ಒಪ್ಪೊ ಕಚೇರಿಯಲ್ಲಿ ಭಾರತದ ಧ್ವಜ ಹರಿದ ಚೀನಿ ಪ್ರಜೆ: ಭಾರೀ ಪ್ರತಿಭಟನೆ

Update: 2017-03-28 16:34 GMT

ನೊಯ್ಡ,ಮಾ.28: ಇಲ್ಲಿನ ಮೊಬೈಲ್‌ಫೋನ್ ಕಂಪೆನಿ ಒಪ್ಪೊದ ಕಚೇರಿಯಲ್ಲಿ ಚೀನಿ ಉದ್ಯೋಗಿಯೊಬ್ಬ ಭಾರತದ ರಾಷ್ಟ್ರಧ್ವಜವನ್ನು ಹರಿದುಹಾಕಿ ಕಸದಬುಟ್ಟಿಗೆ ಎಸೆದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾದ ಘಟನೆ ಮಂಗಳವಾರ ನಡೆದಿದೆ.

ಒಪ್ಪೊ ಮೊಬೈಲ್ ಕಂಪೆನಿಯಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಚೀನಿ ಪ್ರಜೆಯು ಭಾರತದ ರಾಷ್ಟ್ರಧ್ವಜವನ್ನು ಹರಿದು ಕಸದಬುಟ್ಟಿಗೆ ಎಸೆದಿದ್ದನೆಂದು ಆರೋಪಿಸಿ ಮೂವರು ಉದ್ಯೋಗಿಗಳು ದೂರು ನೀಡಿದ್ದರು.

ವಿಷಯ ತಿಳಿಯುತ್ತಿದ್ದಂತೆಯೇ,ಒಪ್ಪೊದ ಉದ್ಯೋಗಿಗಳು ಸೇರಿದಂತೆ ನೂರಾರು ಮಂದಿ ಕಚೇರಿಯ ಮುಂದೆ ಜಮಾಯಿಸಿ ಚೀನಿ ಪ್ರಜೆಯ ಬಂಧನಕ್ಕಾಗಿ ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಕಂಪೆನಿಯು ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದರು.

ಪ್ರತಿಭಟನಕಾರರನ್ನು ನಿಯಂತ್ರಿಸಲು ಸ್ಥಳದಲ್ಲಿ 200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ರಸ್ತೆಗಳಲ್ಲಿ ಜನಜಮಾಯಿಸಿದ ಹಿನ್ನೆಲೆಯಲ್ಲಿ ನೊಯ್ಡೆದಲ್ಲಿ ಕೆಲವು ತಾಸು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕಂಪೆನಿಯ ಉದ್ಯೋಗಿಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನವೆಸಗಿದ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಈವರೆಗೆ ಯಾರನ್ನೂ ಬಂಧಿಸಿಲ್ಲವೆಂದು ಗೌತಮ್ ಬುಧ್ ನಗರ್‌ನ ಪೊಲೀಸ್ ಅಧೀಕ್ಷಕ ಧರ್ಮೇಂದ್ರ ಸಿಂಗ್ ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News