×
Ad

ಎಪ್ರಿಲ್ ಒಂದರಿಂದ ಎಕ್ಸ್ ಪ್ರೆಸ್ ಟಿಕೆಟ್ ನಲ್ಲೇ ರಾಜಧಾನಿ, ಶತಾಬ್ದಿ ರೈಲುಗಳಲ್ಲಿ ಪ್ರಯಾಣಿಸಿ !

Update: 2017-03-22 11:20 IST

ಹೊಸದಿಲ್ಲಿ, ಮಾ.22: ಎಪ್ರಿಲ್ ತಿಂಗಳಿನಿಂದ ಯಾವುದೇ ರೈಲಿನಲ್ಲಿ ಟಿಕೆಟ್ ಮುಂಗಡ ಕಾದಿರಿಸಿ ವೈಯ್ಟಿಂಗ್ ಲಿಸ್ಟ್ ನಲ್ಲಿರುವವರು ರಾಜಧಾನಿ ಅಥವಾ ಶತಾಬ್ದಿ ಎಕ್ಸ್ ಪ್ರೆಸ್ ರೈಲು ಗಾಡಿಗಳಲ್ಲೂ ಪ್ರಯಾಣಿಸುವ ಅವಕಾಶ ಪಡೆಯಬಹುದಾಗಿದೆ. 'ವಿಕಲ್ಪ್' ಎಂಬ ಈ ಹೊಸ ಯೋಜನೆಯನ್ನು ರೈಲ್ವೇ ಎಪ್ರಿಲ್ 1ರಿಂದ ಜಾರಿಗೊಳಿಸಲಿದ್ದು, ವೈಯ್ಟಿಂಗ್ ಲಿಸ್ಟ್ ನಲ್ಲಿರುವ ಪ್ರಯಾಣಿಕರು ಮುಂದಿನ ಬದಲಿ ರೈಲಿನಲ್ಲಿ ಟಿಕೆಟ್ ಪಡೆಯಬಹುದಾಗಿದೆ. ಅವರು ಮೊದಲ ಬಾರಿ ಟಿಕೆಟ್ ಕಾದಿರಿಸುವಾಗಲೇ ಈ ಆಯ್ಕೆಗೆ ಒಪ್ಪಿಕೊಂಡಿದ್ದರೆ ಅವರು ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

ಈ ಯೋಜನೆಯನ್ವಯ ಪ್ರಯಾಣಿಕರಿಂದ ಯಾವುದೇ ಹೆಚ್ಚುವರಿ ಶುಲ್ಕ ಪಡೆಯಲಾಗುವುದಿಲ್ಲ ಹಾಗೂ ದರಗಳಲ್ಲಿನ ವ್ಯತ್ಯಾಸವನ್ನೂ ಅವರಿಗೆ ಹಿಂದಿರುಗಿಸಲಾಗುವುದಿಲ್ಲ.

ಹಲವು ಉನ್ನತ ಹಾಗೂ ವಿಲಾಸಿ ರೈಲುಗಳಾದ ರಾಜಧಾನಿ, ಶತಾಬ್ದಿ ಹಾಗೂ ಡ್ಯುರೊಂಟೆ ಹಾಗೂ ಸುವಿಧಾ ರೈಲುಗಳಲ್ಲಿರುವ ಖಾಲಿ ಸೀಟುಗಳನ್ನು ಸದುಪಯೋಗ ಪಡಿಸಿಕೊಳ್ಳುವ ಪ್ರಯತ್ನ ಇದಾಗಿದೆ.

ರೈಲ್ವೆಯು ವರ್ಷವೊಂದಕ್ಕೆ ವಿವಿಧ ಕಾರಣಗಳಿಗಾಗಿ ಟಿಕೆಟ್ ರದ್ದುಗೊಳಿಸುವುದರಿಂದ ರೂ.7,500 ಕೋಟಿ ನಷ್ಟ ಅನುಭವಿಸುತ್ತಿದೆ. ಆನ್ ಲೈನ್ ಬುಕ್ಕಿಂಗ್ ಮೂಲಕವೂ ಈ ಹೊಸ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಕೆಲವು ಮಾರ್ಗದ ರೈಲುಗಳಲ್ಲಿ ಟಿಕೆಟ್ ಗಾಗಿ ವರ್ಷದಾದ್ಯಂತ ಭಾರೀ ಬೇಡಿಕೆ ಇದ್ದರೆ ಇನ್ನು ಕೆಲವು ರೈಲುಗಳಲ್ಲಿ ಕೇವಲ ಹಬ್ಬದ ಸಂದರ್ಭಗಳಲ್ಲಿ ಮಾತ್ರ ಹೆಚ್ಚಿನ ಪ್ರಯಾಣಿಕರು ಇರುತ್ತಾರೆ. ಎಲ್ಲಾ ರೈಲುಗಳ ಸೀಟುಗಳು ಭರ್ತಿಯಾಗುವಂತೆ ಮಾಡುವುದು ಸರಕಾರದ ಉದ್ದೇಶವಾಗಿದೆ.

ವಿಕಲ್ಪ್ ಯೋಜನೆಯ ಪ್ರಯೋಜನ ಪಡೆಯಲಿಚ್ಛಿಸುವ ಪ್ರಯಾಣಿಕರು ವೈಯ್ಟಿಂಗ್ ಲಿಸ್ಟ್ ನಲ್ಲಿದ್ದರೆ, ಮುಂದಿನ ರೈಲಿನಲ್ಲಿ ಅವರಿಗೆ ದೃಢೀಕೃತ ಟಿಕೆಟ್ ದೊರೆತರೆ ಎಸ್ಸೆಮ್ಮೆಸ್ ಮೂಲಕ ಮಾಹಿತಿ ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News