ಮೋದಿ, ಶಿವರಾಜ್ ಸಿಂಗ್ ಫೋಟೋಗಳಿಗೂ ಹೂಮಾಲೆ ಹಾಕಿದ ಮೇಯರ್!
ಇಂಧೋರ್, ಮಾ.31: ಇಂದೋರ್ ನಗರದ ಮೇಯರ್ ಮಾಲಿನಿ ಗೌಡ್ ತಮ್ಮ ದಿವಂಗತ ಪತಿಯ ಫೋಟೋದೊಂದಿಗೆ ಗೋಡೆಯಲ್ಲಿ ನೇತು ಹಾಕಲಾಗಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಧಾನಿ ನರೇಂದ್ರ ಮೋದಿಯ ಭಾವಚಿತ್ರಗಳಿಗೂ ಹೂವಿನ ಮಾಲೆಗಳನ್ನು ಹಾಕಿ ಎಡವಟ್ಟು ಮಾಡಿಕೊಂಡಿದ್ದಾರೆಂದು ನ್ಯೂಸ್ 18 ವರದಿಯೊಂದು ತಿಳಿಸಿದೆ.,
ಮಾಲಿನಿ ಗೌಡ್ ಮನೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಈ ಘಟನೆ ನಡೆದಿದೆ. ಈಕೆ ಮಧ್ಯಪ್ರದೇಶದ ಮಾಜಿ ಸಚಿವ ದಿವಂಗತ ಲಕ್ಷ್ಮಣ್ ಸಿಂಗ್ ಗೌಡ್ ಪತ್ನಿಯಾಗಿದ್ದಾರೆ. ಆದರೆ ಲಕ್ಷ್ಮಣ್ ಫೋಟೋದೊಂದಿಗೆ ಮೋದಿ ಹಾಗೂ ಶಿವರಾಜ ಸಿಂಗ್ ಫೋಟೋಗಳಿಗೂ ಮಾಲೆ ಹಾಕಿರುವುದು ತಪ್ಪು ಎಂದು ಅಲ್ಲಿದ್ದ ಯಾರಿಗೂ ಅನಿಸಿರಲಿಲ್ಲವೆಂದು ಕಾಣಿಸುತ್ತಿದೆ.
ಇಂಧೋರ್ ನಗರದ ಬಿಜೆಪಿ ಘಟಕ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. ಕಾಂಗ್ರೆಸ್ ಶಾಸಕ ಜಿತು ಪಟ್ವಾರಿ ಮಾತ್ರ ಈ ಘಟನೆಯನ್ನು ಖಂಡಿಸಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆ ನೀಡಬೇಕೆಂದು ಹೇಳಿದರು. ಆದರೆ ಇಂಧೋರ್ ಮೇಯರ್ ಬಿಜೆಪಿಯವರಾಗಿರುವುದರಿಂದ ಪಕ್ಷ ಮೌನದಿಂದಿದೆ ಎಂದೂ ಅವರು ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜೀವಿತಾವಧಿಯಲ್ಲಿ ಅವರಿಗೆ ಪುಷ್ಪನಮನ ಸಲ್ಲಿಸಿ ಝಾರ್ಖಂಡ್ ಸಚಿವರೊಬ್ಬರು ಭಾರೀ ಟೀಕೆಗೊಳಗಾಗಿದ್ದರು. ಅಂತೆಯೇ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮರಣ ಹೊಂದಿದ್ದಾರೆಂದು ತಿಳಿದುಕೊಂಡಿದ್ದ ಶಾಲಾ ಪ್ರಿನ್ಸಿಪಾಲ್ ಒಬ್ಬರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ತಮ್ಮ ಕೆಲಸವನ್ನೂ ಕಳೆದುಕೊಂಡಿದ್ದರು.