ಪೊಲೀಸ್ ಇನ್‌ಸ್ಪೆಕ್ಟರ್‌ಗೆ 10 ವರ್ಷ ಜೈಲು ಶಿಕ್ಷೆ
ತಂಜಾವೂರು,ಮಾ.21: 2007ರಲ್ಲಿ ಉದ್ಯೋಗ ವಂಚನೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ 32ರ ಹರೆಯದ ಮಹಿಳೆಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಕ್ಕಾಗಿ ಇಲ್ಲಿಯ ತ್ವರಿತಗತಿ ಮಹಿಳಾ ನ್ಯಾಯಾಲಯವು ತಂಜಾವೂರು ಮೆಡಿಕಲ್ ಕಾಲೇಜು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಸಿ.ಸೇತುಮಣಿಮಾಧವನ್‌ಗೆ 10 ವರ್ಷಗಳ ಕಠಿಣ ಜೈಲುಶಿಕ್ಷೆಯನ್ನು ವಿಧಿಸಿದೆ.
ಮೂವರು ವ್ಯಕ್ತಿಗಳು ತಮಗೆ ಉದ್ಯೋಗದ ಭರವಸೆ ನೀಡಿ ಮೂರು ಲ.ರೂ.ಗಳನ್ನು ವಂಚಿಸಿದ್ದಾರೆ ಎಂದು ಇಬ್ಬರು ಯುವಕರು ತಂಜಾವೂರು ಜಿಲ್ಲಾ ಎಸ್‌ಪಿಗೆ ದೂರು ಸಲ್ಲಿಸಿದ್ದು, ಅವರ ಸೂಚನೆಯ ಮೇರೆಗೆ ಸಿ.ಸೇತುಮಣಿಮಾಧವನ್ ಅವರು ಅಖಿಲಾಂಡೇಶ್ವರಿ,ಜಾನಕಿರಾಮನ್ ಮತ್ತು ಇಳಯರಾಜಾ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಜಾನಕಿರಾಮನ್ ಮತ್ತು ಇಳಯರಾಜಾರನ್ನು ಬಂಧಿಸಲಾಗಿದ್ದು, ಕೊಯಮತ್ತೂರು ನಿವಾಸಿಯಾಗಿದ್ದ ಅಖಿಲಾಂಡೇಶ್ವರಿಯನ್ನು ಸಿ.ಸೇತುಮಣಿಮಾಧವನ್ ತಂಜಾವೂರಿಗೆ ಕರೆಸಿದ್ದರು. ತಂಜಾವೂರು ಬಸ್‌ನಿಲ್ದಾಣದಲ್ಲಿ ಬಂದಿಳಿದಿದ್ದ ಆಕೆಯನ್ನು ಪೊಲೀಸ್ ವಾಹನದಲ್ಲಿ ಹತ್ತಿಸಿಕೊಂಡಿದ್ಧ ಅವರು ಲಾಡ್ಜ್‌ವೊಂದರಲ್ಲಿ ಇರಿಸಿದ್ದರು ಮತ್ತು ಅಲ್ಲಿ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಸಾಯುವ ಮುನ್ನ ಆತ್ಮಹತ್ಯಾ ಚೀಟಿ ಬರೆದಿಟ್ಟಿದ್ದ ಅಖಿಲಾಂಡೇಶ್ವರಿ ಅದರಲ್ಲಿ ತನ್ನ ಸಾವಿಗೆ ಕಾರಣರಾದವರ ಹೆಸರುಗಳನ್ನು ಉಲ್ಲೇಖಿಸಿದ್ದಳು.
ಮೃತಳ ತಾಯಿಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ಸಿ.ಸೇತುಮಣಿಮಾಧವನ್ ಮತ್ತು ಇನ್ನೋರ್ವ ಆರೋಪಿ ಬಾಲಸುಬ್ರಮಣಿಯನ್ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ಸಿ.ಸೇತುಮಣಿಮಾಧವನ್ ತಪ್ಪಿತಸ್ಥರೆಂದು ಎತ್ತಿ ಹಿಡಿದ ನ್ಯಾ.ಪೂರ್ಣಜಯಾ ಆನಂದ್ ಅವರು ಸೋಮವಾರ 10 ವರ್ಷಗಳ ಕಠಿಣ ಜೈಲುಶಿಕ್ಷೆಯನ್ನು ವಿಧಿಸಿದರು.
ಬಾಲಸುಬ್ರಮಣಿಯನ್ ವಿಚಾರಣೆ ಬಾಕಿಯಿರುವಾಗಲೇ ನಿಧನನಾಗಿದ್ದಾನೆ.