ಮರ ಕಡಿಯಲು ಬಿಡದ ಯುವತಿಯನ್ನು ಜೀವಂತವಾಗಿ ಸುಟ್ಟ ದುಷ್ಟರು !
ಜೋಧ್ ಪುರ, ಮಾ.27: ಮರಗಳನ್ನು ಕಡಿಯುವುದಕ್ಕೆ ವಿರೋಧ ವ್ಯಕ್ತಪಡಿಸಿದ 20 ಹರೆಯದ ಯುವತಿಯನ್ನು ಜೀವಂತವಾಗಿ ಸುಟ್ಟು ಹಾಕಿರುವ ಅಮಾನವೀಯ ಘಟನೆ ರಾಜಸ್ಥಾನದ ಜೋಧ್ ಪುರದಲ್ಲಿ ರವಿವಾರ ನಡೆದಿದೆ.
ಲಲಿತಾ ಮರಗಳನ್ನು ಉಳಿಸುವುದಕ್ಕಾಗಿ ಪ್ರಾಣ ಕಳೆದುಕೊಂಡ ದುರ್ದೈವಿ.
ರಸ್ತೆ ನಿರ್ಮಿಸುವುದಕ್ಕಾಗಿ ಲಲಿತಾ ಅವರ ಫಾರ್ಮ್ ನಲ್ಲಿದ್ದ ಮರಗಳನ್ನು ಕತ್ತರಿಸಲು ಗ್ರಾಮಸ್ಥರು ಬಂದಾಗ ಲಲಿತಾ ಅವರ ಕ್ರಮವನ್ನು ವಿರೋಧಿಸಿದರು. ಆಗ ಕೋಪಗೊಂಡ ಗುಂಪೊಂದು ಲಲಿತಾರ ಮೇಲೆ ದಾಳಿ ನಡೆಸಿತು. ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು ಎನ್ನಲಾಗಿದೆ. ಗಂಭೀರ ಗಾಯಗೊಂಡ ಆಕೆಯನ್ನು ಜೋಧ್ ಪುರದ ಎಂಜೆಎಚ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಲಲಿತಾ ಸೋಮವಾರ ಬೆಳಗ್ಗೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಸರಪಂಚ(ಗ್ರಾಮದ ಮುಖ್ಯಸ್ಥ) ರಣ್ವೀರ್ ಸಿಂಗ್ ಕೈವಾಡವಿದೆ ಎಂದು ಪೊಲೀಸರು ಹೇಳಿದ್ದಾರೆ. "ಸರಪಂಚ ಮತ್ತು ಇತರರು ಸೇರಿಕೊಂಡು ಯುವತಿಯ ಮೇಲೆ ಹಲ್ಲೆ ನಡೆಸಿ ಆಕೆಯ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.ಯುವತಿಯ ಶವವನ್ನು ಜೋಧ್ ಪುರದ ಎಂಜೆಎಚ್ ಆಸ್ಪತ್ರೆಯಲ್ಲಿಡಲಾಗಿದೆ. ಯುವತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹತ್ತು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ” ಎಂದು ಪೊಲೀಸ್ ಅಧಿಕಾರಿ ಸುರೇಶ್ ಚೌಧರಿ ಮಾಹಿತಿ ನೀಡಿದ್ದಾರೆ.