×
Ad

ಸುಪ್ರೀಂ ನಿಷೇಧದಿಂದ ಕಂಗೆಟ್ಟಿರುವ ತಯಾರಕರಿಂದ ದ್ವಿಚಕ್ರ ವಾಹನಗಳ ಮೇಲೆ ಭಾರೀ ಡಿಸ್ಕೌಂಟ್

Update: 2017-03-30 15:52 IST

ಹೊಸದಿಲ್ಲಿ,ಮಾ.30: ಎ.1ರಿಂದ ಬಿಎಸ್-3 ವಾಹನಗಳ ಮಾರಾಟ ಮತ್ತು ನೋಂದಣಿಯನ್ನು ನಿಷೇಧಿಸಿ ಸರ್ವೋಚ್ಚ ನ್ಯಾಯಾಲಯವು ಬುಧವಾರ ಹೊರಡಿಸಿರುವ ಆದೇಶದಿಂದ ಕಂಗೆಟ್ಟಿರುವ ಪ್ರಮುಖ ದ್ವಿಚಕ್ರ ವಾಹನ ತಯಾರಿಕೆ ಕಂಪನಿಗಳಾದ ಹಿರೋ ಮೋಟೊಕಾರ್ಪ್, ಹೊಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ,ಬಜಾಜ್ ಆಟೋ ಮತ್ತು ಸುಝುಕಿ ತಮ್ಮಲ್ಲಿ ದಾಸ್ತಾನಿರುವ ಬಿಎಸ್-3 ದ್ವಿಚಕ್ರ ವಾಹನಗಳನ್ನು ಹೇಗಾದರೂ ಮಾಡಿ ಮಾರಾಟ ಮಾಡಿ ಕೈತೊಳೆದುಕೊಳ್ಳಲು ಮುಂದಾಗಿವೆ.

ಇದಕ್ಕಾಗಿ ಉದ್ಯಮದಲ್ಲಿ ಈವರೆಗೆ ಕಂಡಿರದಿದ್ದ, 22,000 ರೂ.ವರೆಗಿನ ಭಾರೀ ಕಡಿತವನ್ನು ಪ್ರಕಟಿಸಿವೆ. ನಿಷೇಧದ ಬಿಸಿ ಎಂಟು ಲಕ್ಷಕ್ಕೂ ಅಧಿಕ ಬಿಎಸ್-3 ವಾಹನಗಳಿಗೆ ತಟ್ಟಿದ್ದು, ಇದರಲ್ಲಿ ಸಿಂಹಪಾಲು ದ್ವಿಚಕ್ರ ವಾಹನಗಳದ್ದಾಗಿದೆ. 6.71 ಲಕ್ಷಕ್ಕೂ ಅಧಿಕ ದ್ವಿಚಕ್ರ ವಾಹನಗಳು ವಿವಿಧ ತಯಾರಕರ ಬಳಿ ದಾಸ್ತಾನಿವೆ. ಎ.1ರ ಬಳಿಕ ಇವುಗಳನ್ನು ಮಾರಾಟ ಮಾಡುವಂತಿಲ್ಲ.

ಹಿರೋ ಮೋಟೊಕಾರ್ಪ್ ತನ್ನ ಬಿಎಸ್-3 ಸ್ಕೂಟರ್‌ಗಳ ಬೆಲೆಯಲ್ಲಿ 12,500 ರೂ.ಗಳ ಕಡಿತವನ್ನು ಪ್ರಕಟಿಸಿದ್ದರೆ, ಪ್ರೀಮಿಯಂ ಬೈಕ್‌ಗಳಿಗೆ 7,500 ರೂ. ಮತ್ತು ಎಂಟ್ರಿ ಲೆವೆಲ್ ಬೈಕ್‌ಗಳ ಮೇಲೆ 5,000 ರೂ.ಕಡಿತವನ್ನು ಘೋಷಿಸಿದೆ.

ಅತ್ತ ಹೊಂಡಾ ತನ್ನೆಲ್ಲ ಸ್ಕೂಟರ್ ಮತ್ತು ಬೈಕ್ ಮಾಡೆಲ್‌ಗಳ ಮೇಲೆ 10,000 ರೂ.ಗಳ ನೇರ ಕಡಿತವನ್ನು ಪ್ರಕಟಿಸಿತ್ತಾದರೂ ಗುರುವಾರ ಮಧ್ಯಾಹ್ನದ ಬಳಿಕ ಈ ಮೊತ್ತವನ್ನು 22,000 ರೂ.ಗೆ ಹೆಚ್ಚಿಸಿದೆ. ಅಂದರೆ 50,290 ರೂ.ಶೋರೂಮ್ ಬೆಲೆ ಹೊಂದಿರುವ ಆ್ಯಕ್ಟಿವಾ 3ಜಿ ಈಗ ಕೇವಲ 28,290 ರೂ.ಗಳಿಗೆ ಲಭ್ಯವಿದೆ!

ಸುಝುಕಿ ಮೋಟರ್‌ಸೈಕಲ್ ಇಂಡಿಯಾ ತನ್ನ ಲೆಟ್ಸ್ ಸ್ಕೂಟರ್ ಮೇಲೆ 4,000 ರೂ.ಡಿಸ್ಕೌಂಟ್ ಮತ್ತು ಉಚಿತ ಹೆಲ್ಮೆಟ್ ಹಾಗೂ ಜಿಕ್ಸರ್ ಬೈಕ್ ಮೇಲೆ 5,000 ರೂ.ಡಿಸ್ಕೌಂಟ್ ಮತ್ತು 2,000 ರೂ.ವರೆಗೆ ವಿನಿಮಯ ಬೋನಸ್ ಪ್ರಕಟಿಸಿದೆ.

ಬಜಾಜ್ ಆಟೋ ತನ್ನೆಲ್ಲ ಮಾಡೆಲ್‌ಗಳಿಗೆ ಉಚಿತ ವಿಮೆ ಮತ್ತು 3,000-12,000ರೂ. ಡಿಸ್ಕೌಂಟ್ ಘೋಷಿಸಿದೆ.ದಾಸ್ತಾನು ಮುಗಿಯುವವರೆಗೆ ಅಥವಾ ಮಾ.31ರವರೆಗೆ ಈ ಕೊಡುಗೆ ಜಾರಿಯಲ್ಲಿರುತ್ತದೆ ಎಂದು ಉಭಯ ಕಂಪನಿಗಳು ಪ್ರಕಟಿಸಿವೆ.

ಎ.1ರಿಂದ ಭಾರತದಲ್ಲಿ ಬಿಎಸ್-4 ವಾಹನಗಳನ್ನು ಮಾತ್ರ ಮಾರಾಟ ಮಾಡಬೇಕಾ ಗುತ್ತದೆ ಮತ್ತು ಅಂದಿನಿಂದ ಬಿಎಸ್-3 ವಾಹನಗಳ ಮಾರಾಟ ಮತ್ತು ನೋಂದಣಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News