×
Ad

ತ್ರಿವಳಿ ತಲಾಖ್ ಪ್ರಕರಣ ಪಂಚ ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ,ಮೇ 11ರಿಂದ ವಿಚಾರಣೆ ಆರಂಭ

Update: 2017-03-30 16:07 IST

ಹೊಸದಿಲ್ಲಿ,ಮಾ.30: ತ್ರಿವಳಿ ತಲಾಖ್, ನಿಕಾ ಹಲಾಲ ಮತ್ತು ಬಹುಪತ್ನಿತ್ವ ಪದ್ಧತಿಯ ಸಾಂವಿಧಾನಿಕ ಸಿಂಧುತ್ವವನ್ನು ನಿರ್ಧರಿಸುವ ಹೊಣೆಯನ್ನು ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ಒಪ್ಪಿಸಲು ಸರ್ವೋಚ್ಚ ನ್ಯಾಯಾಲಯವು ಗುರುವಾರ ನಿರ್ಧರಿಸಿದೆ. ಪ್ರಕರಣದ ವಿಚಾರಣೆಯು ಮೇ 11ರಿಂದ ಆರಂಭಗೊಳ್ಳಲಿದೆ.

ಮೂರು ಬಾರಿ ತಲಾಖ್ ಉಚ್ಚರಿಸಿ ವಿಚ್ಛೇದನ ನೀಡುವುದು ಕಾನೂನುಬದ್ಧವೇ ಅಥವಾ ಅದು ಸಮಾನ ಹಕ್ಕುಗಳನ್ನು, ಈ ಪ್ರಕರಣದಲ್ಲಿ ಮಹಿಳೆಯ ಹಕ್ಕುಗಳನ್ನು ಅತಿಕ್ರಮಿಸುತ್ತದೆಯೇ ಇತ್ಯಾದಿಗಳಿಗೆ ಸಂಬಂಧಿಸಿ ಕೇಂದ್ರ ಸರಕಾರ ಸೇರಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ಗೊಂಚಲಿಗೆ ಈ ಪ್ರಕರಣ ಸಂಬಂಧಿಸಿದೆ.

ತ್ರಿವಳಿ ತಲಾಖ್, ನಿಕಾ ಹಲಾಲ ಮತ್ತು ಬಹುಪತ್ನಿತ್ವ ಪದ್ಧತಿಯನ್ನು ಈ ಹಿಂದೆ ವಿರೋಧಿಸಿದ್ದ ಕೇಂದ್ರವು, ಲಿಂಗ ಸಮಾನತೆ ಮತ್ತು ಜಾತ್ಯತೀತತೆಗಳ ಆಧಾರದಲ್ಲಿ ಪುನರ್‌ಪರಿಶೀಲನೆಗೆ ಒಲವು ವ್ಯಕ್ತಪಡಿಸಿತ್ತು.

ತ್ರಿವಳಿ ತಲಾಖ್‌ನಂತಹ ಪದ್ಧತಿಗಳನ್ನು ನಿರ್ಮೂಲನಗೊಳಿಸುವುದು ಕುರ್ ಆನ್‌ನ್ನು ಹೊಸದಾಗಿ ಬರೆಯುವುದಕ್ಕೆ ಸಮನಾಗುತ್ತದೆ ಮತ್ತು ಅಪರಾಧವೆಸಗಲು ಮುಸ್ಲಿಮರ ಮೇಲೆ ಒತ್ತಡ ಹೇರುತ್ತದೆ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಹೇಳಿದೆ.

ಇವು ತುಂಬ ಮುಖ್ಯ ವಿಷಯಗಳಾಗಿವೆ. ಇವುಗಳನ್ನು ಅವಸರದಲ್ಲಿ ನಿರ್ಧರಿಸುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ನ್ಯಾಯಮೂರ್ತಿಗಳಾದ ಎನ್.ವಿ.ರಮಣ ಹಾಗೂ ಡಿ.ವಿ.ಚಂದ್ರಚೂಡ ಅವರನ್ನೊಳಗೊಂಡ ಪೀಠವು ಹೇಳಿತು.

ನ್ಯಾ.ಖೇಹರ್ ಅವರು ಸಂವಿಧಾನ ಪೀಠದ ನೇತೃತ್ವ ವಹಿಸುವುದು ಹೆಚ್ಚುಕಡಿಮೆ ನಿಶ್ಚಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News