ಗೋವಾದಲ್ಲಿ ಸರಕಾರ ರಚಿಸುವಲ್ಲಿ ಕಾಂಗ್ರೆಸ್ ವೈಫಲ್ಯಕ್ಕಾಗಿ ದಿಗ್ವಿಜಯ್‌ಗೆ ಥ್ಯಾಂಕ್ಸ್ ಹೇಳಿದ ಪಾರಿಕ್ಕರ್
ಹೊಸದಿಲ್ಲಿ,ಮಾ.31: ಗೋವಾ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಅವರು ಶುಕ್ರವಾರ ರಾಜ್ಯಸಭೆಗೆ ವಿದಾಯ ಹೇಳಿದರು. ಇದೇ ವೇಳೆ ಅವರು, ಗೋವಾ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಸ್ಥಾನಗಳನ್ನು ಗೆದ್ದು ಏಕೈಕ ಅತಿದೊಡ್ಡ ಪಕ್ಷವಾಗಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವನ್ನು ಸ್ಥಾಪಿಸುವಲ್ಲಿ ವೈಫಲ್ಯಕ್ಕಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ,ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ತನ್ನ ತವರು ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ಮರಳಲು ಇತ್ತೀಚಿಗೆ ಕೇಂದ್ರ ರಕ್ಷಣಾ ಸಚಿವ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಪಾರಿಕ್ಕರ್ ಶೂನ್ಯವೇಳೆಯಲ್ಲಿ ಸದನಕ್ಕೆ ಭೇಟಿ ನೀಡಿದ್ದರು.
ರಕ್ಷಣಾ ಸಚಿವನಾಗಿ ತನ್ನ ಅಧಿಕಾರಾವಧಿಯಲ್ಲಿ ತನ್ನನ್ನು ಬೆಂಬಲಿಸಿದ್ದಕ್ಕಾಗಿ ಸಭಾಪತಿ,ಉಪಸಭಾಪತಿ ಮತ್ತು ಸದಸ್ಯರಿಗೆ ಧನ್ಯವಾದಗಳನ್ನು ಹೇಳಿದ ಪಾರಿಕ್ಕರ್, ತಾವೆಲ್ಲ ಯಾವಾಗ ಬೇಕಾದರೂ ಗೋವಾಕ್ಕೆ ಬರಬಹುದು ಎಂದು ಆಹ್ವಾನಿಸಿದರು.
ಬಳಿಕ, ‘‘ಕಾಂಗ್ರೆಸ್ ಉಸ್ತುವಾರಿಯಾಗಿ ಗೋವಾದಲ್ಲಿದ್ದರೂ ಕಾಂಗ್ರೆಸ್ ಸರಕಾರ ರಚನೆಗೆ ಯಾವುದೇ ಪ್ರಯತ್ನವನ್ನು ಮಾಡದೇ ನಾನು ಸರಕಾರ ರಚಿಸುವಂತೆ ಮಾಡಿದ್ದಕ್ಕಾಗಿ ಗೌರವಾನ್ವಿತ ಸದಸ್ಯ ದಿಗ್ವಿಜಯ್ ಸಿಂಗ್ ಅವರಿಗೆ ನನ್ನ ವಿಶೇಷ ಧನ್ಯವಾದಗಳು’’ ಎಂದು ಪಾರಿಕ್ಕರ್ ಕುಟುಕಿದಾಗ ಕೆರಳಿದ ಕಾಂಗ್ರೆಸ್ ಸದಸ್ಯರು ಸಭಾಪತಿಗಳ ವೇದಿಕೆಯ ಬಳಿ ತೆರಳಿ ಪ್ರತಿಭಟನೆ ವ್ಯಕ್ತಪಡಿಸಿದರು.
2014ರಲ್ಲಿ ಗೋವಾ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿ ನೇಮಕಗೊಂಡಿದ್ದ ಪಾರಿಕ್ಕೃ್ರ್ ಬಳಿಕ ರಾಜ್ಯಸಭೆ ಸದಸ್ಯರಾಗಿದ್ದರು.