ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ ಶಿರೀಶ್ ಕುಂದರ್ ಹೇಳಿದ್ದೇನು ?

Update: 2017-03-21 15:42 GMT

ಮುಂಬೈ, ಮಾ. 21 : ತಮ್ಮ ನೇರ, ಪ್ರಖರ ಹಾಗು ತೀಕ್ಷ್ಣ ಟ್ವೀಟ್ ಗಳಿಗೆ ಖ್ಯಾತರಾಗಿರುವ ಬಾಲಿವುಡ್ ನಿರ್ದೇಶಕ ಹಾಗು ನಿರ್ದೇಶಕಿ ಫರಾ ಖಾನ್ ಅವರ  ಪತಿ ಶಿರೀಶ್ ಕುಂದರ್ ಈ ಬಾರಿ ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನೇರವಾಗಿ ಆದಿತ್ಯನಾಥ್ ಹೆಸರನ್ನು ಅವರು ಉಲ್ಲೇಖಿಸದಿದ್ದರೂ ಅವರ ಟ್ವೀಟ್ ನಿಂದ ಇದು ಆದಿತ್ಯನಾಥ್  ಅವರ ಬಗ್ಗೆಯೇ ಹೇಳಿದ್ದು ಎಂಬುದು ಅತ್ಯಂತ ಸ್ಪಷ್ಟವಾಗಿದೆ. 

ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾದಾಗ  ಖ್ಯಾತ ಲೇಖಕ ಚೇತನ್ ಭಗತ್ ಅವರು " ಅತ್ಯಂತ ತುಂಟನನ್ನೇ ನಾಯಕ ಮಾಡಿದರೆ ಅವನು ಸುಧಾರಿಸುತ್ತಾನೆ " ಎಂಬರ್ಥದ ಟ್ವೀಟ್ ಮಾಡಿದ್ದರು. ಅದನ್ನು ಪರೋಕ್ಷವಾಗಿ ಟೀಕಿಸಿರುವ ಕುಂದರ್  " ಗೂಂಡಾ ಒಬ್ಬನನ್ನು ಅಳಲು ಬಿಟ್ಟರೆ ಆತ ಗಲಭೆ ಎಬ್ಬಿಸುವುದನ್ನು ನಿಲ್ಲಿಸುತ್ತಾನೆ ಎಂದು ನಂಬುವುದು ಅತ್ಯಾಚಾರ ಮಾಡಲು ಬಿಟ್ಟರೆ ಅತ್ಯಾಚಾರಿ ಮತ್ತೆ ಅತ್ಯಾಚಾರ ಮಾಡುವುದಿಲ್ಲ ಎಂದು ನಿರೀಕ್ಷಿಸಿದಂತೆ " ಎಂದು ಹೇಳಿದ್ದಾರೆ. 

ಅಷ್ಟಕ್ಕೇ ನಿಲ್ಲದ ಶಿರೀಶ್ , " ಗೂಂಡಾ ಒಬ್ಬನನ್ನು ಮುಖ್ಯಮಂತ್ರಿ ಮಾಡಿದರೆ ಆತನ ವರ್ತನೆಯಲ್ಲಿ ಸುಧಾರಣೆಯಾಗುತ್ತದೆ ಎಂಬ ಆಧಾರದಲ್ಲಿ ನೋಡಿದರೆ ದಾವೂದ್ ಇಬ್ರಾಹಿಂ ನನ್ನ ಸಿಬಿಐ ನಿರ್ದೇಶಕನಾಗಿ ನೇಮಿಸಬೇಕು ಹಾಗು ವಿಜಯ್ ಮಲ್ಯನನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಮಾಡಬೇಕು" ಎಂದು ಹೇಳಿದ್ದಾರೆ. 

ಕೋಮುವಾದಿಗಳಿಗೆ, ಬಲಪಂಥೀಯರಿಗೆ ಸದಾ ಕುಟುಕುತ್ತಲೇ ಇರುವ ಶಿರೀಶ್ ಟ್ವಿಟ್ಟರ್ ನಲ್ಲಿ ಭಾರೀ ಖ್ಯಾತಿ ಗಳಿಸಿದ್ದಾರೆ. ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಮಂದಿ ಅವರನ್ನು ಫಾಲೋ ಮಾಡುತ್ತಾರೆ.

ಸಾಮಾನ್ಯವಾಗಿ ಬಾಲಿವುಡ್ ಕಲಾವಿದರು ರಾಜಕೀಯ ಹಾಗು ರಾಜಕಾರಣಿಗಳ ಬಗ್ಗೆ ನೇರವಾಗಿ ಏನನ್ನೂ ಹೇಳುವುದಿಲ್ಲ. ಕೆಲವೇ ಕೆಲವು ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಕಲಾವಿದರನ್ನು ಹೊರತು ಪಡಿಸಿದರೆ ಉಳಿದ ಬಹುತೇಕರು ಎಲ್ಲ ಪಕ್ಷದವರ ಜೊತೆ ಹೊಂದಾಣಿಕೆಯಲ್ಲಿ ಹೋಗುವವರು. ಆದರೆ ಶಿರೀಶ್ ಮೊದಲಿನಿಂದಲೇ ಈ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳದೆ ತನಗೆ ಅನಿಸಿದ್ದನ್ನು ನೇರವಾಗಿ , ಸ್ಪಷ್ಟವಾಗಿ ಹೇಳಿಬಿಡುವ ಜಾಯಮಾನದವರು.  

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News