×
Ad

ಹುಕುಂ ದೇವ್ ನಾರಾಯಣ್ ಯಾದವ್ ನೂತನ ಉಪರಾಷ್ಟ್ರಪತಿ ?

Update: 2017-03-22 13:09 IST

ಹೊಸದಿಲ್ಲಿ, ಮಾ.22: ಬಿಹಾರದ ಹಿರಿಯ ಬಿಜೆಪಿ ನಾಯಕ ಹುಕುಂ ದೇವ್ ನಾರಾಯಣ್ ಯಾದವ್ ಅವರು ಭಾರತದ ನೂತನ ಉಪರಾಷ್ಟ್ರಪತಿಯಾಗಿ ಈಗಿನ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರ ಸ್ಥಾನಕ್ಕೆ ಬರಲಿದ್ದಾರೆಂದು ವರದಿಯೊಂದು ತಿಳಿಸಿದೆ. ಈಗಾಗಲೇ ಬಿಜೆಪಿ ನಾಯಕತ್ವ ಹಾಗೂ ಎನ್ ಡಿಎ ಈ ನೇಮಕಾತಿಗೆ ತನ್ನ ಒಪ್ಪಿಗೆ ಸೂಚಿಸಿದೆ.

ಇತರ ಹಿಂದುಳಿದ ವರ್ಗಕ್ಕೆ ಸೇರಿದ ನಾಯಕರಾಗಿರುವ ಯಾದವ್ ಅವರು ಬಿಹಾರದಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾದವರು. ಸಂಸತ್ತಿನಲ್ಲಿ ಪ್ರಬಲ ವಾದ ಮಂಡಿಸುವವರು ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಬಡ ಕುಟುಂಬದಿಂದ ಬಂದಿರುವ ಯಾದವ್ ಒಬ್ಬ ಪ್ರಾಮಾಣಿಕ ಮತ್ತು ಸಭ್ಯ ರಾಜಕಾರಣಿಯೆಂದೇ ಪ್ರಸಿದ್ಧರು. ಪ್ರಸಕ್ತ ಅವರು ಮಧುಬನಿ ಕ್ಷೇತ್ರದ ಸಂಸದರಾಗಿದ್ದು, ತಮ್ಮನ್ನು ಸಮಾಜ ಸೇವಕ ಹಾಗೂ ರೈತನೆಂದೇ ಗುರುತಿಸಿಕೊಳ್ಳುತ್ತಾರೆ.

ದರ್ಭಾಂಗದ ಬಿಜುಲಿ ಎಂಬಲ್ಲಿ ನವೆಂಬರ್ 16, 1939ರಲ್ಲಿ ಜನಿಸಿದ ಯಾದವ್ ಅಲ್ಲಿನ ಚಂದ್ರಹರಿ ಮಿಥಿಲಾ ಕಾಲೇಜಿನಿಂದ ಪದವಿ ಪಡೆದಿದ್ದು, ಜಯಪ್ರಕಾಶ್ ನಾರಾಯಣ್ ಅವರ ಆಂದೋಲನದಲ್ಲೂ ಭಾಗಿಯಾಗಿದ್ದರು. ಈ ಹಿಂದೆ ಕೇಂದ್ರ ಸಹಾಯಕ ಸಚಿವರೂ ಆಗಿದ್ದ ಯಾದವ್ ಅವರು ತಮ್ಮ ರಾಜಕೀಯ ಜೀವನವನ್ನು 1960ರಲ್ಲಿ ತಮ್ಮ ಹಳ್ಳಿಯ ಗ್ರಾಮ ಪ್ರಧಾನ್ ಆಗುವ ಮೂಲಕ ಆರಂಭಿಸಿದ್ದರು.

ರಾಷ್ಟ್ರಪತಿ ಚುನಾವಣೆಯ ಸಂದರ್ಭ ಬಿಜೆಪಿಗೆ ಆರ್.ಜೆ.ಡಿ. ಹಾಗೂ ಜೆಡಿ(ಯು) ಬೆಂಬಲ ಸಿಗಬಹುದೆಂಬ ನಿರೀಕ್ಷೆಯಿದೆ.
ಈಗಿನ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರ ಅವಧಿ ಜುಲೈ ತಿಂಗಳಲ್ಲಿ ಕೊನೆಗೊಳ್ಳಲಿದೆ.

ತರುವಾಯ ರಾಷ್ಟ್ರಪತಿ ಹುದ್ದೆಗೆ ನರೇಂದ್ರ ಮೋದಿ ಸರಕಾರ ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಹೆಸರು ಸೂಚಿಸುವ ಸಾಧ್ಯತೆಯಿದೆಯೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News