×
Ad

ರಸ್ತೆಗಳಲ್ಲಿ ಸೈಕಲ್ ನಿಷೇಧ ಇಲ್ಲ: ಗಡ್ಕರಿ

Update: 2017-03-31 16:45 IST

ಮುಂಬೈ, ಎ.1: ರಸ್ತೆಗಳಲ್ಲಿ ಸೈಕಲ್‌ಗಳ ಸಂಚಾರವನ್ನು ನಿಷೇಧಿಸುವ ಯಾವುದೇ ಕ್ರಮದ ಸಾಧ್ಯತೆಯನ್ನು ತಳ್ಳಿಹಾಕಿರುವ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಬದಲಿಗೆ ವಾಯುಮಾಲಿನ್ಯವನ್ನು ತಡೆಯಲು ಸೈಕ್ಲಿಂಗ್ ಚಟುವಟಿಕೆಯನ್ನು ಉತ್ತೇಜಿಸಲು ಸರಕಾರವು ಬಯಸುತ್ತಿದೆ ಎಂದು ಹೇಳಿದ್ದಾರೆ.

ಗುರುವಾರ ಸಂಜೆ ಇಲ್ಲಿ ಸುದ್ದಿಗಾರರೊಡನೆ ಮಾತನಾಡುತ್ತಿದ್ದ ಸಚಿವರು ಪ್ರಮುಖ ರಸ್ತೆಗಳಲ್ಲಿ ಕಿರಿಕಿರಿಯನ್ನುಂಟು ಮಾಡುತ್ತಿರುವ ಮೋಟರೇತರ ಸಾರಿಗೆಗಳನ್ನು ನಿಷೇಧಿಸಲು ಸಂಸದೀಯ ಸಮಿತಿಯೊಂದು ಚಿಂತನೆ ನಡೆಸುತ್ತಿದೆ ಎಂಬ ವರದಿಗೆ ಪ್ರತಿಕ್ರಿಯಿಸಿ, ''ಅಂತಹುದೇನಿಲ್ಲ. ನಾವು ಸೈಕ್ಲಿಂಗ್‌ನ್ನು ಉತ್ತೇಜಿಸಲು ಬಯಸುತ್ತಿದ್ದೇವೆ ಎಂದು ನಾನು ಸಾರಿಗೆ ಸಚಿವನಾಗಿ ನಿಮಗೆ ತಿಳಿಸಬಲ್ಲೆ'' ಎಂದರು.

ಸೈಕಲ್ ಸವಾರಿಯು ಹೆಚ್ಚುತ್ತಿರುವ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರಿಗೆಯ ಅತ್ಯುತ್ತಮ ವಿಧಾನವೆಂದು ಬಣ್ಣಿಸಿದ ಗಡ್ಕರಿ, ನಿರ್ಮಾಣಗೊಳ್ಳುತ್ತಿರುವ ದಿಲ್ಲಿ-ಮೀರತ್ ಎಕ್ಸಪ್ರೆಸ್ ಹೆದ್ದಾರಿಯಲ್ಲಿ ಸೈಕಲ್‌ಗಳಿಗಾಗಿಯೇ ಪ್ರತ್ಯೇಕ ಲೇನ್‌ಗಳ ವ್ಯವಸ್ಥೆ, ತನ್ನ ಲೋಕಸಭಾ ಕ್ಷೇತ್ರ ನಾಗ್ಪುರ ಸೇರಿದಂತ ಹಲವಾರು ನಗರಗಳಲ್ಲಿ ವಿಶೇಷ ಸೈಕಲ್ ಮಾರ್ಗಗಳು ಸೇರಿದಂತೆ ಮೂಲಸೌಕರ್ಯ ನಿರ್ಮಾಣಕ್ಕಾಗಿ ಪ್ರಯತ್ನಗಳನ್ನು ವಿವರಿಸಿದರು.

ಮೋಟಾರು ವಾಹನಗಳ(ತಿದ್ದುಪಡಿ) ಮಸೂದೆ-2016 ಅನ್ನು ಪರಿಶೀಲಿಸುತ್ತಿರುವ ಸಂಸದೀಯ ಸ್ಥಾಯಿ ಸಮಿತಿಯು ಇತ್ತೀಚಿಗೆ ಸಂಸತ್ತಿನಲ್ಲಿ ಮಂಡಿಸಿರುವ ವರದಿಯು, ಮಹಾನಗರಗಳಲ್ಲಿ ಪಾದಚಾರಿಗಳು ಮತ್ತು ಮೋಟರೇತರ ವಾಹನಗಳು ಮುಖ್ಯರಸ್ತೆಗಳು ಮತ್ತು ಹೆದ್ದಾರಿಗಳನ್ನು ಬಳಸುವುದನ್ನು ನಿರ್ಬಂಧಿಸುವಂತೆ ಶಿಫಾರಸು ಮಾಡಿದೆ.

ಇದರಿಂದ ಕೆರಳಿರುವ 7,500ಕ್ಕೂ ಅಧಿಕ ಸೈಕಲ್‌ಪ್ರಿಯರು, ಇದು ಜನವಿರೋಧಿ, ಬಡವರ ವಿರೋಧಿಯಾಗಿರುವ ಜೊತೆಗೆ ತಾರತಮ್ಯದಿಂದ ಕೂಡಿರುವ ದರಿಂದ ಸಮಿತಿಯ ಶಿಫಾರಸನ್ನು ತಿರಸ್ಕರಿಸಬೇಕೆಂದು ಆಗ್ರಹಿಸಿ ಆನ್‌ಲೈನ್ ಅರ್ಜಿಗೆ ಸಹಿ ಹಾಕಿದ್ದಾರೆ.

ಮಹಾನಗರಗಳಲ್ಲಿ ಸೈಕಲ್ ಸಂಚಾರವನ್ನು ನಿಷೇಧಿಸುವ ಕುರಿತಂತೆ ಮೋಟಾರು ವಾಹನಗಳ(ತಿದ್ದುಪಡಿ) ಮಸೂದೆ-2016 ಅನ್ನು ಪರಿಶೀಲಿಸುತ್ತಿರುವ ಸಂಸದೀಯ ಸ್ಥಾಯಿ ಸಮಿತಿಯು ಸಂಸತ್‌ನಲ್ಲಿ ಮಂಡಿಸಿರುವ ಶಿಫಾರಸನ್ನು ವಿರೋಧಿಸಿ ಮಂಗಳೂರಿನ ಉದ್ಯಮಿ ಹಾಗೂ ಲೇಖಕ ಅಬ್ದುಲ್ ರಹೀಂ ಟೀಕೆ change.org ವೆಬ್‌ಸೈಟ್ ಮೂಲಕ ಆನ್‌ಲೈನ್ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದರು. ಈ ಅಭಿಯಾನದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, 7,704 ಸೈಕಲ್ ಪ್ರಿಯರು ಆನ್‌ಲೈನ್ ಸಹಿ ಮೂಲಕ ಸಂಸದೀಯ ಸ್ಥಾಯಿ ಸಮಿತಿಯ ಈ ಶಿಫಾರಸನ್ನು ತಿರಸ್ಕರಿಸುವಂತೆ ಆಗ್ರಹಿಸಿದ್ದರು.

ಇದಕ್ಕೆ ಪೂರಕ ಎಂಬಂತೆ ರಸ್ತೆಗಳಲ್ಲಿ ಸೈಕಲ್ ಸಂಚಾರ ನಿರ್ಬಂಧಿಸುವ ಯಾವುದೇ ಕ್ರಮ ಇಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಇದೀಗ ಸ್ಪಷ್ಟಪಡಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News