ಸರಕಾರದ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಮಾ.27: ಸರಕಾರದ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯ ನೀಡುವುದಕ್ಕೆ ಆಧಾರ್ ಕಾರ್ಡ್ ನ್ನು ಕಡ್ಡಾಯ ಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.
ಆಧಾರ್ ಕಾರ್ಡ್ ನ್ನು ಕಡ್ಡಾಯಗೊಳಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಲು 7 ಸದಸ್ಯ ಪೀಠವನ್ನು ರಚಿಸಬೇಕು ಎಂಬ ವಾದವನ್ನು ತಳ್ಳಿ ಹಾಕಿರುವ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹಾರ್ ನೇತೃತ್ವದ ನ್ಯಾಯಪೀಠ ಕಲ್ಯಾಣೇತರ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಬಹುದು ಎಂದು ಹೇಳಿದೆ.
ಸರಕಾರ ತನ್ನ ಕಲ್ಯಾಣ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಆಧಾರ್ ಕಡ್ಡಾಯಗೊಳಿಸುವಂತಿಲ್ಲ. ಬ್ಯಾಂಕ್ ಖಾತೆಗಳನ್ನು ತೆರೆಯಲು ಆಧಾರ್ ಕಾರ್ಡ್ ಬಳಸುವುದನ್ನು ಸರಕಾರ ತಡೆಯಬಾರದು. ಕೇಂದ್ರ ಸರಕಾರದ ಯೋಜನೆಗಳಾದ ಶಾಲಾ ಮಕ್ಕಳಿಗೆ ಬಿಸಿಯೂಟದ ಯೋಜನೆ, ವಿದ್ಯಾರ್ಥಿ ವೇತನ, ಹಿಂದುಳಿದ ವರ್ಗ ಮತ್ತು ಅಂಗವಿಕಲರಿಗೆ ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್ ನ್ನು ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆಧಾರ್ ಕಾರ್ಡ್ ಇಲ್ಲ ಎಂದ ಮಾತ್ರಕ್ಕೆ ಅರ್ಹ ಫಲಾನುಭವಿಗಳಿಗೆ ಸೌಲಭ್ಯವನ್ನು ನಿರಾಕರಿಸುವಂತಿಲ್ಲ ಎಂದು ಸ್ಪಷ್ಟನೆ ನೀಡಿದೆ
ಆಧಾರ‍್ ಗೆ 2015 ರ ಅಕ್ಟೋಬರ್ 15 ರಂದು ನಿರ್ಬಂಧಗಳನ್ನು ತೆರವುಗೊಳಿಸಿದ್ದ ಸುಪ್ರೀಂ ಕೋರ್ಟ್ ಮನ್ರೇಗಾ, ಜನ್ ಧನ್ ಯೋಜನೆ, ಎಲ್ ಪಿಜಿ, ಪಿಡಿಎಸ್ ಸೇರಿದಂತೆ ಯಾವುದೇ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್‌ನ ಐಚ್ಚಿಕ ಬಳಕೆಗೆ ಅವಕಾಶ ನೀಡಿತ್ತು.