ಉತ್ತರ ಪ್ರದೇಶದ ಶಾಲೆಗಳಲ್ಲಿ ಬೆಚ್ಚಿ ಬೀಳಿಸುವ ಪರೀಕ್ಷಾ ಅವ್ಯವಹಾರಗಳು
ಮಥುರಾ, ಮಾ.23: ಉತ್ತರ ಪ್ರದೇಶದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಗುರುವಾರ ನಡೆದ 10ನೇ ತರಗತಿ ಬೋರ್ಡ್ ಪರೀಕ್ಷೆಗಳಲ್ಲಿ ನಡೆದಿರುವ ಅವ್ಯವಹಾರಗಳು ಎಂಥವರನ್ನೂ ಬೆಚ್ಚಿ ಬೀಳಿಸಬಹುದು. ಆಡಳಿತವು ಎಲ್ಲವೂ ಸುಸೂತ್ರವಾಗಿ ನಡೆದಿದೆ ಎಂದು ಹೇಳಬಹುದಾದರೂ, ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಪ್ರತಿನಿಧಿಯ ಅನುಭವ ಮಾತ್ರ ಬೇರೆ ಏನನ್ನೋ ಹೇಳುತ್ತಿದೆ.
ಪರೀಕ್ಷಾ ಕೇಂದ್ರಗಳಿಂದ ಪ್ರತೀ 500 ಮೀಟರುಗಳ ಅಂತರಲ್ಲಿ ‘ಸ್ಪಾಟ್ಟರು’ಗಳು ತಮ್ಮ ಬೈಕುಗಳನ್ನು ನಿಲ್ಲಿಸಿ ಯಾರಾದರೂ ಶಂಕಾಸ್ಪದ ವ್ಯಕ್ತಿಗಳು ಬರುತ್ತಿದ್ದಾರೇನೋ ಎಂದು ಗಮನಿಸುತ್ತಿದ್ದರು. ಹಾಗೇನಾದರೂ ಇದ್ದರೆ ಅವರು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ ತಮ್ಮ ಏಜಂಟರಿಗೆ ತಕ್ಷಣ ಸುದ್ದಿ ಮುಟ್ಟಿಸುತ್ತಾರೆ.
ಅಚ್ಚರಿಯೆಂದರೆ ಪತ್ರಿಕಾ ಪ್ರತಿನಿಧಿ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಿದರೂ ಯಾರೂ ಅವರನ್ನು ತಡೆಯಲಿಲ್ಲ. ಅಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹೆತ್ತವರು ಎಲ್ಲರೂ ಇದ್ದರು.
ತರಗತಿಯಲ್ಲಿ ಎಲ್ಲಾ ಡೆಸ್ಕುಗಳೂ ಒಂದಕ್ಕೊಂದು ತಾಗಿಯೇ ಜೋಡಿಸಲ್ಪಟ್ಟಿತ್ತು ಹಾಗೂ ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳಲ್ಲಿ ಬರೆಯುತ್ತಿದ್ದರು. ಕಿಟಿಕಿಯ ಹೊರಗೆ ನಿಂತ ವ್ಯಕ್ತಿ ‘‘ಮೊದಲ ಪ್ರಶ್ನೆಯ ಉತ್ತರ ಬರೆದಾಯಿತೇ ? ಎರಡನೇ ಉತ್ತರ ಬರೆಯಿರಿ’’ ಎಂದು ಹೊರಗಿನಿಂದಲೇ ಉತ್ತರ ಹೇಳುತ್ತಿದ್ದನು. ಈ ದೃಶ್ಯ ಮಥುರಾದ ಶ್ಯಾಮಲಾಲ್ ಇಂಟರ್ ಕಾಲೇಜಿನದ್ದಾಗಿತ್ತು. ಇಂತಹುದೇ ಪರಿಸ್ಥಿತಿ ರಯಾದ ರಾಧಾ ಗೋಪಾಲ್ ಇಂಟರ್ ಕಾಲೇಜಿನಲ್ಲೂ ಇತ್ತು. ಸಂಸ್ಥೆಗಳಲ್ಲಿ ಶಿಕ್ಷಕರು ಮತ್ತು ಪೊಲೀಸರಿದ್ದರೂ ಅವರ ಮೂಗಿನ ನೇರಕ್ಕೇ ನಡೆಯುತ್ತಿರುವ ಈ ಅವ್ಯವಹಾರಕ್ಕೆ ಯಾರೂ ತುಟಿ ಪಿಟಿಕ್ಕೆನ್ನುತ್ತಿರಲಿಲ್ಲ.
ಮೂಲಗಳ ಪ್ರಕಾರ ಈ ನಕಲು ಮಾಫಿಯಾ ತನ್ನ ದರಗಳನ್ನೂ ನಿಗದಿ ಪಡಿಸಿದೆ. ತಾವೇ ಉತ್ತರಗಳನ್ನು ಸಿದ್ಧಪಡಿಸಿಕೊಂಡು ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಂದ ರೂ.5000 ಪಡೆಯಲಾಗುತ್ತಿದ್ದರೆ, ಸರಿಯಾದ ಉತ್ತರಗಳನ್ನು ಏಜಂಟರಿಂದ ತಿಳಿದುಕೊಂಡು ಅವುಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ರೂ.10,000 ವಿಧಿಸಲಾಗುತ್ತದೆ. ತರುವಾಯ ಪರೀಕ್ಷಾ ಕೇಂದ್ರಗಳಿಗೆ ಬಂದು ಹಾಜರಿ ಹಾಕಿ ನಂತರ ಏಜಂಟರುಗಳ ಮುಖಾಂತರವೇ ಉತ್ತರ ಪತ್ರಿಕೆ ಬರೆಸುವ ವಿದ್ಯಾರ್ಥಿಗಳಿಂದ ರೂ.15000 ಪಡೆಯಲಾಗುತ್ತದೆ ಎನ್ನುತ್ತವೆ ಮೂಲಗಳು.
ವಿದ್ಯಾರ್ಥಿಗಳು ಆರಿಸಿದ ಪ್ಯಾಕೇಜಿನನ್ವಯ ಅವರನ್ನು ಕೂರಿಸಿ ಪರೀಕ್ಷೆ ಬರೆಯುವಂತೆ ಮಾಡಲಾಗುತ್ತದೆ. ಕೆಲವು ಕಡೆಗಳಲ್ಲಿ ಹೆತ್ತವರೂ ಉತ್ತರ ಬರೆಯಲು ತಮ್ಮ ಮಕ್ಕಳಿಗೆ ಸಹಾಯ ಮಾಡುತ್ತಿರುವುದು ಕಾಣಿಸಿದೆ.
ಮಥುರಾ ಎಡಿಎಂಎಕೆ ಅವಸ್ಥಿ ಪ್ರಕಾರ ಈ ಪರೀಕ್ಷಾ ಅವ್ಯವಹಾರಗಳನ್ನು ತಡೆಯಲು ಸರ್ವ ಪ್ರಯತ್ನ ನಡೆಸಲಾಗುತ್ತಿದೆ. ಇಲ್ಲಿಯ ತನಕ ಅವ್ಯವಹಾರ ನಡೆಸಿದ 55 ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ಅವ್ಯವಹಾರಗಳಿಗಾಗಿ 35 ಶಾಲೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಮಥುರಾದ ಜಿಲ್ಲಾ ಶಿಕ್ಷಣ ಅಧಿಕಾರಿ ಇಂದ್ರಪ್ರಕಾಶ್ ಸಿಂಗ್ ಹೇಳುತ್ತಾರೆ. ಅವ್ಯವಹಾರ ನಡೆದಿದ್ದು ಸಾಬೀತಾದರೆ ಅಂತಹ ಶಾಲೆಗಳನ್ನು ಐದು ವರ್ಷಗಳ ಕಾಲ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.