ನೊಯ್ಡದಲ್ಲಿ ಆಫ್ರಿಕನ್ ವಿದ್ಯಾರ್ಥಿನಿಯನ್ನು ರಿಕ್ಷಾದಿಂದ ಹೊರಗೆಳೆದು ಥಳಿಸಿದ ಗುಂಪು
ಗ್ರೇಟರ್ ನೊಯ್ಡ,ಮಾ.29: ಗ್ರೇಟರ್ ನೊಯ್ಡದಲ್ಲಿ ಆಫ್ರಿಕನ್ನರ ಮೇಲೆ ಹಲ್ಲೆಗಳು ಮುಂದುವರಿದಿವೆ. ಬುಧವಾರ ಬೆಳಿಗ್ಗೆ ಗುಂಪೊಂದು ಆಟೋರಿಕ್ಷಾದಲ್ಲಿದ್ದ ಕೆನ್ಯಾದ ಯುವತಿಯನ್ನು ಹೊರಗೆಳೆದು ಥಳಿಸಿದೆ. ಸೋಮವಾರ ಮೂವರು ನೈಜೀರಿಯಾ ವಿದ್ಯಾರ್ಥಿಗಳ ಮೇಲೆ ಗುಂಪು ಹಲ್ಲೆ ನಡೆದಿದ್ದ ಸ್ಥಳಕ್ಕೆ ಸಮೀಪವೇ ಇರುವ ನಾಲೆಡ್ಜ್ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ.
ಕೆನ್ಯಾ ಮೂಲದ ವಿದ್ಯಾರ್ಥಿನಿ ಆಟೋರಿಕ್ಷಾದಲ್ಲಿ ಕಾಲೇಜಿಗೆ ತೆರಳುತ್ತಿದ್ದಾಗ ಅದನ್ನು ತಡೆದು ನಿಲ್ಲಿಸಿದ ಗುಂಪು ಆಕೆಯನ್ನು ಥಳಿಸಿ ಪರಾರಿಯಾಗಿದೆ. ಗಾಯಗೊಂಡಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರದಿಂದ ಇದು ಇಲ್ಲಿ ಆಫ್ರಿಕನ್ ವಿದ್ಯಾರ್ಥಿಗಳ ಮೇಲೆ ನಡೆದಿರುವ ಮೂರನೇ ಹಲ್ಲೆಯಾಗಿದೆ.
12ನೇ ತರಗತಿಯ ವಿದ್ಯಾರ್ಥಿ ಮನೀಷ್ ಖತ್ರಿಯ ಸಾವಿಗೆ ನೈಜೀರಿಯಾ ಪ್ರಜೆಗಳು ಆತನಿಗೆ ಮಾದಕ ದ್ರವ್ಯ ಪೂರೈಸಿದ್ದೇ ಕಾರಣವೆಂದು ಆರೋಪಿಸಿ ಸೋಮವಾರ ಸಂಜೆ ಇಲ್ಲಿಯ ಅನ್ಸಾಲ್ ಪ್ಲಾಝಾ ಮಾಲ್‌ನಲ್ಲಿ ಗುಂಪೊಂದು ನೈಜೀರಿಯಾ ವಿದ್ಯಾರ್ಥಿಯೋರ್ವನ ಮೇಲೆ ಹಲ್ಲೆ ನಡೆಸಿತ್ತು. ಇದಾದ ಬಳಿಕ ಅಂಗಡಿಯೊಂದರ ಬಳಿ ನಿಂತಿದ್ದ ಇನ್ನೂ ಮೂವರು ನೈಜೀರಿಯಾ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿತ್ತು.