ಈ ಬಿಎಸ್‌ಎಫ್ ಯೋಧನ ಮನೆಗೆ ಗೃಹ ಸಚಿವ ರಾಜನಾಥ್ ಸಿಂಗ್ ಹೋಗಿದ್ದೇಕೆ ?
ಹೊಸದಿಲ್ಲಿ, ಮಾ.27: ಗೃಹ ಸಚಿವ ರಾಜನಾಥ್ ಸಿಂಗ್ ಇತ್ತೀಚೆಗೆ ಮಧ್ಯ ಪ್ರದೇಶದ ತೆಕಾನ್ಪುರ್ ನಗರದಲ್ಲಿರುವ ಬಿಎಸ್‌ಎಫ್ ಅಕಾಡಮಿಗೆ ಭೇಟಿ ನೀಡಿದ ಸಂದರ್ಭ ಬಿಎಸ್‌ಎಫ್ ಯೋಧ ಸಂದೀಪ್ ಮಿಶ್ರಾ ಅವರ ನಿವಾಸಕ್ಕೆ ತೆರಳಿ ಅವರ ಕುಟುಂಬ ಸದಸ್ಯರೊಡನೆ ಮಾತನಾಡಿ ಅವರೊಂದಿಗೆ ಊಟ ಕೂಡ ಸವಿದರು. ಅಷ್ಟಕ್ಕೂ ಈ ಬಿಎಸ್‌ಎಫ್ ಯೋಧನ ಮನೆಗೆ ರಾಜನಾಥ್ ಸಿಂಗ್ ಭೇಟಿ ನೀಡಿದ್ದೇಕೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
2000ರಲ್ಲಿ ಸಂದೀಪ್ ಮಿಶ್ರಾ ಅವರು ಬಿಎಸ್‌ಎಫ್ ಸಹಾಯಕ ಕಮಾಂಡೆಂಟ್ ಆಗಿದ್ದಾಗ ಅಸ್ಸಾಂ ರಾಜ್ಯದ ತಿನ್ಸುಕಿಯಾದಲ್ಲಿ ಉಲ್ಫಾ ಉಗ್ರವಾದಿಗಳ ವಿರುದ್ಧ ಅವರ ತಂಡ ಹೋರಾಡುತ್ತಿದ್ದಾಗ ಅವರಿಗೆ ಐದು ಗುಂಡುಗಳು ತಾಗಿದ್ದರೆ, ಒಂದು ಬುಲೆಟ್ ಅವರ ಎಡ ಕಣ್ಣನ್ನು ಪ್ರವೇಶಿಸಿ ಬಲ ಕಣ್ಣಿನಿಂದ ಹೊರ ಬಂದಿತ್ತು. ಅಂದಿನಿಂದ ಅವರು ಎರಡೂ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು.
ಆದರೂ ಅವರ ದೃಷ್ಟಿಹೀನತೆ ಅವರನ್ನು ಹನ್ನೆರಡು ವರ್ಷಗಳ ಹಿಂದೆ ಕೈಹಿಡಿದ ಇಂದ್ರಾಕ್ಷಿಯವರಿಗೆ ಒಂದು ಸಮಸ್ಯೆಯೆಂದು ಯಾವತ್ತೂ ಅನಿಸಿಯೇ ಇರಲಿಲ್ಲ. ಸಿದ್ಧಾರ್ಥ ನಗರ ಜಿಲ್ಲೆಯ ಬನ್ಸಿ ಎಂಬಲ್ಲಿನ ವಕೀಲರೊಬ್ಬರ ಪುತ್ರಿಯಾಗಿದ್ದಾರೆ ಇಂದ್ರಾಕ್ಷಿ. ಮಿಶ್ರಾ ಅವರ ಕುಟುಂಬ 2004ರಲ್ಲಿ ನೀಡಿದ್ದ ವೈವಾಹಿಕ ಜಾಹೀರಾತನ್ನು ನೋಡಿ ಈ ಮನುಷ್ಯ ದೇಶಕ್ಕಾಗಿ ಇಷ್ಟೆಲ್ಲಾ ತ್ಯಾಗ ಮಾಡಬಹುದಾದರೆ ಅವರನ್ನೇಕೆ ವಿವಾಹವಾಗಬಾರದು ಎಂದು ಹೇಳಿ ಅವರನ್ನೇ ವಿವಾಹವಾಗುವುದಾಗಿ ಪಣ ತೊಟ್ಟು ಅಂತೆಯೇ ನಡೆದುಕೊಂಡು ಮಿಶ್ರಾ ಅವರೊಂದಿಗೆ ಸುಖಕರ ದಾಂಪತ್ಯ ಜೀವನ ನಡೆಸುತ್ತಿದ್ದಾರೆ ಇಂದ್ರಾಕ್ಷಿ.
ಈ ವಿಚಾರವನ್ನು ತಿಳಿದುಕೊಂಡೇ ಗೃಹ ಸಚಿವ ಸಿಂಗ್ ಅವರನ್ನು ಕಂಡು ಮಾತನಾಡಲು ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ‘‘ದೇಶದ ಮೇಲಿನ ಪ್ರೀತಿಯೇ ಸಂದೀಪ್ ಹಾಗೂ ಇಂದ್ರಾಕ್ಷಿಯವರನ್ನು ಒಂದುಗೂಡಿಸಿದೆ’’ ಎಂದು ಅವರನ್ನು ಭೇಟಿಯಾದ ನಂತರ ಸಿಂಗ್ ಟ್ವೀಟ್ ಮಾಡಿದ್ದರು.
ರಾಷ್ಟ್ರಪತಿಯವರ ಪೊಲೀಸ್ ಪದಕ ವಿಜೇತರಾಗಿರುವ ಮಿಶ್ರಾ ಅವರು ಪ್ರಸಕ್ತ ತೆಕಾನ್ಪುರದಲ್ಲಿರುವ ಬಿಎಸ್‌ಎಫ್ ಪುನರ್ವಸತಿ ಕೇಂದ್ರ ಸ್ವಯಂ ಇಲ್ಲಿ ಕಂಪ್ಯೂಟರ್ ತರಬೇತುದಾರರಾಗಿದ್ದಾರೆ.