೆ.

 ಈ ಹಿಂದೆ ಟಿಕೆಟ್ ರಹಿತ ಪ್ರಯಾಣಿಕರು ದಂಡ ವಸೂಲಿಗಾಗಿ ಬರುವ ಟಿ.ಸಿ. ಬಳಿ ತಮ್ಮಲ್ಲಿನ ಏನಾದರೂ ವಸ್ತು ಇರಿಸಿ ದಂಡದ ಹಣ ತರುವುದಾಗಿ ಹೇಳಿ ಹೋಗುತ್ತಿದ್ದರು. ಇನ್ನು ಕೆಲವು ಪ್ರಯಾಣಿಕರು ಟಿ.ಸಿ. ಸಾಮಾನು ಜಪ್ತಿ ಮಾಡಿದರೆಂದು ಟಿ.ಸಿ. ವಿರುದ್ಧವೇ ಸುಳ್ಳು ಆರೋಪ ಮಾಡುವುದೂ ಇದೆ.

ಇದೀಗ ಎಲ್ಲಾ ಆರೋಪಗಳಿಂದ ಮುಕ್ತರಾಗಲು ಟಿ.ಸಿ.ಗಳು ಟಿಕೆಟ್ ರಹಿತ ಪ್ರಯಾಣಿಕರನ್ನು ಎಟಿಎಂ ತನಕ ಒಯ್ಯಲಿದ್ದಾರೆ. ಇಂತಹ ಪ್ರಕರಣ ಈಗಾಗಲೇ ಮುಂಬೈ ಸೆಂಟ್ರಲ್‌ನಲ್ಲಿ ಕಂಡು ಬಂದಿದೆ. ನಾಲ್ವರು ಟಿಕೆಟ್ ರಹಿತ ಪ್ರಯಾಣಿಕರನ್ನು ಟಿ.ಸಿ.ಯು ಎಟಿಎಂ ತನಕ ಕರೆದೊಯ್ದದ್ದು ಸುದ್ದಿಯಾಗಿದೆ. ಈಗ ಟಿಕೆಟ್ ರಹಿತ ಪ್ರಯಾಣಿಕರ ಕಿಸೆಯಲ್ಲಿ ಎಟಿಎಂ ಕಾರ್ಡ್ ಇದ್ದರೆ ದಂಡ ವಸೂಲಿ ಗ್ಯಾರಂಟಿ.
* * *

ಈವರೆಗೆ 285 ಶಾಸಕರ ಅಮಾನತು
ಮಹಾರಾಷ್ಟ್ರ ವಿಧಾನ ಸಭೆಯ ಇತಿಹಾಸದಲ್ಲಿ ಈ ವರೆಗೆ (ಕಳೆದ 50 ವರ್ಷಗಳಲ್ಲಿ) 285 ಶಾಸಕರನ್ನು ಅಮಾನತು ಮಾಡಲಾಗಿದೆ. ಮೊದಲ ಅಮಾನತು ಘಟನೆ ಆಗಸ್ಟ್ 13, 1964ರಂದು ನಡೆದಿತ್ತು. ಫಾರ್ವರ್ಡ್ ಬ್ಲಾಕ್‌ನ ಶಾಸಕ ಜಾಂಬವಂತ್ ರಾವ್ ಧೋಟೆ ಅವರನ್ನು ಮೈಕ್ ಮುರಿದು, ಪೇಪರ್ ವೈಟ್‌ನ್ನು ಸಭಾಗೃಹದಲ್ಲಿ ಎಸೆದ ಕಾರಣ ಅಮಾನತು ಮಾಡಲಾಗಿತ್ತು. ಅನಂತರ ಮಹಾರಾಷ್ಟ್ರ -ಕರ್ನಾಟಕ ಗಡಿ ಪ್ರಶ್ನೆಯ ವಿಷಯವಾಗಿ ಸಂಯುಕ್ತ ಮಹಾರಾಷ್ಟ್ರ ಸಮಿತಿ ಮತ್ತು ಸಂಯುಕ್ತ ಸೋಶಲಿಸ್ಟ್ ಪಾರ್ಟಿಯ 20 ಶಾಸಕರನ್ನು 31 ಆಗಸ್ಟ್ 1966ರಂದು ಆರು ದಿನಗಳಿಗಾಗಿ ಅಮಾನತು ಮಾಡಲಾಗಿತ್ತು.

ಹೀಗೆಯೇ ನವಂಬರ್ 8, 1967ರಂದು 43 ಶಾಸಕರನ್ನು 10 ದಿನಗಳಿಗಾಗಿ ಅಮಾನತು ಮಾಡಲಾಗಿತ್ತು.
ಆನಂತರ 25 ಮತ್ತು 27 ಜುಲೈ 2000ದಂದು ಬಾಳಾ ಸಾಹೇಬ ಠಾಕ್ರೆಯ ಬಂಧನಕ್ಕೆ ಸಂಬಂಧಿಸಿ ವಿಧಾನಸಭೆ ಸದನದಲ್ಲಿ ಗಲಾಟೆ ಮಾಡಿದ ಕಾರಣ ಶಿವಸೇನೆಯ 13 ಶಾಸಕರನ್ನು ಆರು ತಿಂಗಳಿನಿಂದ ಒಂದು ವರ್ಷದ ತನಕ ಅಮಾನತು ಮಾಡಲಾಯಿತು.

ನಂತರ ಸಮಾಜವಾದಿ ಪಾರ್ಟಿಯ ಶಾಸಕ ಅಬೂ ಆಸಿಂ ಆಜ್ಮಿ ಮರಾಠಿಯಲ್ಲಿ ಶಪಥ ಗ್ರಹಣ ನಿರಾಕರಿಸಿದ್ದಕ್ಕೆ ಮಾರಾಮಾರಿ ನಡೆದಿದ್ದು ನಾಲ್ವರು ಮನಸೇ ಶಾಸಕರನ್ನು ನಾಲ್ಕು ವರ್ಷಕ್ಕಾಗಿ ಅಮಾನತು ಮಾಡಲಾಗಿತ್ತು. ಅನಂತರ ಇವನ್ನೆಲ್ಲ ವಾಪಸು ಪಡೆಯಲಾಯಿತು. ಹೀಗೆ ಹಲವು ಘಟನೆಗಳು ನಡೆದಿವೆ.
ಇದೀಗ ಮಾರ್ಚ್ 9, 2017ರಂದು ಸೈನಿಕರ ಪತ್ನಿಯರನ್ನು ನಿಂದಿಸಿದ ಕ್ಕ್ಕಾಗಿ ಶಾಸಕ ಪ್ರಶಾಂತ ಪರಿಚಾರಕ ಅವರನ್ನು ಒಂದೂವರೆ ವರ್ಷಕ್ಕಾಗಿ ಅಮಾನತು ಮಾಡಲಾಗಿದೆ. ಈವರೆಗೆ ಐದು ದಶಕಗಳಲ್ಲಿ 29 ಘಟನೆಗಳಲ್ಲಿ ಒಟ್ಟು 285 ಶಾಸಕರನ್ನು ಅಮಾನತು ಮಾಡಲಾಗಿದೆ.


* * *

ಸೈಬರ್ ಅಪರಾಧ ಹೆಚ್ಚಿದ ಕಿರಿಕಿರಿ
ಕಳೆದ ಹಲವು ವರ್ಷಗಳಿಂದ ಭಾರತದಲ್ಲಿ ಸೋಶಿಯಲ್ ಮೀಡಿಯಾ ವನ್ನು ಬಳಸಿಕೊಳ್ಳುವವರ ಸಂಖ್ಯೆ ವಿಪರೀತವಿದೆ. ಜೊತೆಗೆ ಸೈಬರ್ ಅಪರಾಧಗಳ ಸಂಖ್ಯೆಯಲ್ಲೂ ಭಾರೀ ವೃದ್ಧಿಯಾಗಿದೆ. ಮುಂಬೈಯಲ್ಲಿ ಈ ವರ್ಷ 2017 ರ ಮೊದಲ ಎರಡು ತಿಂಗಳಲ್ಲಿನ ಸೈಬರ್ ಅಪರಾಧಗಳನ್ನು ಗಮನಿಸಿದರೆ ಒಟ್ಟು 1,564 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಅಶ್ಲೀಲ ಸಂದೇಶ ಕಳುಹಿಸುವುದರಿಂದ ಹಿಡಿದು ಫೇಸ್‌ಬುಕ್ ಪ್ರೊಪೈಲ್ ಅಥವಾ ಡಾಟಾ ಹ್ಯಾಕ್ ಮಾಡಿರುವುದು, ಆರ್ಥಿಕ ಅಪರಾಧಗಳನ್ನು ನಡೆಸಿರುವುದು, ಆನ್‌ಲೈನ್ ಶಾಪಿಂಗ್ ಅಥವಾ ಟ್ರಾಂಜೆಕ್ಷನ್ ಪ್ರಕರಣಗಳು ಒಳಗೊಂಡಿವೆ. ಆದರೆ ಕೇವಲ ಶೇ. 20 ಶೇ ಪ್ರಕರಣಗಳನ್ನಷ್ಟೇ ಪೊಲೀಸರು ಬಗೆಹರಿಸಿದ್ದಾರೆ.

ಸೈಬರ್ ಕ್ರೈಮ್‌ನ ಗ್ರಾಫ್ ಏರಿರುವುದನ್ನು ಗಮನಿಸಿದ ರಾಜ್ಯ ಸರಕಾರವು ಬಹಳಷ್ಟು ಹಿಂದೆಯೇ ಮುಂಬೈಯ ಪ್ರತೀ ವಲಯಕ್ಕಾಗಿ ಪ್ರತ್ಯೇಕ ಪ್ರತ್ಯೇಕ ಸೈಬರ್ ಪೊಲೀಸ್ ಠಾಣೆಗಳನ್ನು ಸ್ಥಾಪನೆ ಮಾಡುವ ತೀರ್ಮಾನ ಕೈಗೊಂಡಿತ್ತು. ಆದರೆ ಈ ತನಕವೂ ಇದರ ಪ್ರಕ್ರಿಯೆ ಕೂಡಾ ಆರಂಭವಾಗಿಲ್ಲ. ಮುಂಬೈಯಲ್ಲಿ ಐದು ವಲಯಗಳಿವೆ. ಆದರೆ ಸೈಬರ್ ಪೊಲೀಸ್ ಠಾಣೆ ಕೇವಲ ಒಂದೇ ಇದೆ. ಇದರಲ್ಲೂ ಪೊಲೀಸರ ಸಂಖ್ಯೆ ಬಹಳ ಕಡಿಮೆ ಇದೆ. ಇಲ್ಲಿ ಎಷ್ಟೊಂದು ಕೇಸ್‌ಗಳು ಬರುತ್ತಿವೆ ಎಂದರೆ ತಲೆ ಎತ್ತಲೂ ಪೊಲೀಸರಿಗೆ ಬಿಡುವು ಸಿಗುವುದಿಲ್ಲ. ಸರಕಾರವು ಇನ್ನು ನಾಲ್ಕು ಸೈಬರ್ ಪೊಲೀಸ್ ಠಾಣೆ ಸ್ಥಾಪನೆ ಮಾಡುವ ಘೋಷಣೆ ಮಾಡಿದೆ. ಆದರೆ ಇದೂ ಸದ್ಯಕ್ಕೆ ತಣ್ಣಗೆ ಇದೆ.

Writer - ಶ್ರೀನಿವಾಸ ಜೋಕಟ್ಟೆ

contributor

Editor - ಶ್ರೀನಿವಾಸ ಜೋಕಟ್ಟೆ

contributor

Similar News