ಎಪ್ರಿಲ್ 1ರಿಂದ ಕಾರು, ಮೋಟಾರ್ ಸೈಕಲ್, ವಿಮೆ ತುಟ್ಟಿ
Update: 2017-03-26 23:10 IST
ಹೊಸದಿಲ್ಲಿ, ಮಾ.26: ಏಜೆಂಟರಿಗೆ ನೀಡುವ ಕಮಿಷನ್ ಪರಿಷ್ಕರಿಸಲು ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಒಪ್ಪಿಗೆ ಸೂಚಿಸುವುದರೊಂದಿಗೆ ಎಪ್ರಿಲ್ 1ರಿಂದ ಕಾರು, ಮೋಟಾರ್ ಸೈಕಲ್ ಮತ್ತು ಆರೋಗ್ಯ ವಿಮೆ ತುಟ್ಟಿಯಾಗಲಿದೆ.
ಪರಿಷ್ಕರಿಸಿದ ಬಳಿಕ ಪ್ರೀಮಿಯಂ ದರದ ಬದಲಾವಣೆ ಹಾಲಿ ದರಕ್ಕಿಂತ ಶೇ. 5 ಹೆಚ್ಚು/ಕಡಿಮೆಗೆ ಸೀಮಿತವಾಗಿರುತ್ತದೆ. ಥರ್ಡ್ ಪಾರ್ಟಿ ಮೋಟಾರ್ ಇನ್ಷೂರೆನ್ಸ್ ದರದಲ್ಲೂ ಹೆಚ್ಚಳವಾಗಿದ್ದು ಇದು ಎಪ್ರಿಲ್‌ನಿಂದ ಜಾರಿಗೆ ಬರಲಿದೆ. ಕಮಿಷನ್ ಮತ್ತು ಸಂಭಾವನೆ ದರದಲ್ಲೂ ಪರಿಷ್ಕರಣೆಯಾಗಲಿದ್ದು ಪುರಸ್ಕಾರ ವ್ಯವಸ್ಥೆಯನ್ನು ಬಳಕೆಗೆ ತರಲಾಗುವುದು.ಅಲ್ಲದೆ ಪ್ರೀಮಿಯಂ ದರದಲ್ಲಿ ಅಥವಾ ವಿಮೆಯ ಇತರ ವ್ಯವಸ್ಥೆಯಲ್ಲಿ ಯಾವುದೇ ಅಹಿತಕರ ಬದಲಾವಣೆ ಇರುವುದಿಲ್ಲ ಎಂದು ವಿಮೆ ಸಂಸ್ಥೆಗಳು ಪ್ರಮಾಣ ಪತ್ರ ನೀಡಬೇಕು ಎಂದು ಐಆರ್‌ಡಿಎಐ ತಿಳಿಸಿದೆ.