ಬದುಕಿನ ಅನಿವಾರ್ಯತೆಗೆ ತರಕಾರಿ ಪುಟ್ಟಿ ತಲೆ ಮೇಲೆರಿಸಿಕೊಂಡ ಛಲಗಾತಿ..! ; ಮೌನದಿಂದಲೆ ಮನೆ ನಡೆಸುತ್ತಿರುವ ಮಿನಾಜ್..!

Update: 2017-03-24 18:19 GMT

ಬದುಕು ಅನ್ನುವುದು ಜಟಕಾ ಬಂಡಿ ತರಹ. ವಿಧಿ ಅದರ ಸಾಹೇಬ ಅಂತಾರೆ. ಹೌದು ಈ ಬದುಕು ಅಂದರೇನೆ ವಿಚಿತ್ರ. ಏಳು ಬೀಳುಗಳ ಮದ್ಯೆ ತೊಳಲಾಟದ ಬದುಕು. ಈ ಪರಿಯ ಜೀವನದಲ್ಲಿ ಛಲಬಿಡದ ದಿಟ್ಟ ಬಾಲೆಯ ಬದುಕು ಈ ಮಾತಿಗೊಂದು ತಾಜಾ ಉದಾಹರಣೆ. ತರಕಾರಿ ಪುಟ್ಟಿ ತಲೆ ಮೇಲೆ ಹೊತ್ತು ತಿರುಗುತ್ತಲೆ ಕುಟುಂಬವನ್ನು ಸಾಕುತ್ತಾ, ಅದರ ಜೊತೆ ವಿಧ್ಯಾಭ್ಯಾಸವು ಮಾಡುತ್ತಿರುವ ಈ ಬಾಲಕಿಯ ಬದುಕು ನೋಡಿದರೆ ವಿಧಿ ಏನೆಲ್ಲ ಮಾಡಲಿಕ್ಕೆ ಹಚ್ಚುತ್ತೆ ಅನ್ನೋದಕ್ಕೆ ಎರಡನೆ ಮಾತಿಲ್ಲ.

ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಈ ಬಾಲಕಿಯ ಹೆಸರು ಮೀನಾಜ್. ನಗರದ ಜೆ.ಟಿ.ಪ್ರೌಢಶಾಲೆಯಲ್ಲಿ ಸಧ್ಯ 8ನೆ ತರಗತಿಯಲ್ಲಿ ಓದುತ್ತಿದ್ದಾಳೆ. ಇವಳು ನಿತ್ಯ ತರಕಾರಿ ಮಾರಿದರೆ ಮಾತ್ರ ಇವರ ಕುಟುಂಬಕ್ಕೆ ತುತ್ತು ಅನ್ನ ಸಿಗೋದು. ಸುಮಾರು 9 ವರ್ಷದ ಹಿಂದೆಯೇ ತಂದೆಯನ್ನು ಕಳೆದುಕೊಂಡ ಮೀನಾಜ್, ತಾಯಿ ಆರೈಕೆಯಲ್ಲಿ ತೀರಾ ಸಂಕಷ್ಟದ ಪರಿಸ್ಥಿತಿಯಲ್ಲಿ ಬೆಳೆದವಳು. ಬಾಲ್ಯದಲ್ಲೆ ತನ್ನ ತಾಯಿ ಪಡುತ್ತಿದ್ದ ಕಷ್ಟ ನೋವು ಯಾತನೆಗಳನ್ನು ನೋಡಿ, ಬಡತನದ ಬೇಯ್ಗೆಯಲ್ಲಿ ಬೆಂದು ಹೋಗಿದ್ದಳು.

ಗಂಡನ ಮರಣದ ನಂತರ ಮಿನಾಜ್ ತಾಯಿ ಬಿಬಿಜಾನ್ ಬದುಕು ಸಾಗಿಸುವ ಅನಿವಾರ್ಯತೆಗೆ ತರಕಾರಿ ವ್ಯಾಪಾರ ಶುರು ಮಾಡಿದ್ದಳು. ಮನೆ ತುಂಬ ಚಿಕ್ಕ ಮಕ್ಕಳು ಅದರಲ್ಲೂ ಕುಟುಂಬದ ಜವಾಬ್ದಾರಿ ಹೊರಲಿಕ್ಕೆ ಹುಟ್ಟಿದ್ದು ಒಬ್ಬನೇ ಒಬ್ಬ ಗಂಡು ಮಗು. ಅದು ಇನ್ನು ದುಡಿದು ಹಾಕುವಷ್ಟು ವಯಸ್ಸಿಗೆ ಬಾರದ ಮಗ, ಈ ಎಲ್ಲ ಸಂಗತಿಗಳಿಂದ ತರಕಾರಿ ಮಾರಿಯೇ ತನ್ನ ಮಕ್ಕಳನ್ನು ಹಾಗೂ ಕುಟುಂಬವನ್ನು ಸಾಕುತ್ತ ಬಂದ ಬಿಬಿಜಾನ್ ಬರು ಬರುತ್ತ ನಿಶಕ್ತಳಾದಳು. ತಾನು ಇನ್ನೇನು ಕೆಲಸ ಮಾಡಲಿಕ್ಕೆ ಆಗಲಾರದು ಎಂಬ ಸ್ಥಿತಿಗೆ ಬಂದು, ಇರೋದಿಕ್ಕೆ ಸ್ವಂತ ಮನೆಯೂ ಇಲ್ಲದೇ, ಆಶ್ರಯ ಮನೆಯಲ್ಲಿ ಬಾಡಿಗೆ ಇದ್ದು ತಮ್ಮ ಬದುಕು ಸಾಗಿಸುತ್ತಿದ್ದರು. ತಾಯಿಯ ಆ ಕಷ್ಟ ನೋಡಲಾರದೇ ಸ್ವತ: ಮೀನಾಜ್ ತರಕಾರಿ ಪುಟ್ಟಿ ತನ್ನ ತಲೆಮೇಲಿಟ್ಟುಕೊಂಡಳು.

ಮಿನಾಜ್ 5ನೆ ತರಗತಿಯಿಂದಲೇ ತರಕಾರಿ ಮಾರಲು ಪ್ರಾರಂಭಿಸಿದಳು. ಮೂರು ವರ್ಷದ ಹಿಂದೆ ತರಕಾರಿ ಪುಟ್ಟಿ ಹೊತ್ತ ಮಿನಾಜ್ ಇನ್ನು ಇಳಿಸಿಲ್ಲ. ನಿತ್ಯ ಮಾರುಕಟ್ಟೆಯಲ್ಲಿ ಬಗೆಬಗೆಯ ಸೊಪ್ಪ, ತರಕಾರಿಯನ್ನು ಖರೀದಿಸುತ್ತಾಳೆ. ನಿತ್ಯ ಬೆಳಗ್ಗೆ 6 ಗಂಟೆಯಿಂದ 8ಗಂಟೆವರೆಗೆ ಅದೇ ತರಕಾರಿಯನ್ನು ವಿವಿಧ ಓಣಿಯಲ್ಲಿ ತಿರುಗಿ ಮಾರಾಟ ಮಾಡುತ್ತಾಳೆ. ದಿನಕ್ಕೆ ಸುಮಾರು 600 ರೂಪಾಯಿ ವರೆಗೆ ವ್ಯಾಪಾರ ಮಾಡಿ, ಮಾರಿ ಬಂದ ಹಣವನ್ನು ತಾಯಿಯ ಬಳಿ ನೀಡುತ್ತಾಳೆ. ಲಾಭದ ಹಣದಿಂದಲೇ ತನ್ನ ಕುಟುಂಬ ಹಾಗೂ ವಿದ್ಯಾಭ್ಯಾಸದ ಖರ್ಚು ನಿಭಾಯಿಸುತ್ತಾಳೆ. ಬೆಳ್ಳಂಬೆಳಿಗ್ಗೆ ಎದ್ದು ಅಕ್ಷರಾಭ್ಯಾಸ ಮಾಡಬೇಕಾದ ವಯಸ್ಸಿನಲ್ಲಿ ತರಕಾರಿ ಮಾರುತ್ತಿರುವ ಈ ಬಾಲಕಿಯ ಬದುಕು ಮಾತ್ರ ಶೋಚನಿಯ.

ಶಾಲೆಯಲ್ಲೂ ಸೈ..!

ಮಿನಾಜ್ ತನ್ನ ನಿತ್ಯದ ಕಾಯಕ ಮುಗಿಸಿ ತಪ್ಪದೇ ಪ್ರತಿ ದಿನ ಶಾಲೆಗೂ ಸಹ ಹೋಗುತ್ತಾಳೆ. ಪಾಠದಲ್ಲಿ ಹೆಚ್ಚಿನ ಆಸಕ್ತಿ ತೊರುವುದರಿಂದ ಇಡೀ ಶಾಲೆಯಲ್ಲಿ ಮಿನಾಜ್ ಶಿಕ್ಷಕರಿಗೆ ನೆಚ್ಚಿನ ವಿದ್ಯಾರ್ಥಿನಿಯು ಹೌದು. ಓದಿನಲ್ಲೂ ಮುಂದಿರುವ ಮೀನಾಜ್ ಮುಂದೊಂದು ದಿನ ಮಿನುಗುವ ನಕ್ಷತ್ರದಂತಾಗಲಿ ಅಂತಾ ಶಿಕ್ಷಕರು, ಅವಳನ್ನು ತೀರಾ ಹತ್ತಿರದಿಂದ ನೋಡಿದ ಅಕ್ಕ ಪಕ್ಕದ ಜನ ಬಾಯಿತುಂಬ ಹಾರೈಸುತ್ತಾರೆ.

ಪ್ರತಿಭೆ ಇದ್ದರೂ ಬಡತನ ಅನ್ನುವ ಮಾರಿಗೆ ಅದೇಷ್ಟೊ ಜನ ತಮ್ಮ ವಿಧ್ಯಾಭ್ಯಾಸಕ್ಕೆ ಬಾಯ್ ಹೇಳಿದ ನಿದರ್ಶನಗಳು ನಮ್ಮೆದುರು ಕಾಣುತ್ತವೆ. ಆದರೆ ಬಡತನ ಈ ಬಾಲೆಯ ಓದಿಗೆ ಮಾತ್ರ ಎಂದು ಅಡ್ಡಿಯಾಗಿಲ್ಲ. ಎಂಥ ಕಷ್ಟ ಪರಿಸ್ಥಿತಿಯಲ್ಲೂ ಸ್ವತ: ತಾನೇ ಪುಸ್ತಕ ಖರೀದಿಸಿ ಅಭ್ಯಾಸ ಮಾಡುತ್ತಿದ್ದಾಳೆ. ಮಿನಾಜ್ 10 ವರ್ಷದವಳಿದ್ದಾಗಿನಿಂದ ಹುಟ್ಟಿದ ಛಲ ಇಂದಿಗೂ ಕುಂದಿಲ್ಲ. ಹಾಗಾಗಿ ಕುಟುಂಬಕ್ಕಂಟಿದ ಬಡತನವೇ ಆಕೆಗೆ ಬಹುದೊಡ್ಡ ಪಾಠವಾಗಿದೆ. ತನ್ನ ವಯಸ್ಸಿಗಿಂತ ಹಿರಿದಾದ ಜ್ನಾನ ಹೊಂದಿದ ಮಿನಾಜ್, ತನಗಿರುವ  ತಮ್ಮನನ್ನು ಚೆನ್ನಾಗಿ ಓದಿಸಿ, ತಾಯಿಯನ್ನು ಸುಖವಾಗಿಡಬೇಕು ಅನ್ನುವುದೆ ಇವಳ ಹೆಬ್ಬಯಕೆ.

ಸೌಲಭ್ಯದ ಸುಪ್ಪತ್ತಿಗೆಯಲ್ಲಿರುವ ಅದೆಷ್ಟೋ ಮಕ್ಕಳು ಕಲಿಯಲು ಹಿಂದೇಟು ಹಾಕುತ್ತಾರೆ. ಆದರೆ ಮಿನಾಜ್ ಮಾತ್ರ ಬಡತನದಲ್ಲೂ ವಿಧ್ಯಾ ದೇವತೆಯನ್ನು ಅರಸಿದ್ದಾಳೆ. ಮಿನಾಜ್ಳ ಬಡತನದ ಬವಣೆಗೆ ಸಂಘ, ಸಂಸ್ಥೆಗಳು, ಶಿಕ್ಷಣ ಪ್ರೇಮಿಗಳು, ಮಠಾಧೀಶರ ಸಹಾಯ ಬೇಕಿದೆ. ಒಳ್ಳೆಮನಸ್ಸುಗಳ ಸ್ಪಂದನೆ ಸಿಕ್ಕರೆ ಈಕೆ ಬಡತನದಲ್ಲಿ ಅರಳಿದ ಗುಲಾಬಿಯಾಗಬಲ್ಲಳು ಅನ್ನುವುದಕ್ಕೆ ಬೇರೆ ಮಾತೆ ಇಲ್ಲ.

ಬಡತನ ರೇಖೆಯಲ್ಲಿದ್ದರು ಕುಟುಂಬದ ನೊಗಹೊತ್ತು, ಓದಲೇಬೇಕು ಅನ್ನುವ ಮಿನಾಜ್ಳ ಆಸಕ್ತಿ ನೋಡಿದರೆ ಎಲ್ಲ ರೀತಿಯಿಂದಲೂ ಸೌಲಭ್ಯಗಳಿದ್ದರು ಓದದೇ ಇರುವಂತಹ ಮಕ್ಕಳಿಗೆ ಮಿನಾಜ್ ನ ಆಸೆ ಮತ್ತು ಕಾರ್ಯ ಮಾದರಿಯಾಗುತ್ತದೆ. ಇವಳ ಮುಂದಿನ ಓದಿಗೆ ಸಹಾಯದ ಅವಶ್ಯಕತೆ ಇದೆ. ಹಾಗಾಗಿ ಇವಳ ಪ್ರತಿಭೆಗೆ  ಸಹಾಯದ ಅವಶ್ಯಕತೆಯಿದೆ. 

- ಎ.ಕೆ.ಮುಲ್ಲಾನವರ್, ಸಾಮಾಜಿಕ ಕಾರ್ಯಕರ್ತ.

ಬಡವ, ಶ್ರೀಮಂತ ಅನ್ನದೇ ಎಲ್ಲರೂ ತಮ್ಮಲ್ಲಿರುವ ಶಕ್ತಿ ಹಾಗೂ ಶ್ರಮವನ್ನು ಬಸಿಕೊಂಡರೆ ಭವಿಷ್ಯದಲ್ಲಿ ಅಂದುಕೊಂಡಿದ್ದನ್ನು ಸಲೀಸಾಗಿ ಸಾಧಿಸಬಹುದು. ನನ್ನ ತಾಯಿ ಹಾಗೂ ತಮ್ಮನನ್ನು ಸುಖವಾಗಿ ನೋಡಿಕೊಳ್ಳುವುದೆ ನನ್ನ ಆಸೆ. ಭವಿಷ್ಯದಲ್ಲಿ ನಾನು ಡಾಕ್ಟರ್ ಆಗಬೇಕು. ಅದರಲ್ಲೂ ಬಡವರ ಸೇವೆ ಮಾಡುವುದೆ ನನ್ನ ಕನಸು.

  -ಮಿನಾಜ್

Writer - ಫಾರೂಕ್ ಮಕಾನದಾರ

contributor

Editor - ಫಾರೂಕ್ ಮಕಾನದಾರ

contributor

Similar News