ಶ್ರೇಷ್ಠ ನಟ ಪ್ರಶಸ್ತಿಯನ್ನು ರಕ್ಷಿತ್ ಶೆಟ್ಟಿ ಯಾರಿಗೆ ಅರ್ಪಿಸಿದರು ಗೊತ್ತೇ ?

Update: 2017-03-31 09:21 GMT

ಹೈದರಾಬಾದ್,ಮಾ.31 : ಇಲ್ಲಿ ಗುರುವಾರ ಐಐಎಫ್‌ಎ ಉತ್ಸವಂ 2017ರ ಎರಡನೇ ದಿನದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ ಚಿತ್ರೋದ್ಯಮದ ಸರದಿ ಬಂದಾಗ ಮಂಗಳೂರಿಗ ರಕ್ಷಿತ್ ಶೆಟ್ಟಿಯ ‘ಕಿರಿಕ್ ಪಾರ್ಟಿ’ ಮಿಂಚಿದ್ದೇ ಮಿಂಚಿದ್ದು. ಕನ್ನಡ ಚಿತ್ರರಂಗ ಇತರ ಕೆಲವು ಉತ್ತಮ ಚಿತ್ರಗಳಾದ ಯುಟರ್ನ್, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿಲ್ಲಿಂಗ್ ವೀರಪ್ಪನ್, ಮುಂತಾದವುಗಳನ್ನು ಕಂಡ ವರ್ಷದಲ್ಲಿ ಕಿರಿಕ್ ಪಾರ್ಟಿ ಇಷ್ಟೊಂದು ಮಿಂಚಿದ್ದು ನಿಜವಾಗಿಯೂ ದೊಡ್ಡ ಸಾಧನೆಯೇ ಎನ್ನಬೇಕು. ಈ ಚಿತ್ರ ಕಥೆ ಬರೆದು, ನಿರ್ಮಿಸಿ, ಚಿತ್ರದ ಪ್ರಮುಖ ಪಾತ್ರವನ್ನೂ ವಹಿಸಿರುವ ರಕ್ಷಿತ್ ಚಿತ್ರ ಗಳಿಸಿದ ಅಷ್ಟೂ ಪ್ರಶಸ್ತಿಗಳನ್ನು ಪಡೆಯಲು ವೇದಿಕೆಯಲ್ಲಿಯೇ ನಿಂತುಕೊಳ್ಳಬೇಕಿತ್ತೇನೋ ಎಂದು ಹಲವರು ಅಂದುಕೊಂಡಿದ್ದರೆ ಆಶ್ಚರ್ಯವಿಲ್ಲ.

ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ಕಿರಿಕ್ ಪಾರ್ಟಿ, ಅತ್ಯುತ್ತಮ ನಟ (ರಕ್ಷಿತ್ ಶೆಟ್ಟಿ), ಅತ್ಯುತ್ತಮ ಸಂಗೀತ ನಿರ್ದೇಶಕ (ಬಿ ಅಜನೀಶ್ ಲೋಕನಾಥ್), ಅತ್ಯುತ್ತಮ ಹಿನ್ನೆಲೆ ಗಾಯಕ (ವಿಜಯ ಪ್ರಕಾಶ್) ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ಕೊರಿಯೋಗ್ರಾಫರ್ ಮುಂತಾದ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ತಮ್ಮ ಚಿತ್ರಕ್ಕೆ ಇಷ್ಟೊಂದು ಪ್ರಶಸ್ತಿಗಳು ಬಂದಿರುವ ಬಗ್ಗೆ ಆನಂದಪರವಶರಾಗಿರುವ ರಕ್ಷಿತ್ ತಮಗೆ ಬಂದ ಶ್ರೇಷ್ಠ ನಟ ಪ್ರಶಸ್ತಿ ನಿಜವಾಗಿಯೂ ಹಿರಿಯ ನಟ ಅನಂತನಾಗ್ ಅವರಿಗೆ ಸಲ್ಲಬೇಕಿತ್ತು. ಈ ಪ್ರಶಸ್ತಿಯನ್ನು ಅವರಿಗೆ ಅರ್ಪಿಸುತ್ತೇನೆ ಎಂದು ಹೇಳಿ ತಮ್ಮ ದೊಡ್ಡತನ ಮೆರೆದಿದ್ದಾರೆ. ಅವರು ಹೇಳಿದ್ದಿಷ್ಟು : ‘‘ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ನಿಮ್ಮೆಲ್ಲರ ಸಹಕಾರವಿಲ್ಲದೆ ಇದೆಲ್ಲಾ ಸಾಧ್ಯವಾಗುತ್ತಿರಲಿಲ್ಲ. ಕಿರಿಕ್ ಪಾರ್ಟಿಗೆ ಆರು ಪ್ರಶಸ್ತಿಗಳು ಮತ್ತು ಗೋಧಿ ಬಣ್ಣ ಸಾಧಾರಣ ಮೈಕಟ್ಟಿಗೆ ಮೂರು ಪ್ರಶಸ್ತಿಗಳು. ಇದಕ್ಕಿಂತ ಹೆಚ್ಚಿನದೇನೂ ಕೇಳಲು ಸಾಧ್ಯವಿಲ್ಲ. ಐಐಎಫ್‌ಎಗೆ ಧನ್ಯವಾದಗಳು. ಅನಂತನಾಗ್ ಸರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಬೇಕಿತ್ತು ಎಂದು ನಾನು ಬಲವಾಗಿ ನಂಬುತ್ತೇನೆ. ಕಿರಿಕ್ ಪಾರ್ಟಿ ಕರ್ಣನನ್ನು ಯಾರಾದರೂ ಆಚೆಗೆ ತಳ್ಳಬಹುದಾದರೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನೆಮಾದಲ್ಲಿ ಅನಂತನಾಗ್ ಸರ್ ಅವರಿಗೆ ಸರಿಸಾಟಿ ಯಾರೂ ಇಲ್ಲ. ಯಾವುದೇ ಪ್ರಶಸ್ತಿಗಿಂತಲೂ ಅನಂತನಾಗ್ ಆವರ ಶ್ರೇಷ್ಠತೆ ಉನ್ನತವಾಗಿದ್ದು ಈ ಪ್ರಶಸ್ತಿಯನ್ನು ನಾನು ವಿನೀತನಾಗಿ ಅವರಿಗೆ ಅರ್ಪಿಸುತ್ತೇನೆ.’’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News