×
Ad

ಮದ್ಯದಂಗಡಿ ನಿಷೇಧ : ಸಣ್ಣ ಪಟ್ಟಣಗಳಲ್ಲಿ ಅಂತರ 220 ಮೀ.ಗೆ ಇಳಿಕೆ

Update: 2017-03-31 22:05 IST

ಹೊಸದಿಲ್ಲಿ,ಮಾ.31: ಹೆದ್ದಾರಿಗಳ ಬದಿಯ ಮದ್ಯದಂಗಡಿಗಳ ಮೇಲಿನ ನಿಷೇಧದಿಂದ ಕಡಿಮೆ ಜನಸಂಖ್ಯೆಯ ಪಟ್ಟಣಗಳಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ಲಭಿಸಿದೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಪಕ್ಕದ 500 ಮೀ.ವರೆಗಿನ ಪ್ರದೇಶದಲ್ಲಿ ಮದ್ಯದಂಗಡಿಗಳನ್ನು ನಿಷೇಧಿಸಿದ್ದ ತನ್ನ ಆದೇಶವನ್ನು ಶುಕ್ರವಾರ ಪರಿಷ್ಕರಿಸಿರುವ ಸರ್ವೋಚ್ಚ ನ್ಯಾಯಾಲಯವು 20,000 ವರೆಗೆ ಜನಸಂಖ್ಯೆ ಹೊಂದಿರುವ ಪ್ರದೇಶಗಳಿಗೆ ಈ ಅಂತರವನ್ನು 220 ಮೀ.ಗೆ ಇಳಿಸಿದೆ.

ಶುಕ್ರವಾರದ ಆದೇಶದಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಿರುವ ಪ್ರದೇಶಗಳನ್ನು ಹೊರತು ಪಡಿಸಿ ಇತರೆಡೆಗಳಲ್ಲಿ ಹೆದ್ದಾರಿಗಳಿಂದ 500 ಮೀ.ವರೆಗೆ ಮದ್ಯದಂಗಡಿಗಳನ್ನು ನಿಷೇಧಿಸಿರುವ ತನ್ನ 2016,ಡಿಸೆಂಬರ್ 15ರ ಆದೇಶವು ಕಾರ್ಯಾಚರಣೆಯಲ್ಲಿರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ ನೇತೃತ್ವದ ಪೀಠವು ಸ್ಪಷ್ಟಪಡಿಸಿತು.

ಮದ್ಯಪಾನ ಮಾಡಿ ವಾಹನ ಚಾಲನೆಯಿಂದಾಗಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಪನ್ನು ನೀಡಲಾಗಿದೆ ಎಂದು ಪೀಠವು ತಿಳಿಸಿತು.

ಡಿ.15ರ ತನ್ನ ಆದೇಶಕ್ಕೆ ಮುನ್ನ ನೀಡಲಾಗಿರುವ ಮದ್ಯಮಾರಾಟ ಪರವಾನಿಗೆಗಳು ಈ ವರ್ಷದ ಸೆ.30ರವರೆಗೆ ಸಿಂಧುವಾಗಿರುತ್ತವೆ ಎಂದೂ ಅದು ಸ್ಪಷ್ಟಪಡಿಸಿತು. ಇತರ ಮದ್ಯದಂಗಡಿಗಳು ಎ.1ರಿಂದಲೇ ಬಾಗಿಲೆಳೆದುಕೊಳ್ಳಬೇಕಾಗಿದೆ.

ಹೆದ್ದಾರಿಗಳ ಪಕ್ಕದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸುವ 220 ಮೀ. ಮಾನದಂಡವು ಸಿಕ್ಕಿಂ, ಮೇಘಾಲಯ ಮತ್ತು ಹಿಮಾಚಲ ಪ್ರದೇಶದಂತಹ ಗುಡ್ಡಗಾಡು ರಾಜ್ಯಗಳಿಗೂ ಅನ್ವಯಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News