ಪುತ್ರನ ಕೊಂದ 10 ಭಾರತೀಯರಿಗೆ ಕ್ಷಮಾದಾನ ನೀಡಿದ ಪಾಕಿಸ್ತಾನಿ ತಂದೆ
ಹೊಸದಿಲ್ಲಿ, ಮಾ.27: ಅಬುಧಾಬಿಯಲ್ಲಿ 2015ರಲ್ಲಿ ತನ್ನ ಪುತ್ರನನ್ನು ಕೊಂದ 10 ಮಂದಿ ಭಾರತೀಯರಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದ್ದರೆ, ಇದೀಗ ಕೊಲೆಗೀಡಾದ ವ್ಯಕ್ತಿಯ ಪಾಕಿಸ್ತಾನಿ ತಂದೆ ತನ್ನ ಪುತ್ರನ ಹಂತಕರಿಗೆ ಕ್ಷಮಾಪಣೆ ನೀಡಲು ಮುಂದೆ ಬಂದಿದ್ದಾರೆ.
ಅವರ ಮನವಿಗೆ ಸ್ಪಂದಿಸಿರುವ ಯುಎಇ ನ್ಯಾಯಾಲಯವೊಂದು ಅವರಿಗೆ ‘ಬ್ಲಡ್ ಮನಿ’ ಅಥವಾ ಪರಿಹಾರ ನೀಡಬೇಕೆಂದು ಹೇಳಿದೆ. ಆದರೆ ಕ್ಷಮಾಪಣೆ ವಿಚಾರದಲ್ಲಿ ನ್ಯಾಯಾಲಯ ತನ್ನ ಆದೇಶವನ್ನು ಇನ್ನಷ್ಟೇ ನೀಡಬೇಕಿದೆ. ಆದರೆ ಶಿಕ್ಷೆಗೊಳಗಾಗಿರುವ ಎಲ್ಲಾ 10 ಮಂದಿಯ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳೂ ಇವೆ.
ಇಸ್ಲಾಮಿಕ್ ಕಾನೂನು ಇಲ್ಲವೇ ಶರೀಅತ್ ಕಾನೂನಿನ ಪ್ರಕಾರ ಎರಡೂ ಕಡೆಗಳು ಹೊಂದಾಣಿಕೆ ಮಾಡಿಕೊಂಡರೆ ಹಾಗೂ ತಪ್ಪಿತಸ್ಥರನ್ನು ಕ್ಷಮಿಸಿದರೆ ಸಂತ್ರಸ್ತನ ಕುಟುಂಬ ಮರಣದಂಡನೆ ಶಿಕ್ಷೆಯ ವಿರುದ್ಧ ಅಪೀಲು ಸಲ್ಲಿಸಬಹುದಾಗಿದೆ.
‘‘ನಾನು ನನ್ನ ಪುತ್ರನನ್ನು ಕಳೆದುಕೊಂಡಿರುವುದು ದುರದೃಷ್ಟಕರ. ಆ ಹತ್ತು ಮಂದಿಯನ್ನು ಕ್ಷಮಿಸಿದ್ದೇನೆ. ನಿಜ ಹೇಳಬೇಕೆಂದರೆ ಅಲ್ಲಾಹ್ ಅವರನ್ನು ಕಾಪಾಡಿದ್ದಾನೆ ಎಂದು ಕೊಲೆಗೀಡಾಗಿರುವ ಮುಹಮ್ಮದ್ ಫರ್ಹಾನ್ ತಂದೆ ಮುಹಮ್ಮದ್ ರಿಯಾಝ್ ಹೇಳಿದ್ದಾರೆ. ಯುವಜನರು ಇಂತಹ ಕೃತ್ಯಗಳಲ್ಲಿ ತೊಡಗಬಾರದೆಂದು ನಾನು ಮನವಿ ಮಾಡುತ್ತೇನೆ ಎಂದೂ ಅವರು ಹೇಳಿದ್ದಾರೆ.
ಸಂತ್ರಸ್ತನ ಕುಟುಂಬಕ್ಕೆ ಪರಿಹಾರವನ್ನು ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ದುಬೈ ಮೂಲದ ಉದ್ಯಮಿ ಎಸ್.ಪಿ.ಸಿಂಗ್ ಒಬೆರಾಯ್ ನೀಡಲಿದ್ದಾರೆ. ತಮ್ಮ ಟ್ರಸ್ಟ್ ರಿಯಾಝ್ ಅವರನ್ನು ಯುಎಇಗೆ ಆಮಂತ್ರಿಸಿದ್ದು, ಅದಕ್ಕಾಗಿ ಅವರಿಗೆ ವೀಸಾ ಹಾಗೂ ವಸತಿಯನ್ನೂ ಏರ್ಪಾಡು ಮಾಡಿದೆ. ಶರೀಅತ್ ಕಾನೂನಿನ ಪ್ರಕಾರ ಅವರಿಗೆ ನೀಡಲೆಂದು 2,00,000 ದಿರ್ಹಮ್ ಪರಿಹಾರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ’’ ಎಂದು ಒಬೆರಾಯ್ ಹೇಳಿದ್ದಾರೆ.