ಮೂಗು ಮುಚ್ಚಿದ್ದಲ್ಲದೆ ಬಾಯಿ ತೆರೆಯದೆಂಬಂತೆ

Update: 2017-03-30 18:51 GMT

ವರಾಡ್‌ನ ಜಳ್‌ಗಾಂವ್‌ನಲ್ಲಿ ಸುಮಾರು ಐದು ಸಾವಿರ ಮಹಾರ್ ಜನರು ಈಗ ಕೆಲವೇ ದಿನಗಳ ಹಿಂದೆ ಒಂದು ಪ್ರಕಟನೆೆ ಹೊರಡಿಸಿ, ಹಿಂದೂ ಸಮಾಜವು ತಮ್ಮ ಅಸ್ಪಶ್ಯತೆಯನ್ನು ಕಿತ್ತುಹಾಕದೆ ಹೋದರೆ, ತಾವು ಪರಧರ್ಮವನ್ನು ಸ್ವೀಕರಿಸಿ ಮುಸಲ್ಮಾನರೋ, ಕ್ರೈಸ್ತರೋ ಆಗುವುದಾಗಿ ಸಾರಿದರು. ಈ ಪ್ರಕಟನೆೆಯನ್ನು ನಾವು ಆಗ ನಮ್ಮ ಪತ್ರಿಕೆಯಲ್ಲೂ ಪ್ರಕಟಿಸಿ, ಆ ಬಗ್ಗೆ ಒಂದು ಅಗ್ರಲೇಖನವನ್ನೂ ಬರೆದಿದ್ದೆವು. ಜಳ್‌ಗಾಂವ್‌ನ ಮಹಾರ್ ಜನರ ಈ ಪ್ರಕಟನೆೆ, ಕೇವಲ ಒಂದು ಟೊಳ್ಳು ಬೆದರಿಕೆಯಷ್ಟೇ ಎಂದು ಬ್ರಾಹ್ಮಣ ಪತ್ರಿಕೆಗಳಲ್ಲಿ ಅಲ್ಲದಿದ್ದರೂ ಬ್ರಾಹ್ಮಣೇತರ ಚಳವಳಿಯಲ್ಲಿ ಭಾಗವಹಿಸುವ ಜಯರಾಮ ನಾನಾ ವೈದ್ಯರಂಥವರು ಅಭಿಪ್ರಾಯ ನೀಡಿ ಅಣಕವಾಡುವ ಯತ್ನ ಮಾಡಿದ್ದಾರೆ.

ಆದರೆ, ಜಳ್‌ಗಾಂವ್‌ನ ಮಹಾರ್ ಸಮಾಜದ ಧುರೀಣರು ಪರಿಹಾಸಕ್ಕೆ ಕುಳಿತವರಲ್ಲ, ಅವರದು ದೃಢ ನಿರ್ಧಾರವಾಗಿತ್ತು. ಇಂದಿಗೆ ನೂರಾರು, ಸಾವಿರಾರು ವರ್ಷಗಳಿಂದ ನಡೆದು ಬಂದಿರುವ ಗುಲಾಮಗಿರಿಯನ್ನು ಅವರಿಗೆ ಇಲ್ಲವಾಗಿಸಬೇಕಿತ್ತು ಮತ್ತು ಆ ಬಗ್ಗೆ ಮೊದಲೇ ಪೂರ್ಣ ವಿಚಾರ ಮಾಡಿ ತಮ್ಮ ಪೂರ್ವಜರ ಧರ್ಮಕ್ಕೆ ತನ್ನಲ್ಲಿನ ವಿಷಮತೆ ಮತ್ತು ಅನ್ಯಾಯವನ್ನು ದಮನಿಸುವ ಸಾಮರ್ಥ್ಯ ಇಲ್ಲವೆಂಬುದು ಅರಿವಾದ ಕಾರಣ, ಕಷ್ಟದಿಂದಲೇ ಕೊನೆಗೂ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಈ ಪಂಥಾಹ್ವಾನವು ಪೊಳ್ಳು ಬೆದರಿಕೆಯಲ್ಲ, ಪರಿಹಾಸವಲ್ಲ, ಮಕ್ಕಳಾಟವೂ ಅಲ್ಲ;

ಉಕ್ತ ಪಂಥಾಹ್ವಾನವು ಪ್ರಕಟಗೊಂಡಾಗ ಸ್ಥಳೀಯ ಸ್ಪಶ್ಯರ ನಾಯಕರು ಮಹಾರ್ ಜನರನ್ನು ಪೇಚಿನಲ್ಲಿ ಸಿಗಿಸುವ ಉದ್ದೇಶದಿಂದ, ‘‘ನೀವು ಅಸ್ಪಶ್ಯರಲ್ಲೇ ವಿಭಿನ್ನ ಜಾತಿಗಳಿದ್ದು, ಒಬ್ಬರಿನ್ನೊಬ್ಬರನ್ನು ಉಚ್ಚ ನೀಚರೆಂದು, ಅಪವಿತ್ರರೆಂದು ಕರೆದುಕೊಳ್ಳುವ ಈ ನಿಮ್ಮ ಸ್ಪಶ್ಯಾಸ್ಪಶ್ಯ ಭೇದವನ್ನು ಮೊದಲು ಕಿತ್ತು ಹಾಕಿ; ಮತ್ತೆ ನಾವು ನಿಮ್ಮ ಅಸ್ಪಶ್ಯತೆಯನ್ನು ಇಲ್ಲವಾಗಿಸಿ, ನಿಮ್ಮ ಬೇಡಿಕೆಯನ್ನು ಒಪ್ಪಿಕೊಳ್ಳುವೆವು,’’ ಎಂದು ಉತ್ತರವಿತ್ತರು. ಆದರೆ, ಸ್ಪಶ್ಯರೆಂದು ಕರೆದುಕೊಳ್ಳುವ ಪಾವನ ಹಿಂದೂಗಳ ಈ ಕುಟಿಲತೆ, ತಕ್ಷಣ ಜಳ್‌ಗಾಂವ್‌ನ ಮಹಾರ್ ನಾಯಕರಿಗೆ ತಿಳಿದು ಹೋಯಿತು.

‘‘ಬೇಡವಾದವರಿಗೆ ವಾರ ಶನಿವಾರ’’ ಎಂಬ ಮಾತಿನಂತೆ ಉಚ್ಚವರ್ಣೀಯರೆಂಬ ಹಿಂದೂಗಳ ಸಬೂಬಷ್ಟೇ ಇದು. ಅಸ್ಪಶ್ಯತೆಯನ್ನು ನಿರ್ಮೂಲನಗೊಳಿಸುವ ಇಚ್ಛೆಯೇ ಅವರಿಗಿಲ್ಲವೆಂದು ಬಹಿಷ್ಕೃತ ವರ್ಗದ ಧುರೀಣರಿಗೆ ಖಂಡಿತವಿದೆ. ಅಲ್ಲದೆ, ತಮ್ಮ ಸಮಾಜದಲ್ಲಿನ ಭೇದಭಾವ, ಪರಸ್ಪರ ವಿಷಮತೆ ಅವರಿಗೆ ಒಪ್ಪಿಗೆಯಿಲ್ಲ. ಅರ್ಥಾತ್, ಸ್ಪಶ್ಯ ವರ್ಗದ ಆಹ್ವಾನವನ್ನು ಅವರು ಸಂತೋಷದಿಂದಲೇ ಒಪ್ಪಿಕೊಂಡರು. ಅವರು ಬಹಿಷ್ಕೃತ ವರ್ಗದ ಮಹಾರ್, ಮಾಂಗ್, ಚಾಂಭಾರ್, ಭಂಗಿಯೇ ಮುಂತಾದ ಎಲ್ಲ ಜಾತಿಗಳ ಸಹಭೋಜನವನ್ನು ಏರ್ಪಡಿಸಿ ಬಹಿಷ್ಕೃತ ವರ್ಗದಲ್ಲಿ ಅಪವಿತ್ರತೆಯಾಗಲೀ, ಸಾಮಾಜಿಕ ವಿಷಮತೆಯಾಗಲೀ ಇಲ್ಲ ಎಂಬುದನ್ನು ಪವಿತ್ರ ಹಿಂದೂಗಳ ಗಮನಕ್ಕೆ ತಂದರು. ಪರಸ್ಪರ ಭೇದಭಾವವನ್ನು ತೊಡೆದು ಹಾಕುವಲ್ಲಿ ಬಹಿಷ್ಕೃತ ವರ್ಗದ ಜನರಿಗೆ ಯಶಸ್ಸು ಸಿಗದೆಂದೇ ಪವಿತ್ರ ಹಿಂದೂಗಳ ನಂಬಿಕೆ, ಒಂದು ವೇಳೆ ಹಾಗಾದಲ್ಲಿ, ಧರ್ಮಾಂತರದ ಬೆದರಿಕೆಯೊಡ್ಡುವ ಬಾಯಿಗಳು ಅಲ್ಲೇ ಮುಚ್ಚಿಕೊಳ್ಳುತ್ತವೆ. ಆದರೆ ಪಾವಿತ್ರವಂತರ ದುರದೃಷ್ಟದಿಂದ ಅವರುಳಿಸಿದ ದಾಳ ವ್ಯರ್ಥವಾಯಿತು. ಉಪಾಯಕ್ಕೆ ಉಪಾಯವೂ ದಕ್ಕಿತ್ತು. ಇದೇ ಸುಮಾರಿಗೆ ಡಾ. ಅಂಬೇಡ್ಕರ್ ಅವರು ಅತ್ತ ಹೋದಾಗ, ಮಹಾರ್‌ನ ಜನರು ಅವರ ಸಲಹೆ ಕೇಳಿದರು.

‘‘ಧರ್ಮಾಂತರ ಮಾಡಿಕೊಳ್ಳದೆ ಅಸ್ಪಶ್ಯತೆಯನ್ನು ದೂರ ಮಾಡುವುದು ಕಠಿಣ; ಅಸ್ಪಶ್ಯತಾ ನಿವಾರಣೆಯ ದಾರಿಯಲ್ಲಿ ನಡೆಯಲು ಬೇಕಾದ ಸಹನೆ ಯಾರಲಿಲ್ಲವೋ, ಅವರು ಧರ್ಮಾಂತರ ಮಾಡುವುದಕ್ಕೆ ತನ್ನ ವಿರೋಧವಿಲ್ಲ, ಅಸ್ಪಶ್ಯತಾ ನಿವಾರಣೆಯ ಪ್ರಶ್ನೆಯನ್ನು ತಮಗೆ ಬೇಕಾದಂತೆ ಬಿಟ್ಟುಬಿಡಬಹುದು’’ ಎಂದು ಅಂಬೇಡ್ಕರ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ ಮತ್ತು ತಮ್ಮ ‘ಬಹಿಷ್ಕೃತ ಭಾರತ’ದಲ್ಲಿ ಜಳ್‌ಗಾಂವ್‌ನ ಮಹಾರ್ ಜನರ ಪ್ರಕಟನೆಯ ಬಗ್ಗೆ ಅಗ್ರಲೇಖನವನ್ನೂ ಮೊದಲೇ ಬರೆದಿದ್ದಾರೆ. ಪರಿಶುದ್ಧ ಹಿಂದೂಗಳು ಅಸ್ಪಶ್ಯತಾ ನಿವಾರಣೆಗೆ ಸಿದ್ಧರಿಲ್ಲವೆಂದು ಕಂಡುಬಂದಾಗ ಈ ಪ್ರಕಟನೆೆಯ ಅವಧಿ ಪೂರ್ಣಗೊಂಡು ಆರಂಭಿಕವಾಗಿ ಜಳ್‌ಗಾಂವ್‌ನ ಹನ್ನೆರಡು ಮಹಾರರು ಮುಸ್ಲಿಂ ಧರ್ಮವನ್ನು ಸ್ವೀಕರಿಸಿದರು. ಆಗ ಪರಿಶುದ್ಧ ಹಿಂದೂಗಳ ಕಣ್ಣು ಟಪ್ಪೆಂದು ತೆರೆಯಿತು. ಪ್ರಕಟನೆೆಯ ಎಚ್ಚರಿಕೆ ಪೊಳ್ಳಲ್ಲವೆಂದು ಅವರಿಗೆ ಖಾತ್ರಿಯಾಯಿತು.

ಈಗಿನ್ನು ಸಾವಿರಾರು ಅಸ್ಪಶ್ಯರು ಮುಸಲ್ಮಾನರೋ, ಕ್ರೈಸ್ತರೋ ಆಗುವರು ಮತ್ತು ಹಿಂದೂಗಳ ಸಂಖ್ಯಾಬಲ ಕಡಿಮೆಯಾಗುವುದು, ಮುಸಲ್ಮಾನರ ಸಂಖ್ಯೆ ವೃದ್ಧಿಸುವುದು ಮತ್ತು ಮುಸಲ್ಮಾನರಾದ ಅಸ್ಪಶ್ಯರು ತಮ್ಮೆದೆಯ ಮೇಲೆ ಸವಾರಿ ಮಾಡಿ, ಮಾನವೀಯ ಹಕ್ಕುಗಳನ್ನು ಪ್ರಾಸ್ತಾಪಿಸಿಕೊಳ್ಳುವರು ಎಂಬ ವಿಚಾರವು ಅವರ ಹೃದಯಗಳಲ್ಲಿ ಪ್ರತಿಧ್ವನಿಸಿತು. ಮಹಾರ್‌ರಂಥ ಅಸ್ಪಶ್ಯರು, ತಮಗೆ ದೇವಳ ಪ್ರವೇಶಕ್ಕೆ ನಿಷೇಧವಿದ್ದರೂ, ಇದುವರೆಗೆ ತಮ್ಮ ಜೀವದ ಹಂಗನ್ನು ತೊರೆದು, ಆ ದೇವಳಗಳ ಸಂರಕ್ಷಣೆಗಾಗಿ ಹೋರಾಡುತ್ತಾ ಬಂದರು. ಅದೇ ಜನರು ಈಗ ತಮ್ಮ ಧರ್ಮದ ವೈರಿಗಳಾಗಿ, ಎಂದಾದರೂ ಧಾರ್ಮಿಕ ಕಲಹಗಳಾದಾಗ ಇತರ ಮುಸ್ಲಿಮರೊಡನೆ ದೇವಳಗಳನ್ನು ಒಡೆಯಲು, ಭ್ರಷ್ಟಗೊಳಿಸಲು ತೊಡಗುವರು ಎಂಬ ಭೀತಿಪ್ರದ ವಿಚಾರ, ಪುರಾಣಮತವಾದಿ ಹಿಂದೂಗಳ ಕಣ್ಣೆದುರು ಸುಳಿಯ ತೊಡಗಿತು.

ಗಿಳಿಗಳಂತೆ ಈ ಪರಿಶುದ್ಧ ಹಿಂದೂಗಳು ಪಠಿಸತೊಡಗಿದರು, ‘‘ಹೋಗಿ, ಖುಶಿಯಿಂದ ಪರಧರ್ಮಕ್ಕೆ ಸೇರಿಕೊಳ್ಳಿ. ಕ್ರಿಶ್ಚಿಯನರೋ, ಮುಸಲ್ಮಾನರೋ ಆಗಿ; ನಾವೇನೂ ನಿಮಗೆ ಅಡ್ಡಿಬರುವುದಿಲ್ಲ. ಮಹಾರ್ ಸತ್ತ, ಮೈಲಿಗೆ ಹೋಯ್ತು, ಎಂದವರು ನಾವೇ’’ಎಂದ ಅದೇ ಜನರು, ಜಳ್‌ಗಾಂವ್‌ನ ಬಹಿಷ್ಕೃತರು ಧರ್ಮಾಂತರಕ್ಕೆ ಶುರುವಿಟ್ಟು ತೋರಿಸಿದಾಗ, ಒಮ್ಮ್ಮೆಲೆ ಮೆತ್ತಗಾಗಿ ಬಿಟ್ಟರು. ಹನ್ನೆರಡು ಮಹಾರರ ಧರ್ಮಾಂತರವು ಹಿಂದೂ ಸಮಾಜದಲ್ಲಿ ಭಯಂಕರ ಕಳವಳವನ್ನೆಬ್ಬಿಸಿತು. ಮತ್ತು ಹೇಗಾದರೂ ಮಾಡಿ ಈ ಧರ್ಮಾಂತರದ ಪ್ರವಾಹವನ್ನು ಇಲ್ಲಿಗೇ ತಡೆದು ನಿಲ್ಲಿಸಬೇಕೆಂದು ಅವರಿಗೆ ಅನಿಸತೊಡಗಿತು. ಒಪ್ಪಂದದ ಮಾತುಕತೆ ತೊಡಗಿ, ಬಹಿಷ್ಕೃತರ ಉಪಯೋಗಕ್ಕಾಗಿ ಎರಡು ಸಾರ್ವಜನಿಕ ಬಾವಿಗಳನ್ನು ಮುಕ್ತಗೊಳಿಸಲಾಯಿತು. ಇಷ್ಟೇ ಅಲ್ಲ, ಬಹಿಷ್ಕತರ ನಾಯಕರನ್ನು ವೀಳ್ಯಕ್ಕೆಂದು ಮೂವರು ಉಚ್ಚ ವರ್ಣೀಯರ ಮನೆಗಳಿಗೆ ಕರೆಸಿಕೊಳ್ಳಲಾಯಿತು. ಸ್ಪಶ್ಯಾಸ್ಪಶ್ಯದ ಭೇದವೇನೂ ಅಲ್ಲಿರಲಿಲ್ಲ. ಹೀಗೆ ಜಳ್‌ಗಾಂವ್‌ನ ಬಹಿಷ್ಕೃತ ಧುರೀಣರು ತಮ್ಮ ದೃಢತೆಯಿಂದ ಜಯ ಸಾಧಿಸಿದರು.

ಅವರ ಈ ಯಶಸ್ಸಿಗಾಗಿ ನಾವು ಅವರನ್ನು ಮನಃಪೂರ್ವಕ ಅಭಿನಂದಿಸುತ್ತೇವೆ. ವಿಜಯಶ್ರೀಯು ಯಾವಾಗಲೂ ಶೂರರ ಕೊರಳಿಗೆ ಮಾಲೆ ಹಾಕುತ್ತಾಳೆಂಬುದನ್ನು ಬಹಿಷ್ಕೃತರು ಲಕ್ಷದಲ್ಲಿ ಇರಿಸಿಕೊಳ್ಳಬೇಕು. ಬೆದರಿಕೆ ಎಂದೂ ಪೊಳ್ಳು ಬೆದರಿಕೆಯಾಗಿರಬಾರದು. ನಿಶ್ಚಿತ ಪೂರ್ವ ತಯಾರಿ ಇರಬೇಕು. ಜಳ್‌ಗಾಂವ್‌ನ ಬಹಿಷ್ಕೃತ ನಾಯಕರು ತಾವಿತ್ತ ಬೆದರಿಕೆಗೆ ಬದ್ಧರಾಗಿ ಎಲ್ಲ ಬಹಿಷ್ಕೃತ ವರ್ಗದ ಮಾನವುಳಿಸಿದರು. ಇಲ್ಲವಾದರೆ, ಧರ್ಮಾಂತರದ ಬೆದರಿಕೆಯೆಂದರೆ ಪರಿಶುದ್ಧರ ನಡುವೆ ಒಂದು ಪರಿಹಾಸ್ಯದ ಮಾತಾಗಿ ಅಸ್ಪಶ್ಯತಾ ನಿರ್ಮೂಲನವೂ ದೂರ ದೂರವೇ ಉಳಿಯುತ್ತಿತ್ತು. ಬಹಿಷ್ಕೃತ ವರ್ಗದ ಜನರು ನುಡಿದಂತೆ ನಡೆಯುವರೆಂದು ಪುರಾಣಮತವಾದಿಗಳಿಗೆ ಖಂಡಿತವಾಗಬೇಕಿತ್ತು. ಬಹಿಷ್ಕೃತರಿಗೆ ದೊರಕಿದ ಜಯದಿಂದ ಪರಿಶುದ್ಧರು ಮೆತ್ತಗಾಗಿ, ಒಪ್ಪಂದದ ಮಾತನ್ನಾಡಿ, ಈವರೆಗೆ ಬಹಿಷ್ಕೃತರ ಮೇಲಾದಂತಹ ಅನ್ಯಾಯವನ್ನು ಅಪ್ರತ್ಯಕ್ಷವಾಗಿ ಒಪ್ಪಿಕೊಂಡಂತಾಗಿರುವುದು ಸ್ವಾಭಾವಿಕವಾಗಿಯೇ ಎಲ್ಲ ಬಹಿಷ್ಕೃತರಿಗೆ ಅಭಿಮಾನದ, ಸಮಾಧಾನದ ವಿಷಯ.

ಹನ್ನೆರಡು ಅಸ್ಪಶ್ಯರು ಮುಸಲ್ಮಾನರಾದುದರಿಂದ ಎರಡು ಸಾರ್ವಜನಿಕ ಬಾವಿಗಳು ಬಹಿಷ್ಕೃತರಿಗಾಗಿಯೇ ತೆರೆಯಲ್ಪಟ್ಟವು; ಮೂವರು ಉಚ್ಚವರ್ಣೀಯರ ಮನೆಗಳಲ್ಲಿ ಅಸ್ಪಶ್ಯ ನಾಯಕರನ್ನು ಸ್ಪಶ್ಯಾಸ್ಪಶ್ಯ ಭೇದವಿಲ್ಲದೆ, ವೀಳ್ಯ ನೀಡಿ ಸತ್ಕರಿಸಲಾಯಿತು. ಹೀಗೆಯೇ ಮುಂದೆ ಸ್ವಸಂತೋಷದಿಂದ, ಯಾವುದೇ ಬೆದರಿಕೆಯಿಲ್ಲದೆ, ಕಟ್ಟು ನಿಟ್ಟಿಲ್ಲದೆ ನಡೆಯುವಂತಾದರೆ, ಅದು ಈ ಉಚ್ಚವರ್ಗದ ಜನರ ಮನದ ವೈಶಾಲ್ಯವನ್ನೂ, ಬುದ್ಧಿಯ ಸಮಂಜಸತೆಯನ್ನು ತೋರುತ್ತಿತ್ತ್ತು. ಜಳ್‌ಗಾಂವ್‌ನಲ್ಲಿ ಸುಮನಸ್ಕರಾದ ನ್ಯಾಯಪ್ರಿಯ ಸಮತಾವಾದಿ ಉಚ್ಚ ವರ್ಗದವರು ಇದ್ದರಾದರೂ, ಇತರ ಸವರ್ಣೀಯರು ಬಹಿಷ್ಕೃತರ ಬೆದರಿಕೆ ಬಳಿಕವಷ್ಟೇ ಅವರ ಮಾತನ್ನು ಗೌರವಿಸಿದರು ಎಂಬುದು ನಿರ್ವಿವಾದ. ಇದು ಹಿಂದೂ ಸಮಾಜದ ದೊಡ್ಡ ಅಧಃಪತನವೆಂದೇ ನಮ್ಮ ಭಾವನೆ. ಇದು ಹೊಂದಿಕೊಳ್ಳುವ ಗುಣ ಮತ್ತು ಇದರಿಂದಾಗಿಯೇ ಹಿಂದೂ ಸಮಾಜ ಈ ವರೆಗೆ ಹಾಗೂ ಮುಂದೆಯೂ ಉಳಿದುಕೊಂಡು ಬರುವುದೆಂದು ಯಾರಾದರೂ ಹೇಳಿದರೂ, ನಾವಿದನ್ನು ಅಧಃಪತನವೆಂದೇ ತಿಳಿಯುತ್ತೇವೆ.

ಮುಸಲ್ಮಾನ ಮತ್ತು ಕ್ರೈಸ್ತಧರ್ಮಗಳು ಭಾರತದಲ್ಲಿ ಇರದಿರದಿದ್ದರೆ, ಹಿಂದೂ ಸಮಾಜದೆದುರು ತಮ್ಮ ಸಂಖ್ಯಾಬಲದ ಪ್ರಶ್ನೆ ಇರದೆ ಹೋಗಿದ್ದರೆ ಅಸ್ಪಶ್ಯರ ಸ್ಥಿತಿ ಇಂದು ಏನಾಗಿರುತ್ತಿತ್ತು, ಅಸ್ಪಶ್ಯತೆಯನ್ನು ಕೊಡವಿಕೊಳ್ಳುವುದು ಎಷ್ಟು ಕಷ್ಟವಾಗುತ್ತಿತ್ತು, ತಮ್ಮ ಉನ್ನತಿಗಾಗಿ ಹೋರಾಡುವಲ್ಲಿ ಎಷ್ಟು ಸಂಕಟಗಳನ್ನೆದುರಿಸಬೇಕಾಗುತ್ತಿತ್ತು ಎಂಬ ವಿಚಾರ, ಈ ಸಂದರ್ಭದಲ್ಲಿ ಮನಸ್ಸಿ ನಲ್ಲಿ ಬರದಿರುವುದಿಲ್ಲ. ಅವರಿಗೆ ನಿಜವಾಗಿಯೂ ನ್ಯಾಯದ, ಸಮತೆಯ, ಮನುಷ್ಯತ್ವದ ಕಾಳಜಿಯಿದ್ದಿದ್ದರೆ, ಅಸ್ಪಶ್ಯರ ಮೇಲಾಗುವ ಸಾಮಾಜಿಕ ಅನ್ಯಾಯವನ್ನು ದೂರಸರಿಸಲು, ಹೀಗೆ ಧರ್ಮಾಂತರದ ಬೆದರಿಕೆ ಒಡ್ಡಲ್ಪಡುವವರೆಗೆ ಕಾಯಬೇಕಾಗಿ ಬರುತ್ತಿರಲಿಲ್ಲ.

ಎಲ್ಲಿಯವರೆಗೆ ಅವರನ್ನು ಹಿಂಸಿಸಬಹುದೋ, ಅಲ್ಲಿಯವರೆಗೆ ಹಿಂಸಿಸುವ, ಎಲ್ಲಿಯವರೆಗೆ ಅನ್ಯಾಯ ಮಾಡಬಹುದೋ, ಅಲ್ಲಿಯವರೆಗೆ ಅನ್ಯಾಯ ಮಾಡುವ, ಎಲ್ಲಿಯವರೆಗೆ ಪ್ರತೀಕಾರ ಏಳುವುದಿಲ್ಲವೋ, ಅಲ್ಲಿಯವರೆಗೆ ಖುಶಿಯಿಂದ ದೌರ್ಜನ್ಯವೆಸಗುವ, ಎಲ್ಲಿಯವರೆಗೆ ನ್ಯಾಯ ನೀಡುವಲ್ಲಿ ಸರಕ್ಷಿತವಾಗಿ ಅದನ್ನು ತಪ್ಪಿಸಬಹುದೋ ಅಲ್ಲಿಯವರೆಗೆ ತಪ್ಪಿಸುವ, ಎಲ್ಲಿಯವರೆಗೆ ಅವರ ಚಳವಳಿ ಬಗ್ಗೆ ಉಪಹಾಸ್ಯ ತೋರಬಹುದೋ, ಅಲ್ಲಿಯವರೆಗೆ ಅದನ್ನು ಹಗುರವಾಗಿ ಕಾಣುವ, ಎಲ್ಲಿಯವರೆಗೆ ಅವರ ಅಜ್ಞಾನದ ಹಾಗೂ ಸಂಘಟನಾ ಹೀನತೆಯ ಲಾಭ ಪಡೆಯಬಹುದೋ, ಅಲ್ಲಿಯವರೆಗೆ ಅದನ್ನು ಪಡೆಯುವ, ಬಹಿಷ್ಕೃತರು ಮೂಗು ಮುಚ್ಚಿದರೇ ಬಾಯಿ ತೆರೆದಾರು ಮತ್ತು ನಮ್ಮ ಧರ್ಮ ಮತ್ತು ನಮ್ಮ ಸಮಾಜಕ್ಕೆ ಹೊಂದಿಕೊಳ್ಳುವ ಗುಣ ಇದೆ ಎಂಬ ಈ ಧೋರಣೆ, ಹಿಂದೂ ಸಮಾಜ ಸತ್ತಂತಿರುವ ಲಕ್ಷಣವಷ್ಟೇ. ಹೀಗೆ ಸತ್ತಂತಹ ಸ್ಥಿತಿಯಿಂದ ಎಬ್ಬಿಸುವುದು ಯಾವ ಸಮಾಜಕ್ಕೂ ಭೂಷಣವಲ್ಲ. ‘‘ಕಾಕೋಪಿ ಜೀವತಿ ಚಿರಾಯ ಬಲಿಚ ಭುಕ್ತೇ’’ ಎಂಬಂತೆ ಕಾಗೆಗಳ ಸಾವಿರಾರು ವರ್ಷದ ಬಾಳು ಮತ್ತು ಹಿಂದೂ ಸಮಾಜದ ಈ ಸಾವಿರಾರು ವರ್ಷದ ಬಾಳು ಒಂದೇ ಸಮಾನ.!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News