ತಮಿಳುನಾಡು ಉಪಚುನಾವಣೆಯಲ್ಲಿ ಮತಪತ್ರ ಬಳಸಿ ಮತದಾನ?

Update: 2017-03-27 03:39 GMT

ಚೆನ್ನೈ, ಮಾ.27: ತಮಿಳುನಾಡಿನ ಆರ್.ಕೆ. ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ಎಪ್ರಿಲ್ 12ರಂದು ನಡೆಯುವ ಚುನಾವಣೆಯಲ್ಲಿ 82 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಆಯೋಗಕ್ಕೆ ತಲೆನೋವಾಗಿದೆ. ಎಲೆಕ್ಟ್ರಾನಿಕ್ ಮತದಾನ ಯಂತ್ರದಲ್ಲಿ ಕೇವಲ 63 ಅಭ್ಯರ್ಥಿಗಳ ಹೆಸರು ನೋಂದಾಯಿಸಲು ಮಾತ್ರ ಅವಕಾಶವಿದೆ. ಒಂದು ಗುಂಡಿಯನ್ನು ನೋಟಾ ಆಯ್ಕೆಗಾಗಿ ಇಡಬೇಕಾಗುತ್ತದೆ.

ಚುನಾವಣಾ ಆಯೋಗದ ವೆಬ್‌ಸೈಟಿನ ಪ್ರಕಾರ, ಪ್ರಮುಖ ರಾಜಕೀಯ ಪಕ್ಷಗಳ 11 ಡಮ್ಮಿ ಅಭ್ಯರ್ಥಿಗಳು ಕಣದಲ್ಲಿದ್ದು, ಸೋಮವಾರ ಇವರು ಕಣದಿಂದ ಹಿಂದೆ ಸರಿಯುವ ನಿರೀಕ್ಷೆ ಇದೆ. ಅಷ್ಟಾದರೂ ಒಂಬತ್ತು ಮಂದಿ ಹೆಚ್ಚುವರಿ ಅಭ್ಯರ್ಥಿಗಳು ಕಣದಲ್ಲಿರುತ್ತಾರೆ. ಇವರು ನಾಮಪತ್ರ ವಾಪಸ್ ಪಡೆದರಷ್ಟೇ ಚುನಾವಣಾ ಆಯೋಗಕ್ಕೆ ಎಲೆಕ್ಟ್ರಾನಿಕ್ ಮತಯಂತ್ರದ ಮೂಲಕ ಚುನಾವಣೆ ನಡೆಸಲು ಸಾಧ್ಯವಾಗಲಿದೆ. ಇಲ್ಲದಿದ್ದರೆ ಚುನಾವಣಾ ಆಯೋಗ ಸಾಂಪ್ರದಾಯಿಕ ವಿಧಾನಕ್ಕೇ ಮೊರೆಹೋಗಿ, ಮತಪತ್ರಗಳ ಮೂಲಕ ಚುನಾವಣೆ ನಡೆಸಬೇಕಾಗುತ್ತದೆ.

ಚುನಾವಣಾ ಸಿಬ್ಬಂದಿಗೆ ಎಂ-2 ವಿಧದ ಸಾಂಪ್ರದಾಯಿಕ ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಬಳಸಲು ಮಾತ್ರ ತರಬೇತಿ ನೀಡಿದ್ದು, ಎಂ-3 ಯಂತ್ರಗಳ ಅಥವಾ ಮತಪತ್ರ ಬಳಕೆಗೆ ತರಬೇತಿ ನೀಡಿಲ್ಲ. ಇದು ಆಯೋಗವನ್ನು ಪೇಚಿಗೆ ಸಿಲುಕಿಸಿದೆ. ಪ್ರಮುಖ ಪಕ್ಷಗಳ ಏಳು ಅಭ್ಯರ್ಥಿಗಳು ಕಣದಲ್ಲಿದ್ದು, ಕೆಲ ಸಣ್ಣ ಪಕ್ಷಗಳ ಅಭ್ಯರ್ಥಿಗಳು ಹಾಗೂ 57 ಮಂದಿ ಪಕ್ಷೇತರರು ಕಣದಲ್ಲಿದ್ದಾರೆ. ಅಂತಿಮವಾಗಿ ಕಣದಲ್ಲಿ ಉಳಿಯುವವರ ಸಂಖ್ಯೆ ಸೋಮವಾರ ಅಪರಾಹ್ನ 3 ಗಂಟೆಗೆ ತಿಳಿಯಲಿದೆ. 63ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ, ಪರ್ಯಾಯ ಆಯ್ಕೆಯಾಗಿ ಚುನಾವಣಾ ಆಯೋಗವನ್ನು ಸಂಪರ್ಕಿಸುತ್ತೇವೆ ಎಂದು ಹಿರಿಯ ಚುನಾವಣಾ ಅಧಿಕಾರಿ ಹೇಳಿದ್ದಾರೆ.

ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹೆಸರಿನ ಪಕ್ಷೇತರ ಅಭ್ಯರ್ಥಿಗಳೇ ಹಲವು ಮಂದಿ ಕಣದಲ್ಲಿದ್ದು, ಗೊಂದಲ ಸೃಷ್ಟಿಸುವ ಸಲುವಾಗಿ ಈ ತಂತ್ರವನ್ನು ವಿರೋಧಿಗಳು ಅನುಸರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News