×
Ad

ಹಳಿ ತಪ್ಪಿದ ರೈಲು: 9 ಮಂದಿಗೆ ಗಾಯ

Update: 2017-03-30 09:08 IST

ಹೊಸದಿಲ್ಲಿ, ಮಾ.30: ಉತ್ತರ ಪ್ರದೇಶದ ಕುಲ್ಪಹಾರ್‌ ಸಮೀಪ ಜಬಲ್ಪುರ ನಿಝಾಮುದ್ದೀನ್‌ ಮಹಾಕೋಶಲ್‌ ಎಕ್ಸ್‌ಪ್ರೆಸ್‌ ರೈಲಿನ ಎಂಟು ಬೋಗಿಗಳು ಹಳಿ ತಪ್ಪಿದ ಘಟನೆಯಲ್ಲಿ ಕನಿಷ್ಠ ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಗುರುವಾರ ಮುಂಜಾನೆ ವೇಳೆಗೆ ಈ ದುರಂತ ಸಂಭವಿಸಿದೆ.

ಅಪಘಾತ ಪರಿಹಾರ ರೈಲು ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಮಹೋಬಾ ಮತ್ತು ಕುಲ್ಪಹಾರ್‌ ನಿಲ್ದಾಣಗಳ ನಡುವೆ ರೈಲಿನ ಹಿಂಭಾಗದ ಎಂಟುಬೋಗಿಗಳು ಹಳಿತಪ್ಪಿವೆ ಎಂದು ಉತ್ತರ ಕೇಂದ್ರ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಪ್ರಧಾನ ವ್ಯವಸ್ಥಾಪಕ ಎಂ.ಸಿ.ಚೌಹಾಣ್‌ ಸ್ಥಳಕ್ಕೆ ಧಾವಿಸಿದ್ದು, ಪರಿಹಾರ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಹಳಿತಪ್ಪಲು ಕಾರಣ ತಿಳಿದುಬಂದಿಲ್ಲ. ರೈಲ್ವೆ ಅಧಿಕಾರಿಗಳು ಝಾನ್ಸಿ, ಗ್ವಾಲಿಯರ್, ಬಂಡಾ ಮತ್ತು ನಿಜಾಮುದ್ದೀನ್‌ ಠಾಣೆಗಳಲ್ಲಿ ಮಾಹಿತಿ ಕೇಂದ್ರ ತೆರೆದಿದ್ದು, ಪ್ರಯಾಣಿಕರ ಸಂಬಂಧಿಕರಿಗೆ ಸೂಕ್ತ ಮಾಹಿತಿ ನೀಡಲು ವ್ಯವಸ್ಥೆಮಾಡಲಾಗಿದೆ.

ಉತ್ತರ ಪ್ರದೇಶದಲ್ಲಿ ರೈಲು ಅವಘಡಗಳು ಪದೇಪದೇ ಸಂಭವಿಸುತ್ತಿದ್ದು, ಈ ಘಟನೆಗಳ ಹಿಂದಿನ ಪಿತೂರಿ ಸಾಧ್ಯತೆ ಬಗ್ಗೆ ಸರಕಾರ ಗಣನೀಯವಾಗಿ ಚಿಂತಿಸಬೇಕಾಗಿದೆ. ಇತ್ತೀಚೆಗೆ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವತಃ ಕಾನ್ಪುರ ರೈಲು ದುರಂತವನ್ನು ಗಡಿಯಾಚೆಗಿನ ಪಿತೂರಿ ಎಂದು ಬಣ್ಣಿಸಿದ್ದರು.

ಕಳೆದ ಜನವರಿಯಲ್ಲಿ ಜಬಲ್ಪುರ-ಭುವನೇಶ್ವರ ಹಿರಾಖಂಡ್‌ ಎಕ್ಸ್‌ಪ್ರೆಸ್‌ ರೈಲು ಆಂಧ್ರ ಪ್ರದೇಶದ ವಿಳಿಯನಗರಂ ಜಿಲ್ಲೆಯಲ್ಲಿ ಹಳಿತಪ್ಪಿ 41 ಮಂದಿ ಮೃತಪಟ್ಟಿದ್ದರು. ಘಟನೆಯಲ್ಲಿ ಇತರ60 ಮಂದಿ ಗಾಯಗೊಂಡಿದ್ದರು. ಮಾರ್ಚ್7 ರಂದುಭೋಪಾಲ್- ಉಜ್ಜಯಿನಿ ರೈಲಿನಲ್ಲಿ ಮಧ್ಯಪ್ರದೇಶದ ಸುಜಾಲ ಪುರ ಬಳಿ ಸಂಭವಿಸಿದ ಸ್ಫೋಟದಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News