ಭಾರ ತುಂಬಿದ ಪ್ಲಾಸ್ಟಿಕ್ ಚೀಲ ಕ್ರಮೇಣ ಹಿಗ್ಗುವುದೇಕೆ....?

Update: 2017-03-29 09:13 GMT

ಪ್ಲಾಸ್ಟಿಕ್ ಚೀಲದಲ್ಲಿ ಸಾಮಾನುಗಳನ್ನು ತುಂಬಿಸಿದ ಬಳಿಕ ಮೇಲ್ಭಾಗದಲ್ಲಿಯ ಹಿಡಿಕೆಗಳನ್ನು ಹಿಡಿದು ಅದನ್ನೆತ್ತಿದಾಗ ಅವು ಆರಂಭದಲ್ಲಿ ಆ ಭಾರವನ್ನು ತಡೆದು ಕೊಳ್ಳುತ್ತವಾದರೂ ಕೆಲವು ನಿಮಿಷಗಳ ಬಳಿಕ ಚೀಲವು ಹಿಗ್ಗತೊಡಗುತ್ತದೆ ಮತ್ತು ಕ್ರಮೇಣ ಹರಿಯುವ ಹಂತವನ್ನು ತಲುಪುತ್ತದೆ. ಏಕೆ ಹೀಗೆ ಎಂದು ಯೋಚಿಸಿದ್ದೀರಾ?

ಸೀಲಿಂಗ್‌ಗೆ ಅಳವಡಿಸಿರುವ ಸ್ಪ್ರಿಂಗ್ ಮೂಲಕ ಭಾರದ ವಸ್ತುವನ್ನು ತೂಗುಬಿಟ್ಟಾಗ ಸ್ಪ್ರಿಂಗ್ ಕೆಲ ಪ್ರಮಾಣದವರೆಗೆ ಹಿಗ್ಗುತ್ತದೆ ಮತ್ತು ಈ ಹಿಗ್ಗುವಿಕೆ ಅದೇ ಪ್ರಮಾಣದಲ್ಲಿ ಸ್ಥಿರವಾಗಿರುತ್ತದೆ. ಆದರೆ ಪ್ಲಾಸ್ಟಿಕ್ ಚೀಲದ ವಿಷಯದಲ್ಲಿ ಹೀಗಿಲ್ಲ,ಅದು ನಿರಂತರವಾಗಿ ಹಿಗ್ಗುತ್ತಲೇ ಇರುತ್ತದೆ.

ಪಾಲಿಮರ್‌ಗಳಿಂದ ಕೂಡಿರುವ ಪ್ಲಾಸ್ಟಿಕ್ ಸ್ಪ್ರಿಂಗ್‌ಗಿಂತ ವಿಭಿನ್ನವಾಗಿದೆ. ಪ್ಲಾಸ್ಟಿಕ್ ಪಟ್ಟಿಯ ಕೊನೆಯಲ್ಲಿ ಭಾರವನ್ನು ತೂಗುಹಾಕಿದಾಗ ಅದು ಸ್ಪ್ರಿಂಗನಂತೆ ಹಿಗ್ಗುತ್ತದೆ ಮತ್ತು ಈ ಹಿಗ್ಗುವಿಕೆ ಕ್ರಮೇಣ ಹೆಚ್ಚುತ್ತಲೇ ಹೋಗುತ್ತದೆ. ಪ್ಲಾಸ್ಟಿಕ್‌ನ ಈ ಗುಣಕ್ಕೆ ವಿಸ್ಕೋಎಲಾಸ್ಟಿಕ್ ಕ್ರೀಪ್ ಅಥವಾ ಸ್ನಿಗ್ಧ ಸ್ಥಿತಿಸ್ಥಾಪಕ ಚಲನೆ ಕಾರಣವಾಗಿದೆ.
 ಪಾಲಿಮರ್ ಭಾರೀ ಸಂಖ್ಯೆಯಲ್ಲಿಯ ಪುಟ್ಟ ಪುಟ್ಟ ಘಟಕಗಳನ್ನು ಒಳಗೊಂಡಿದ್ದು, ಇವೆಲ್ಲ ಒಂದೇ ವಿಧಾನದಲ್ಲಿ ಪರಸ್ಪರ ಅಂಟಿಕೊಂಡಿರುತ್ತವೆ. ಇವು ಹೆಚ್ಚಿನ ಬಾರಿ ಸರಪಳಿಗಳ ರೂಪದಲ್ಲಿರುತ್ತವೆ.

ಸ್ನಿಗ್ಧ ಸ್ಥಿತಿಸ್ಥಾಪಕ ಚಲನೆ ಪಾಲಿಮರ್‌ನಿಂದ ಪಾಲಿಮರ್‌ಗೆ ಭಿನ್ನವಾಗಿರುತ್ತದೆ. ಇದಕ್ಕೊಂದು ಸರಳ ವಿವರಣೆ ಇಲ್ಲಿದೆ.

ಪಾಲಿಮರ್ ಸೇವಿಗೆಯನ್ನು ಹೋಲುವಂತಹ ಹಲವಾರು ಉದ್ದನೆಯ ಮತ್ತು ಪರಸ್ಪರ ಸಿಕ್ಕಿಹಾಕಿಕೊಂಡಂತಹ ಕಣಗಳನ್ನು ಒಳಗೊಂಡಿರುತ್ತದೆ. ಪಾಲಿಮರ್ ಮೇಲೆ ಭಾರ ಹೇರಲ್ಪಟ್ಟಾಗ ಈ ಕಣಗಳು ಭಾರದ ದಿಕ್ಕಿನಲ್ಲಿ ಎಳೆಯಲ್ಪಡುವುದರಿಂದ ಕ್ರಮೇಣ ಸ್ವಲ್ಪ ಪ್ರಮಾಣದಲ್ಲಿ ಸಿಕ್ಕುಗಳನ್ನು ಬಿಡಿಸಿಕೊಳ್ಳುತ್ತವೆ. ಇದು ಪ್ಲಾಸ್ಟಿಕ್ ನಿಧಾನವಾಗಿ ಹಿಗ್ಗಲು ಕಾರಣವಾಗಿದೆ. ಭಾರ ತುಂಬಿದ ಪ್ಲಾಸ್ಟಿಕ್ ಚೀಲವನ್ನೆತ್ತಿದಾಗ ಅದು ಹಿಗ್ಗುತ್ತಲೇ ಹೋಗುವುದು ಏಕೆ ಎನ್ನುವುದು ಈಗ ಅರ್ಥವಾಯಿತೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News