ಮಾನನಷ್ಟ ಮೊಕದ್ದಮೆ: ವಿಚಾರಣೆ ಎದುರಿಸಿದ ಕೇಜ್ರೀವಾಲ್

Update: 2017-03-25 15:59 GMT

 ಹೊಸದಿಲ್ಲಿ, ಮಾ.25: ಡಿಡಿಸಿಎ ವಿವಾದಕ್ಕೆ ಸಂಬಂಧಿಸಿ ತನ್ನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದರೆಂಬ ಕಾರಣದಿಂದ ವಿತ್ತ ಸಚಿವ ಅರುಣ್ ಜೇಟ್ಲೀ ಹೂಡಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಹಾಗೂ ಇತರ ಐವರು ‘ಆಪ್’ ಮುಖಂಡರು ಇಲ್ಲಿಯ ನ್ಯಾಯಾಲಯದೆದುರು ಹಾಜರಾದರು.

  ಮುಖ್ಯ ಮೆಟ್ರೊಪೊಲಿಟನ್ ನ್ಯಾಯಾಧೀಶರು ವಿಚಾರಣೆ ಆರಂಭಿಸುತ್ತಿದ್ದಂತೆಯೇ ವಿಚಾರಣೆಗೆ ಜೇಟ್ಲೀ ಗೈರಾಗಿರುವ ವಿಷಯದಲ್ಲಿ ಉಭಯ ಕಡೆಯ ವಕೀಲರೂ ಕಾವೇರಿದ ವಾಗ್ವಾದದಲ್ಲಿ ತೊಡಗಿದರು. ಈ ವೇಳೆ ನ್ಯಾಯಾಲಯದಲ್ಲಿ ಗೊಂದಲದ ಸ್ಥಿತಿ ನೆಲೆಸಿತ್ತು. ತಮಗೆ ಗಂಭೀರ ಬೆದರಿಕೆ ಇದೆ ಎಂದು ಕೇಜ್ರೀವಾಲ್ ಹಾಗೂ ಇತರ ಆರೋಪಿಗಳು ನ್ಯಾಯಾಲಯಕ್ಕೆ ಅರಿಕೆ ಮಾಡಿಕೊಂಡ ಹಿನ್ನೆಲೆಯಲ್ಲಿ , ಪ್ರಕರಣಕ್ಕೆ ಸಂಬಂಧಪಟ್ಟವರನ್ನು ಹೊರತುಪಡಿಸಿ ಉಳಿದವರನ್ನು ಹೊರಗೆ ಕಳುಹಿಸಲಾಯಿತು.

     ಪ್ರಕರಣಕ್ಕೆ ಸಂಬಂಧಿಸಿ ಕೇಜ್ರೀವಾಲ್, ಅಶುತೋಷ್, ಕುಮಾರ ವಿಶ್ವಾಸ್, ಸಂಜಯ್ ಸಿಂಗ್, ರಾಘವ ಚಡ್ಡಾ ಮತ್ತು ದೀಪಕ್ ಬಾಜ್‌ಪಾಯ್ ವಿರುದ್ದ ನ್ಯಾಯಾಧೀಶರು ನೋಟಿಸ್ ಸಿದ್ದಗೊಳಿಸಿದರು. ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘಟನೆ (ಡಿಡಿಸಿಎ)ಯ ಪ್ರಕರಣವೊಂದಕ್ಕೆ ಸಂಬಂಧಿಸಿ, ಸುಮಾರು ಒಂದು ದಶಕದಿಂದ ಅದರ ಅಧ್ಯಕ್ಷರಾಗಿರುವ ಅರುಣ್ ಜೇಟ್ಲೀ ವಿರುದ್ದ ಕೇಜ್ರೀವಾಲ್ ಮಾನಹಾನಿಕರ ಹೇಳಿಕೆ ನೀಡಿದ್ದರೆಂದು ಆರೋಪಿಸಿ ಜೇಟ್ಲೀ , 10 ಕೋಟಿ ರೂ. ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News