ಎಪ್ರಿಲ್ 1ರಿಂದ ಹೆಚ್ಚಲಿದೆ ಅಗತ್ಯ ಔಷಧಿಗಳ ಬೆಲೆ
ಹೊಸದಿಲ್ಲಿ, ಮಾ.24: ಎಪ್ರಿಲ್ 1ರಿಂದ ಹೆಚ್ಚಿನ ಅಗತ್ಯ ಔಷಧಿಗಳ ಬೆಲೆಗಳಲ್ಲಿ ಶೇ.2ರಷ್ಟು ಏರಿಕೆಯಾಗಲಿದೆ. ರಖಂ ದರ ಸೂಚ್ಯಂಕದಂತೆ ವಾರ್ಷಿಕ ದರ ಏರಿಕೆಯನ್ನು ಅನುವುಗೊಳಿಸಲು ಫಾರ್ಮಾ ಕಂಪೆನಿಗಳಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ನ್ಯಾಷನಲ್ ಫಾರ್ಮಾಸುಟಿಕಲ್ ಪ್ರೈಸಿಂಗ್ ಅಥಾರಿಟಿ ಸೂಚಿಸಿದೆ.
ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯಲ್ಲಿರುವ ಔಷಧಿಗಳ ದರವನ್ನು ಸರಕಾರ ನೇರವಾಗಿ ನಿಯಂತ್ರಿಸುತ್ತಿದ್ದು ಈ ಪಟ್ಟಿಯಲ್ಲಿ ಕ್ಯಾನ್ಸರ್ ಔಷಧಿಗಳಿಂದ ಹಿಡಿದು ಎಆರ್‌ಟಿ ಔಷಧಿಗಳು ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಹೆಪಾಟಿಟಿಸ್ ಹಾಗೂ ಕಿಡ್ನಿ ರೋಗಗಳ ಔಷಧಿಗಳೂ ಸೇರಿದಂತೆ 875 ಔಷಧಿಗಳಿವೆ. ಈ ಪಟ್ಟಿಯಲ್ಲಿ ಆ್ಯಂಟಿಬಯೋಟಿಕ್ಸ್, ಅನಾಲ್ಜೆಸ್ಟಿಕ್ಸ್ ಸ್ಟೆಂಟ್‌ಗಳು ಹಾಗೂ ಕಾಂಡೋಂಗಳೂ ಸೇರಿವೆ. ಈ ಪಟ್ಟಿಯಲ್ಲಿದ್ದ ಔಷಧಿಗಳ ಬೆಲೆಗಳನ್ನು ವಾರ್ಷಿಕ ಶೇ.10ರಷ್ಟು ಏರಿಸಲು ಕಂಪೆನಿಗಳಿಗೆ ಅನುಮತಿಯಿದೆ. ಪ್ರಸಕ್ತ 1 ಲಕ್ಷ ಕೋಟಿ ರೂ. ವೌಲ್ಯದ ಫಾರ್ಮಾ ಮಾರುಕಟ್ಟೆಯ ಶೇ.30ರಷ್ಟು ಸರಕಾರದ ನೇರ ದರ ನಿಯಂತ್ರಣದಲ್ಲಿದೆ.
ಮುಂದಿನ ತಿಂಗಳಿನಿಂದ ಅಗತ್ಯ ಔಷಧಿಗಳ ದರ ಏರಿಕೆಯಿಂದಾಗಿ ಗ್ರಾಹಕರ ಬಿಲ್ಲಿನಲ್ಲಿ ಸ್ವಲ್ಪಹೆಚ್ಚಳವಾದರೂ ಅದರಿಂದಾಗಿ ದರ ನಿಗದಿ ವಿಚಾರದಲ್ಲಿ ಕಳೆದೆರಡು ವರ್ಷಗಳಿಂದ ಒತ್ತಡ ಅನುಭವಿಸುತ್ತಿರುವ ಫಾರ್ಮಾ ಕಂಪೆನಿಗಳು ಸ್ವಲ್ಪನಿರಾಳವಾಗಬಹುದು. ಕಳೆದೊಂದು ವರ್ಷದ ಅವಧಿಯಲ್ಲಿ ಕ್ಯಾನ್ಸರ್ ಔಷಧಿಗಳ ಬೆಲೆ ಶೇ.13.86ರಷ್ಟು ಕಡಿಮೆಯಾಗಿದೆಯೆಂದು ಎನ್‌ಪಿಪಿಎ ಹೇಳುತ್ತದೆ. ಅಂತೆಯೇ ಡಯಾಬಿಟಿಸ್ ಔಷಧಿಗಳ ಬೆಲೆಯೂ ಕಡಿಮೆಯಾಗಿದೆ.