ವಿಭಿನ್ನ ಹೆಸರುಗಳಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಲು ಯತ್ನಿಸಿದ್ದ ಸಂಸದ ಗಾಯಕವಾಡ್
ಹೊಸದಿಲ್ಲಿ,ಮಾ.31: ಏರ್ ಇಂಡಿಯಾದ ಹಿರಿಯ ಅಧಿಕಾರಿಯೋರ್ವರ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಪೊಲೀಸ್ ಪ್ರಕರಣವನ್ನು ಮೈಮೇಲೆ ಎಳೆದುಕೊಂಡಿರುವ ಜೊತೆಗೆ ದೇಶಿಯ ವಿಮಾನಯಾನ ಸಂಸ್ಥೆಗಳಿಂದ ನಿಷೇಧಕ್ಕೆ ಗುರಿಯಾಗಿರುವ ಶಿವಸೇನಾ ಸಂಸದ ರವೀಂದ್ರ ಗಾಯಕವಾಡ್ ಅವರು ಏರ್ ಇಂಡಿಯಾ ವಿಮಾನದಲ್ಲಿ ಸೀಟ್ ಕಾಯ್ದಿರಿಸಲು ವಿಭಿನ್ನ ಹೆಸರುಗಳಲ್ಲಿ ಕನಿಷ್ಠ ಮೂರು ಬಾರಿ ಪ್ರಯತ್ನಿಸಿದ್ದರು.
ಗಾಯಕವಾಡ್‌ರ ಕಚೇರಿ ಸಿಬ್ಬಂದಿಯೋರ್ವ ಮಂಗಳವಾರ ಏರ್ ಇಂಡಿಯಾದ ಕಾಲ್ ಸೆಂಟರ್‌ಗೆ ಕರೆ ಮಾಡಿ ಬುಧವಾರ ಮುಂಬೈನಿಂದ ದಿಲ್ಲಿಗೆ ಟಿಕೆಟ್ ಕಾಯ್ದಿರಿಸುವಂತೆ ಕೋರಿದ್ದ ಮತ್ತು ಪ್ರಯಾಣಿಕರ ಹೆಸರು ರವೀಂದ್ರ ಗಾಯಕವಾಡ್ ಎಂದು ತಿಳಿಸಿದ್ದ. ಕೋರಿಕೆ ತಕ್ಷಣವೇ ರದ್ದಾಗಿತ್ತು. ಬಳಿಕ ಹೈದ್ರಾಬಾದ್-ದಿಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಪ್ರೊಫೆಸರ್ ವಿ.ರವೀಂದ್ರ ಗಾಯಕವಾಡ್ ಹೆಸರಿನಲ್ಲಿ ಟಿಕೆಟ್ ಕಾಯ್ದಿರಿಸಲಾಗಿತ್ತಾದರೂ ಅದು ಬಳಿಕ ರದ್ದುಗೊಂಡಿತ್ತು.
ಮೂರನೇ ಪ್ರಯತ್ನ ಬುಧವಾರ ನಡೆದಿತ್ತು.ಟ್ರಾವೆಲ್ ಏಜಂಟ್‌ನನ್ನು ಸಂಪರ್ಕಿಸಿದ್ದ ಸಂಸದರ ಸಿಬ್ಬಂದಿ ನಾಗಪುರದಿಂದ ದಿಲ್ಲಿಗೆ ಪ್ರಯಾಣಿಸಲು ಪ್ರೊಫೆಸರ್ ರವೀಂದ್ರ ಗಾಯಕವಾಡ್ ಹೆಸರಿನಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಲು ತಿಳಿಸಿದ್ದ. ಟ್ರಾವೆಲ್ ಏಜಂಟ್ ತಕ್ಷಣ ಸ್ಥಳೀಯ ಸ್ಟೇಷನ್ ಮ್ಯಾನೇಜರ್‌ನನ್ನು ಸಂಪರ್ಕಿಸಿದ್ದು, ಇಲ್ಲಿರುವ ಏರ್ ಇಂಡಿಯಾದ ಕೇಂದ್ರ ಕಚೇರಿಗೆ ಮಾಹಿತಿ ರವಾನೆಯಾಗಿತ್ತು. ಹೀಗಾಗಿ ಗಾಯಕವಾಡ್‌ರ ಈ ಪ್ರಯತ್ನವೂ ವಿಫಲಗೊಂಡಿತ್ತು.
ಸಂಸದರು ಬೇರೆ ಬೇರೆ ಸಂಕೇತಾಕ್ಷರಗಳನ್ನು ಬಳಸಿ ಟಿಕೆಟ್ ಬುಕ್ ಮಾಡಲು ಪ್ರಯತ್ನಿಸಿದ್ದು, ರವೀಂದ್ರ ಗಾಯಕವಾಡ್,ಆರ್ ಗಾಯಕವಾಡ್,ಪ್ರೊಫೆಸರ್ ವಿ.ರವೀಂದ್ರ ಗಾಯಕವಾಡ್ ಮತ್ತು ಪ್ರೊಫೆಸರ್ ರವೀಂದ್ರ ಗಾಯಕವಾಡ್ ಈ ಹೆಸರುಗಳನ್ನು ನಮ್ಮ ಕಂಪ್ಯೂಟರ್ ವ್ಯವಸ್ಥೆಯಲ್ಲಿ ನಿಷೇಧಿಸಲಾಗಿದೆ. ಕೆಲ ಬಾರಿ ಹೆಸರಿನಲ್ಲಿಯ ಅಕ್ಷರಗಳನ್ನೂ ಬದಲಿಸಿ ಅವರು ಟಿಕೆಟ್‌ಗಾಗಿ ಯತ್ನಿಸಿದ್ದರು ಎಂದು ಏರ್ ಇಂಡಿಯಾದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.