ನೇಣುಬಿಗಿದು ಕರ್ನಾಟಕದ ಯೋಧ ಈರಪ್ಪ ಆತ್ಮಹತ್ಯೆ
Update: 2017-03-23 19:42 IST
ಜೈಪುರ,ಮಾ.23: ರಾಜ್ಯದ ಯೋಧ ಹವಾಲ್ದಾರ್ ಈರಪ್ಪ ಹುರಳಿ ಗುರುವಾರ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 37 ವರ್ಷ ವಯಸ್ಸಿನ ಈರಪ್ಪ ಹುರಳಿ ಅವರ ಮೃತದೇಹ ಅವರ ಕೊಠಡಿಯ ಸೀಲಿಂಗ್ ಫ್ಯಾನ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿರುವುದು ಕಂಡುಬಂದಿದೆ. ಆತ ಭಾರತೀಯ ಸೇನಾಪಡೆಯ ಜೈ ಪಲ್ಟಾನ್ ತುಕಡಿಯಲ್ಲಿ ನಿಯೋಜಿತರಾಗಿದ್ದರು ಎಂದು ಅರಾವಳಿ ವಿಹಾರ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಈರಪ್ಪ ಅವರ ಮೃತದೇಹವನ್ನು ಜೈಪುರದ ಸೇನಾ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಘಟನೆಯ ಬಗ್ಗೆ ಅವರ ಬಂಧುಗಳಿಗೆ ಮಾಹಿತಿ ನೀಡಲಾಗಿದೆ ಎಂದರು. ಅರಾವಳಿ ವಿಹಾರ್ ಪೊಲೀಸರು ಭಾರತೀಯ ಕ್ರಿಮಿನಲ್ ದಂಡಸಂಹಿತೆ 174ರಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.