×
Ad

ಇಡಿಯಿಂದ ಸಚಿವ ವಿ.ಕೆ.ಸಿಂಗ್‌ರ ಸಹಾಯಕ ಎಸ್.ಪಿ.ಸಿಂಗ್‌ರ 21 ಕೋ.ರೂ.ಆಸ್ತಿ ಜಪ್ತಿ

Update: 2017-03-30 23:26 IST

ಹೊಸದಿಲ್ಲಿ,ಮಾ.30: ಹಣ ಚಲುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ವಿ.ಕೆ.ಸಿಂಗ್ ಅವರ ನಿಕಟವರ್ತಿ ಎಸ್.ಪಿ.ಸಿಂಗ್ ಮತ್ತು ಇತರರ ಮಾಲಕತ್ವದ ಸಂಸ್ಥೆಯೊಂದರ 21.29 ಕೋ.ರೂ.ವೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ)ವು ಜಪ್ತಿ ಮಾಡಿದೆ.

ಈ ಪ್ರಕರಣವು 2009-2013ರ ಅವಧಿಯಲ್ಲಿ ಗುಪ್ತಚರ ಸಂಸ್ಥೆ ‘ರಾ ’ಕ್ಕೆ 22 ಕೋ.ರೂ.ವೌಲ್ಯದ ಎತ್ತರದ ಪ್ರದೇಶಗಳಲ್ಲಿ ಬಳಕೆಯಾಗುವ ಟೆಂಟ್‌ಗಳ ಪೂರೈಕೆಯಲ್ಲಿ ನಡೆದಿತ್ತೆನ್ನಲಾದ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದೆ.

ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಪಿಎಂಎಲ್‌ಎ ಅಡಿ ಎಸ್.ಪಿ.ಸಿಂಗ್ ಮತ್ತು ಇತರರ ವಿರುದ್ಧ ತಾನು ತಾತ್ಕಾಲಿಕ ಆದೇಶವೊಂದನ್ನು ಹೊರಡಿಸಿದ್ದು, ನೊಯ್ಡಾದಲ್ಲಿಯ ಎರಡು ಫ್ಯಾಕ್ಟರಿಗಳು ಮತ್ತು ಒಂದು ವಾಣಿಜ್ಯಿಕ ಆಸ್ತಿ, ಲಕ್ನೋದಲ್ಲಿಯ ವಸತಿ ಕಟ್ಟಡ ಮತ್ತು ಬಲಿಯಾದಲ್ಲಿನ ಕೃಷಿ ಭೂಮಿಯನ್ನು ಜಪ್ತಿಮಾಡಲಾಗಿದೆ ಎಂದು ಇಡಿ ತಿಳಿಸಿದೆ.

ಸಿಂಗ್ ಒಡೆತನದ ಡೈನಾಮಿಕ್ ಶೆಲ್ಸ್(ಇಂಡಿಯಾ) ಪ್ರೈ.ಲಿ.ಕಂಪನಿಯು ಹಣಕಾಸು ಸಂಸ್ಥೆಗಳಿಂದ ಸಾಲವಾಗಿ ಪಡೆದ ಹಣವನ್ನು ಅನ್ಯ ಉದ್ದೇಶಕ್ಕಾಗಿ ಬಳಸಲು 13 ಮುಖವಾಡ ಕಂಪನಿಗಳ ಜಾಲವೊಂದನ್ನು ನಡೆಸುತ್ತಿತ್ತು ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News