ಚುನಾವಣೆಯಲ್ಲಿ ಗೆಲ್ಲಿಸಿದರೆ ಗೃಹ ತೆರಿಗೆ ರದ್ದು : ದಿಲ್ಲಿ ಮುಖ್ಯಮಂತ್ರಿ ಭರವಸೆ
ಹೊಸದಿಲ್ಲಿ, ಮಾ.25: ರಾಜಧಾನಿಯ ಮೂರು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಎಪ್ರಿಲ್ 23ರಂದು ಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಂದ ಮತದಾರರಿಗೆ ಮಹತ್ವದ ಆಶ್ವಾಸನೆಯೊಂದು ದೊರೆತಿದೆ. ತಮ್ಮ ಪಕ್ಷವನ್ನು ಚುನಾವಣೆಗಳಲ್ಲಿ ಅಧಿಕಾರಕ್ಕೆ ತಂದಿದ್ದೇ ಆದಲ್ಲಿ ಗೃಹ ತೆರಿಗೆ ರದ್ದುಗೊಳಿಸಿ ಬಾಕಿ ಮೊತ್ತಗಳನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ. ಗೃಹ ತೆರಿಗೆ ಭ್ರಷ್ಟಾಚಾರದ ಮೂಲಬಿಂದುವಾಗಿದೆ ಎಂದೂ ಕೇಜ್ರಿವಾಲ್ ಹೇಳಿದ್ದಾರಲ್ಲದೆ, ವಾಣಿಜ್ಯ ತೆರಿಗೆ ಮಾತ್ರ ಹಿಂದಿನಂತೆಯೇ ಮುಂದುವರಿಯುವುದಾಗಿ ಹೇಳಿದರು.
ಪಕ್ಷ ತನ್ನ ವಿಸ್ತೃತ ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸುತ್ತಿದ್ದು, ಸದ್ಯದಲ್ಲಿಯೇ ಅದನ್ನು ಬಿಡುಗಡೆಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇ ಆದಲ್ಲಿ ಹೊಸದಿಲ್ಲಿ ಮುನಿಸಿಪಲ್ ಕೌನ್ಸಿಲ್, ಪೂರ್ವ ದಿಲ್ಲಿ ಮುನಿಸಿಪಲ್ ಕಾರ್ಪೊರೇಶನ್ ಹಾಗೂ ದಕ್ಷಿಣ ದಿಲ್ಲಿ ಮುನಿಸಿಪಲ್ ಕಾರ್ಪೊರೇಶನ್ನುಗಳನ್ನು ಲಾಭದಲ್ಲಿ ಮುನ್ನಡೆಸುವುದಾಗಿ ಹೇಳಿದರು. ಮೂರು ಸಂಸ್ಥೆಗಳೂ ಆರ್ಥಿಕ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರ ಆಶ್ವಾಸನೆಗಳು ಬಂದಿವೆ. ಮುನಿಸಿಪಲ್ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ವೇತನ ಸಿಗುವಂತೆಯೂ ಮಾಡುವುದಾಗಿ ಅವರು ಹೇಳಿದರು.
ಚುನಾವಣೆಗಳು ಎಪ್ರಿಲ್ 23ರಂದು ನಡೆದರೆ ಮತ ಎಣಿಕೆ ಎಪ್ರಿಲ್ 26ರಂದು ನಡೆಯುವುದು.