×
Ad

ಮತಪತ್ರಗಳ ಮೂಲಕ ಚುನಾವಣೆ ನಡೆಸಿ : ಬಿಜೆಪಿಗೆ ಮಾಯಾವತಿ ಸವಾಲು

Update: 2017-03-21 14:29 IST

ಹೊಸದಿಲ್ಲಿ,ಮಾ.21: ಜನಾದೇಶದ ಬಗ್ಗೆ ವಿಶ್ವಾಸವಿದ್ದರೆ ಮತಪತ್ರಗಳನ್ನು ಬಳಸಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ನಡೆಸುವಂತೆ ಮಂಗಳವಾರ ಬಿಜೆಪಿಗೆ ಸವಾಲು ಹಾಕಿದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು, ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ಬಳಕೆಯನ್ನು ರದ್ದುಗೊಳಿಸಲು ಕಾನೂನೊಂ ದನ್ನು ತರುವಂತೆ ಆಗ್ರಹಿಸಿದರು.

ರಾಜ್ಯಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಅವರು, ಇತ್ತೀಚಿಗಷ್ಟೇ ಮುಗಿದ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ವಿಧಾನಸಭೆ ಚುನಾವಣೆಗಳು ಜನರ ತೀರ್ಪಲ್ಲ, ಅವು ಇವಿಎಂಗಳ ತೀರ್ಪುಗಳಾಗಿವೆ ಎಂದರು.

 ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಇವಿಎಂಗಳನ್ನು ಬಳಸುವುದರಿಂದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಸಾಧ್ಯವಿಲ್ಲ ಎಂದು ಹಿರಿಯ ಬಿಜೆಪಿ ನಾಯಕರು ಆತಂಕ ವ್ಯಕ್ತಪಡಿಸಿದ್ದರು. ಈಗ ಅಧಿಕಾರದಲ್ಲಿರುವ ಅದೇ ಬಿಜೆಪಿ ಇವಿಎಂಗಳ ಬಳಕೆಯನ್ನು ಸಮರ್ಥಿಸಿಕೊಳ್ಳುತ್ತಿದೆ ಎಂದ ಅವರು, ವಿಶ್ವದಲ್ಲಿಯ ಪ್ರಮುಖ ಪ್ರಜಾಸತ್ತಾತ್ಮಕ ದೇಶಗಳು ಮತದಾನಕ್ಕಾಗಿ ಮತಪತ್ರಗಳನ್ನು ಬಳಸುತ್ತಿವೆ ಎಂದು ಹೇಳಿದರು.

ಇವಿಎಂಗಳಲ್ಲಿ ದೋಷ ಅಥವಾ ಕೈವಾಡದಿಂದಾಗಿ ಬಿಎಸ್‌ಪಿ ಪರ ಚಲಾಯಿಸಿದ್ದ ಮತಗಳು ಬಿಜೆಪಿ ಖಾತೆಗೆ ಜಮೆಯಾಗಿವೆ ಎಂದು ಆರೋಪಿಸಿದ ಅವರು, ನಿಮಗೆ ಅಷ್ಟೊಂದು ಆತ್ಮವಿಶ್ವಾಸವಿದ್ದರೆ ಮತಪತ್ರಗಳನ್ನು ಬಳಸಿ ಮತ್ತೊಮ್ಮೆ ಚುನಾವಣೆಗೆ ಏಕೆ ಕರೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News