ಪಿತೃತ್ವ ಪ್ರಕರಣ: ಧನುಷ್ ದೇಹದ ಮಚ್ಚೆ ಅಳಿಸಿರುವುದು ವೈದ್ಯಕೀಯ ವರದಿಯಲ್ಲಿ ಬಹಿರಂಗ

Update: 2017-03-21 08:56 GMT

ಚೆನ್ನೈ, ಮಾ.21: ತಮಿಳು ನಟ ಧನುಷ್ ಅವರ ಪಿತೃತ್ವ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ಹೋರಾಟ ಸಂಕೀರ್ಣ ಸ್ಥಿತಿಗೆ ತಲುಪಿದ್ದು, ನಟ ಲೇಸರ್ ತಂತ್ರಜ್ಞಾನದ ಮೂಲಕ ದೇಹದಲ್ಲಿರುವ ಮಚ್ಚೆಯನ್ನು ಅಳಿಸಿಹಾಕಿರುವ ಸಾಧ್ಯತೆಯಿದೆ ಎಂದು ವೈದ್ಯಕೀಯ ವರದಿಯಲ್ಲಿ ಬಹಿರಂಗವಾಗಿದೆ.

ಖ್ಯಾತ ನಟ ಧನುಷ್‌ಗೆ ಸಂಬಂಧಿಸಿದ ಪಿತೃತ್ವ ಪ್ರಕರಣಕ್ಕೆ ಸಂಬಂಧಿಸಿ ಮದ್ರಾಸ್ ನ್ಯಾಯಾಲಯ ಇಂದು ವೈದ್ಯಕೀಯ ವರದಿಯನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದೆ.

 ಧನುಷ್ ತಮ್ಮ ಮಗ. ಆತ ಬಾಲ್ಯದಲ್ಲೇ ಮನೆ ಬಿಟ್ಟು ಓಡಿ ಹೋಗಿದ್ದಾನೆ. ನಮಗೆ ವಯಸ್ಸಾಗಿದ್ದು, ನಮ್ಮ ಖರ್ಚಿಗೆ ಪ್ರತಿ ತಿಂಗಳು 65,000 ರೂ. ನೀಡಬೇಕೆಂದು ಆಗ್ರಹಿಸಿ ಮದುರೈನ ವೃದ್ಧ ದಂಪತಿ ಕದಿರೇಶನ್-ಮೀನಾಕ್ಷಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಮಾ.2 ರಂದು ಹೈಕೋರ್ಟ್‌ನ ಮದುರೈ ಪೀಠದ ಮುಂದೆ ಜಸ್ಟಿಸ್ ಪಿ.ಎನ್. ಪ್ರಕಾಶ್ ಅವರು ಧನುಷ್‌ರನ್ನು ಪರೀಕ್ಷಿಸಿದ್ದು, ರಾಜಾಜಿ ಸರಕಾರಿ ಆಸ್ಪತ್ರೆಯ ಡೀನ್ ವೈರಮುತ್ತು ರಾಜು ಹಾಗೂ ಮದುರೈ ವೈದ್ಯಕೀಯ ಕಾಲೇಜಿನ ಪ್ರಿನ್ಸಿಪಾಲ್ ಮೀನಾಕ್ಷಿ ಸುಂದರಂ ವೈದ್ಯಕೀಯ ವರದಿಯನ್ನು ಸಲ್ಲಿಸಿದ್ದರು.

ವೃದ್ಧ ದಂಪತಿಯ ಬೇಡಿಕೆಯ ಮೇರೆಗೆ ಫೆ.28 ರಂದು ನ್ಯಾಯಾಲಯವು ಧನುಷ್‌ರ ಗುರುತು ಪತ್ತೆಗೆ ವೈದ್ಯಕೀಯ ತಪಾಸಣೆ ನಡೆಸುವಂತೆ ನಿರ್ದೇಶಿಸಿತ್ತು.

 ‘‘ಧನುಷ್‌ರನ್ನು ಹಗಲುಹೊತ್ತಿನಲ್ಲಿ ಪರೀಕ್ಷಿಸಲಾಗಿದ್ದು, ಟಾರ್ಚ್‌ಲೈಟ್‌ನ್ನು ಬಳಸಲಾಗಿದ್ದು, ನೀರು ಹಾಗೂ ಸ್ಪಿರಿಟ್‌ನ್ನು ಬಳಸಲಾಗಿತ್ತು. ಎಡ ಕೊರಳುಪಟ್ಟಿ ಹಾಗೂ ಎಡ ಮಣಿಗಂಟಿನಲ್ಲಿ ಯಾವುದೇ ಮಚ್ಚೆ ಇರಲಿಲ್ಲ.ಲೇಸರ್ ತಂತ್ರಜ್ಞಾನ ಬಳಸಿ ಚಿಕ್ಕ ಮಚ್ಚೆಯನ್ನು ಸಂಪೂರ್ಣ ಅಳಿಸಿಹಾಕಿರುವ ಸಾಧ್ಯತೆಯಿದೆ. ಥರ್ಮೊ ಸ್ಕೋಪ್‌ನಿಂದ ದೊಡ್ಡ ಮಚ್ಚೆಯನ್ನು ಅಳಿಸಿಹಾಕಬಹುದು’’ ಎಂದು ವೈದ್ಯಕೀಯ ವರದಿಯಲ್ಲಿ ಕಂಡುಬಂದಿದೆ.

ವೈದ್ಯಕೀಯ ವರದಿಯನ್ನು ಓದಿದ ನ್ಯಾಯಮೂರ್ತಿ ಪ್ರಕಾಶ್ ವಿಚಾರಣೆಯನ್ನು ಮಾ.27ಕ್ಕೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News