ಬಿಬಿಸಿ ಸಂದರ್ಶನದ ವೇಳೆ ಒಡೆಯನನ್ನೇ ಕಚ್ಚಿ ಕೊಂದ ಸಾಕು ನಾಯಿ!
ಲಂಡನ್, ಮಾ. 31: ಬಿಬಿಸಿ ಡಾಕ್ಯುಮೆಂಟರಿ ತಂಡದ ಸಂದರ್ಶನದ ವೇಳೆ ಮಾತುಕತೆ ನಡೆಸುತ್ತಿದ್ದಾಗ ಸಾಕು ನಾಯಿಯ ದಾಳಿಯಿಂದ ಗಾಯಗೊಂಡಿದ್ದ ವ್ಯಕ್ತಿಮೃತಪಟ್ಟಿದ್ದಾರೆ. ಮಾರಿಯೊ ಪೆರಿವೊಟೊಸ್(41) ಸಾಕು ನಾಯಿ ಕಡಿತಕ್ಕೊಳಗಾಗಿ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಈ ತಿಂಗಳು 20ನೆ ತಾರೀಕು ಲಂಡನ್‌ನ ಮನೆಯಲ್ಲಿ ಪತ್ರಕರ್ತರೊಡನೆ ಮಾತಾಡುತ್ತಿದ್ದಾಗ ಮಾರಿಯೊರ ಸಾಕುನಾಯಿ ಅವರನ್ನೇ ಕಚ್ಚಿತ್ತು. . ಸ್ಟಾಫರ್ಡ್‌ಶೇರ್ ಬುಲ್ ಕೆರಿಯರ್ ಜಾತಿಯ ನಾಯಿ ತನ್ನಮಾಲಕನ ಮೇಲೆ ಹಾರಿ ಕೊರಳಿಗೆ ಕಚ್ಚಿತ್ತು. ಮಾರಿಯೊ ಗಾಯಗೊಂಡಕೂಡಲೇ ಬಿಬಿಸಿ ತಂಡ ತುರ್ತುಸಹಾಯ ವಿಭಾಗದ ನೆರವು ಪಡೆದು ಅವರನ್ನು ಆಸ್ಪತ್ರೆಗೆ ದಾಖಲಿಸಿತ್ತು. ಆದರೆ ನಾಯಿ ಕಚ್ಚಿ ಎರಡು ಗಂಟೆಯ ಬಳಿಕ ಮಾರಿಯೊ ಅಸುನೀಗಿದ್ದಾರೆ. ಶ್ವಾಸ ನಾಳಕ್ಕೆ ಗಾಯವಾಗಿದ್ದು ಮತ್ತು ರಕ್ತಸ್ರಾಮ ಮಾರಿಯೊ ಸಾವಿಗೆ ಕಾರಣ ಎಂದು ಮರಣೋತ್ತರ ವರದಿಯಲ್ಲಿ ವಿವರಿಸಲಾಗಿದೆ.
ಮಾರಿಯೊರೊಂದಿಗೆ ಯಾಕೆ ಸಂದರ್ಶನ ನಡೆಸಲಾಗಿತ್ತು ಎನ್ನುವುದನ್ನು ಬಿಬಿಸಿ ಬಹಿರಂಗಪಡಿಸಿಲ್ಲ. ಘಟನೆಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಡಾಕ್ಯುಮೆಂಟರಿ ತಂಡ ಸ್ಥಳದಲ್ಲಿಯೇ ಇದ್ದರೂ ವೀಡಿಯೊ ಚಿತ್ರೀಕರಿಸಿರಲಿಲ್ಲ ಎಂದು ಬಿಬಿಸಿ ಅಧಿಕಾರಿಗಳು ತಿಳಿಸಿದ್ದಾರೆ. ನಾಯಿಯನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.