ರಾಜಕುಮಾರ: ಕುಮಾರನಿಗೆ ಭಾರವಾದ ಇಮೇಜು!

Update: 2017-03-25 18:33 GMT

ಸ್ಟಾರ್ ಹೀರೋಗೆ ಸಿನೆಮಾ ಮಾಡುವಾಗ ಸಹಜವಾಗಿಯೇ ನಿರ್ದೇಶಕರಿಗೆ ಒಂದಷ್ಟು ಸವಾಲುಗಳು ಎದುರಾಗುತ್ತವೆ. ಇಲ್ಲಿ ಕಥಾನಾಯಕನ ಇಮೇಜಿಗೆ ಧಕ್ಕೆಯಾಗದಂತೆ ಚಿತ್ರಕಥೆ ಹೆಣೆಯಬೇಕಾಗುತ್ತದೆ. ಕತೆಗೆ ಅಗತ್ಯವಿಲ್ಲದಿದ್ದರೂ ಹೀರೋಗೆಂದೇ ಕೆಲವು ಸಂಭಾಷಣೆಗಳನ್ನು ಬರೆಯಬೇಕು. ಈ ಡೈಲಾಗ್‌ಗಳು ಪ್ರಸ್ತುತ ಚಾಲ್ತಿಯಲ್ಲಿರುವ ಇತರ ಹೀರೋಗಳಿಗೂ ಚುರುಕು‘ ಮುಟ್ಟಿಸುವಂತಿರಬೇಕು! ಅದರಲ್ಲೂ ಈ ಚಿತ್ರದ ಶೀರ್ಷಿಕೆಯೂ ಬಲು ಭಾರ’. ಇವೆಲ್ಲಾ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಈ ಸಿನೆಮಾ ಮಾಡಿದ್ದಾರೆ. ಮನರಂಜನಾತ್ಮಕ ಅಂಶಗಳ ಜೊತೆ ಒಂದೊಳ್ಳೆ ಸಂದೇಶವೂ ಇಲ್ಲಿದೆ.

ಮಧ್ಯಾಂತರವರೆಗಿನ ಕತೆ ನಡೆಯುವುದು ದೂರದ ಆಸ್ಟ್ರೇಲಿಯಾದಲ್ಲಿ. ನಾಯಕಿಯ ಪರಿಚಯ, ಆಕೆಯೊಂದಿಗಿನ ಪ್ರೀತಿಯೂ ಅಲ್ಲಿಯೇ ಸಾಕ್ಷಾತ್ಕಾರವಾಗುತ್ತದೆ. ಅಲ್ಲಿ ಅವಘಡವೊಂದರಲ್ಲಿ ತನ್ನವರನ್ನೆಲ್ಲಾ ಕಳೆದುಕೊಂಡ ಕಥಾನಾಯಕ ಸಿದ್ದಾರ್ಥ್ ಕನ್ನಡ ನಾಡಿಗೆ ಮರಳುತ್ತಾನೆ. ಸಾಗರದಾಚೆ ಬೆಳೆದ ಹುಡುಗ ಹಿಂದೊಮ್ಮೆ ತನಗೆ ನೆಲೆಯಾಗಿದ್ದ ಅನಾಥಾಲಯಕ್ಕೆ ಮರಳುತ್ತಾನೆ. ತನ್ನ ತಂದೆಯ ಹೆಸರಿಗೆ ಮಸಿ ಬಳಿದವರನ್ನು ಕಂಡುಹಿಡಿಯುವ ಹೊಣೆಗಾರಿಕೆ ಅವನ ಹೆಗಲೇರುತ್ತದೆ. ಇಲ್ಲಿ ಖಳನನ್ನು ಸದೆಬಡಿಯುವ ಚಿತ್ರಣವಿಲ್ಲ. ಬದಲಿಗೆ ಆತನ ಮನಃಪರಿವರ್ತನೆ ಮಾಡುವ ನಿರೂಪಣೆಯೊಂದಿಗೆ ನಿರ್ದೇಶಕರು ಕೊಂಚ ಭಿನ್ನ ಹಾದಿ ತುಳಿದಿದ್ದಾರೆ. ಹಾಗೆಂದು ಇಲ್ಲಿ ಹೊಡೆದಾಟಗಳಿಲ್ಲವೆಂದಲ್ಲ. ಅಭಿಮಾನಿಗಳಿಗಾಗಿ ಭರ್ಜರಿ ಆ್ಯಕ್ಷನ್, ಆಕರ್ಷಕ ಡಾನ್ಸ್‌ಗಳಿವೆ. ಇವೆಲ್ಲವನ್ನಿಟ್ಟುಕೊಂಡೇ ಸುಂದರ ಕತೆಯೊಂದನ್ನು ಹೇಳಲು ಸಾಧ್ಯವಿತ್ತು. ಹೀರೋನ ಇಮೇಜಿಗೆ ನ್ಯಾಯ ಸಲ್ಲಿಸುವ ಸಂದಿಗ್ಧದಲ್ಲಿ ನಿರ್ದೇಶಕರು ಕೆಲವೆಡೆ ಹಳಿ ತಪ್ಪಿದ್ದಾರೆ.

ಚಿತ್ರದ ದ್ವಿತಿಯಾರ್ಧದ ಬಹುಪಾಲು ಚಿತ್ರಣ ನಡೆಯೋದು ವೃದ್ಧಾಶ್ರಮದಲ್ಲಿ. ಹಾಗಾಗಿ ಕತೆಗೆ ದೊಡ್ಡ ಕ್ಯಾನ್ವಾಸ್ ಇದೆ. ಮಕ್ಕಳಿಂದ ತಿರಸ್ಕೃತರಾಗಿ ಆಶ್ರಮದಲ್ಲಿ ನೆಲೆ ಕಂಡುಕೊಂಡ ವೃದ್ಧರ ಜೊತೆಗಿನ ನಾಯಕನ ಒಡನಾಟದಲ್ಲಿ ನಿರ್ದೇಶಕರು ಕೆಲವು ಭಾವನಾತ್ಮಕ ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ಹಿರಿಯ ಕಲಾವಿದರಿರುವ ಆ ಸನ್ನಿವೇಶಗಳು ಮುದ ನೀಡುತ್ತವೆ. ಅವರ ಸಂಕಷ್ಟಗಳು, ವಯೋಸಹಜ ಸಿಟ್ಟು, ತಾಕಲಾಟಗಳನ್ನು ಹಿಡಿದಿಡುವ ಪ್ರಯತ್ನ ಮೆಚ್ಚುವಂಥದ್ದು. ಆದರೆ ಕೆಲವೊಮ್ಮೆ ಈ ಸನ್ನಿವೇಶಗಳು ಕೂಡ ನಾಯಕನ ಗುಣಗಾನ, ವೈಭವೀಕರಣಕ್ಕೆ ಮೀಸಲಾಗಿ ಕತೆಯಿಂದ ಪ್ರತ್ಯೇಕವಾಗುಳಿಯುತ್ತವೆ. ಹೀಗೆ, ಒಂದಷ್ಟು ಓರೆಕೋರೆಗಳ ಮಧ್ಯೆಯೇ ಪೋಷಕರನ್ನು ಗೌರವಿಸಬೇಕೆನ್ನುವ ಸಂದೇಶದೊಂದಿಗೆ ನಿರ್ದೇಶಕರು ಸಿನೆಮಾ ಮುಗಿಸುತ್ತಾರೆ.

ಇನ್ನು ನಾಯಕ ಪುನೀತ್ ರಾಜಕುಮಾರ್ ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತಿದ್ದಾರೆ. ಒಂದೊಳ್ಳೆಯ ಕತೆ ಹೇಳಹೊರಟಿರುವ ನಿರ್ದೇಶಕರೂ ಕೂಡ ಈ ಹಂತದಲ್ಲಿ ಹೀರೋಗೆ ಶರಣಾಗಿದ್ದಾರೆ! ಇದರಿಂದಾಗಿ ಕತೆಗಿಂತ ಹೀರೋನ ಇಮೇಜಿಗೇ ಹೊಳಪು ಹೆಚ್ಚಾದಂತಾಗಿದೆ. ಸಾಮಾನ್ಯವಾಗಿ ಪುನೀತ್ ಸಿನೆಮಾಗಳಲ್ಲಿ ಡಬಲ್ ಮೀನಿಂಗ್ ಡೈಲಾಗ್ ಇರೋಲ್ಲ. ಅವರು ಪ್ರಜ್ಞಾಪೂರ್ವಕವಾಗಿ ಇಂತಹ ಸಂಭಾಷಣೆಗಳನ್ನು ತಮ್ಮ ಸಿನೆಮಾಗಳಿಂದ ದೂರವಿಡುತ್ತಾರೆ. ಆದರೆ ಈ ಚಿತ್ರದಲ್ಲಿ ಬೇರೆ ಪಾತ್ರಗಳ ಮೂಲಕ ಅದು ಹೇಗೋ ಅಂತಹ ಮೂರ್ನಾಲ್ಕು ಡೈಲಾಗ್‌ಗಳು ನುಸುಳಿವೆ! ಎಂದಿನಂತೆ ಆ್ಯಕ್ಷನ್, ಡಾನ್ಸ್‌ನಲ್ಲಿ ಪುನೀತ್‌ಗೆ ಫುಲ್ ಮಾರ್ಕ್ಸ್ ಕೊಡಬಹುದು. ಹಾಡುಗಳಲ್ಲಿ ಮಿಂಚುವ ನಾಯಕಿ ಪ್ರಿಯಾ ಆನಂದ್‌ಗೆ ಅಭಿನಯಕ್ಕೆ ಹೆಚ್ಚು ಅವಕಾಶವಿಲ್ಲ. ಅನಂತನಾಗ್, ದತ್ತಣ್ಣ, ಅಶೋಕ್, ಶರತ್‌ಕುಮಾರ್, ಭಾರ್ಗವಿ ನಾರಾಯಣ್, ಅಚ್ಯುತ್‌ಕುಮಾರ್, ವಿಜಯಲಕ್ಷ್ಮೀ ಸಿಂಗ್, ರಂಗಾಯಣ ರಘು, ಚಿಕ್ಕಣ್ಣ ಸೇರಿದಂತೆ ಚಿತ್ರದಲ್ಲಿ ಕಲಾವಿದರ ದೊಡ್ಡ ಬಳಗವೇ ಇದೆ. ಅವರೆಲ್ಲರು ತಮ್ಮ ಚೆಂದದ ನಟನೆಯಿಂದ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಒಳ್ಳೆಯ ಕತೆಯನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕರಿಗೆ ಚಿತ್ರವನ್ನು ಮತ್ತಷ್ಟು ಆಪ್ತವಾಗಿ ಕಟ್ಟಿಕೊಡುವ ಅವಕಾಶಗಳಿದ್ದವು. ಚಿತ್ರದ ಮೊದಲಾರ್ಧದ ನಿರೂಪಣೆ ಇನ್ನಷ್ಟು ಬಿಗಿಯಾಗಿರಬೇಕಿತ್ತು ಎನಿಸದಿರದು. ವಿ.ಹರಿಕೃಷ್ಣ ಸಂಗೀತ ಸಂಯೋಜನೆ, ವಿಜಯಪ್ರಕಾಶ್ ಕಂಠದಲ್ಲಿ ಮೂಡಿಬಂದಿರುವ ಗೊಂಬೆ ಹೇಳುತೈತೆ...’ ಹಾಡು ಮತ್ತೆ ಮತ್ತೆ ಗುನುಗುವಂತಿದೆ. ಪುನೀತ್ ಅಭಿಮಾನಿಗಳು ಎಂಜಾಯ್ ಮಾಡಬಹುದಾದ ಚಿತ್ರವಿದು. 


ನಿರ್ದೇಶನ : ಸಂತೋಷ್ ಆನಂದ್‌ರಾಮ್, ನಿರ್ಮಾಣ : ವಿಜಯ್ ಕಿರಗಂದೂರ್, ಸಂಗೀತ : ವಿ.ಹರಿಕೃಷ್ಣ, ಛಾಯಾಗ್ರಹಣ : ವೆಂಕಟೇಶ್ ಅಂಗುರಾಜ್, ತಾರಾಗಣ : ಪುನೀತ್ ರಾಜಕುಮಾರ್, ಪ್ರಿಯಾ ಆನಂದ್, ಅನಂತನಾಗ್, ಪ್ರಕಾಶ್ ರೈ, ಅಚ್ಯುತ್‌ಕುಮಾರ್ ಮತ್ತಿತರರು.

ರೇಟಿಂಗ್ - **1/2

Writer - ಶಶಿಧರ ಚಿತ್ರದುರ್ಗ

contributor

Editor - ಶಶಿಧರ ಚಿತ್ರದುರ್ಗ

contributor

Similar News