ಬ್ರಿಟನ್ ಸಂಸತ್ತಿನ ಬಳಿ ‘ಭಯೋತ್ಪಾದಕ ದಾಳಿ’

Update: 2017-03-22 18:37 GMT

ಲಂಡನ್, ಮಾ.22: ಬ್ರಿಟನ್ ಸಂಸತ್ತಿನ ಬಳಿ ಆಕ್ರಮಣಕಾರನೋರ್ವ ನಡೆಸಿದ ಉಗ್ರ ಕೃತ್ಯಕ್ಕೆ ಓರ್ವ ಮಹಿಳೆ ಹಾಗೂ ಪೊಲೀಸ್ ಅಧಿಕಾರಿ  ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ವೆಸ್ಟ್‌ಮಿನಿಸ್ಟರ್ ಸೇತುವೆ ಬಳಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿಕೊಂಡು ಬಂದ ದಾಳಿಕೋರನು ಸಂಸತ್‌ಭವನಕ್ಕೆ ನುಗ್ಗಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಆತ ಅಲ್ಲಿ ಕಾವಲಿದ್ದ ಓರ್ವ ಪೊಲೀಸ್ ಸಿಬ್ಬಂದಿಗೆ ಇರಿದಿದ್ದಾನೆ. ಬಳಿಕ ‘ಭಯೋತ್ಪಾದಕ’ನನ್ನು ಪೊಲೀಸರು ಕೊಂದು ಹಾಕಿದರು. ಇದೊಂದು ‘ಭಯೋತ್ಪಾದಕ ದಾಳಿ’ ಎಂದು ಪರಿಗಣಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆಯ ಸಂದರ್ಭ ಬ್ರಿಟನ್ ಸಂಸತ್ತಿನಲ್ಲಿ ನಡೆಯುತ್ತಿದ್ದ ಕಲಾಪವನ್ನು ಸ್ಥಗಿತಗೊಳಿಸಿ, ಜನಪ್ರತಿನಿಧಿಗಳನ್ನು ಸಂಸತ್ತಿನ ಒಳಗೇ ಇರುವಂತೆ ಸೂಚಿಸಲಾಯಿತು. ಪ್ರಧಾನಿ ಥೆರೆಸಾ ಮೇ ಸುರಕ್ಷಿತವಾಗಿದ್ದಾರೆ ಎಂದು ಅವರ ಕಚೇರಿಯ ವಕ್ತಾರರೋರ್ವರು ತಿಳಿಸಿದ್ದು, ಘಟನೆ ನಡೆದಾಗ ಪ್ರಧಾನಿ ಎಲ್ಲಿದ್ದಾರೆ ಎಂಬ ಬಗ್ಗೆ ತಿಳಿಸಲು ನಿರಾಕರಿಸಿದ್ದಾರೆ. ಪೊಲೀಸ್ ಸಿಬ್ಬಂದಿಗೆ ಇರಿದ ಆಕ್ರಮಣಕೋರ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ ಎಂದು ಸದನದ ನಾಯಕ ಡೇವಿಡ್ ಲಿಡಿಂಗ್ಟನ್ ತಿಳಿಸಿದ್ದಾರೆ.

ಬ್ರಿಟನ್ ಸಂಸತ್ತಿನ ಪಕ್ಕದಲ್ಲಿರುವ ವೆಸ್ಟ್‌ಮಿನಿಸ್ಟರ್ ಸೇತುವೆಯ ಮೇಲೆ ಚೂರಿಯನ್ನು ಹಿಡಿದಿದ್ದ ವ್ಯಕ್ತಿಯೋರ್ವ ಪಾದಚಾರಿಗಳ ಮೇಲೆಯೇ ಕಾರು ಚಲಾಯಿಸಿದ್ದು ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟು ಹಲವರು ಗಾಯಗೊಂಡರು.

ಬಳಿಕ ಆತ ಸಂಸತ್ ಭವನದ ಎದುರಿಗಿದ್ದ ಪೊಲೀಸರತ್ತ ಗುಂಡಿನ ಮಳೆಗೆರೆದ. ಘಟನೆಯಲ್ಲಿ ಕನಿಷ್ಟ 12 ಮಂದಿ ಗಾಯಗೊಂಡಿರುವುದನ್ನು ಕಂಡಿರುವುದಾಗಿ ರಾಯ್‌ಟರ್ಸ್ ಪತ್ರಿಕೆಯ ಛಾಯಾಚಿತ್ರಗಾಹಕ ತಿಳಿಸಿದ್ದಾರೆ. ನೆಲದ ಮೇಲೆ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿರುವ ಜನರು ಇವರು ತೆಗೆದ ಚಿತ್ರಗಳಲ್ಲಿ ಕಂಡು ಬಂದಿದ್ದಾರೆ. ಘಟನೆಯ ಸಂಪೂರ್ಣ ಚಿತ್ರಣ ದೊರಕುವವರೆಗೆ ಇದೊಂದು ಭಯೋತ್ಪಾದಕ ದಾಳಿ ಎಂದೇ ಪರಿಗಣಿಸಲಾಗುವುದು ಎಂದು ಲಂಡನ್ ಮಹಾನಗರದ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಸಂಸತ್ತಿನ ಹೊರಗೆ ಕಾರೊಂದು ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿರುವುದಾಗಿ ಬಿಬಿಸಿ ವರದಿ ಮಾಡಿದೆ. ಆದರೆ ಈ ವರದಿಯನ್ನು ಪೊಲೀಸರು ದೃಢಪಡಿಸಿಲ್ಲ. ಘಟನೆಯ ಬಳಿಕ ಸಂಸತ್ತಿನ ಒಳಗೆ ಸಶಸ್ತ್ರಧಾರಿ ಪೊಲೀಸರು ಗಸ್ತು ನಡೆಸುತ್ತಿದ್ದಾರೆ ಎಂದು ರಾಯ್‌ಟರ್ ವರದಿ ಮಾಡಿದೆ. ಇದೇ ರೀತಿಯ ಘಟನೆ ನಗರದ ಹಲವೆಡೆ ನಡೆದಿರುವ ಸಾಧ್ಯತೆಯಿದೆ ಎಂದೂ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News