ಪೋಲಂಡ್‌ನಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಹಲ್ಲೆ
ಹೊಸದಿಲ್ಲಿ, ಎ.1: ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನ ಮೇಲೆ ಪೋಲಂಡ್‌ನಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ. ಹಲ್ಲೆಯಿಂದ ಮೃತಪಟ್ಟಿದ್ದಾನೆ ಎಂದು ನಂಬಲಾಗಿದ್ದ ಆ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಹಲ್ಲೆ ಕುರಿತಂತೆ ಸುಷ್ಮಾ ಸ್ವರಾಜ್, ಪೋಲಂಡ್‌ನಲ್ಲಿರುವ ಭಾರತೀಯ ರಾಯಭಾರಿ ಅಜಯ್ ಬಿಸಾರಿಯಾ ಜತೆ ಚರ್ಚಿಸಿದ್ದು, ರಾಯಭಾರ ಕಚೇರಿಯಿಂದ ಘಟನೆ ಬಗ್ಗೆ ವರದಿ ಬಯಸಿದ್ದಾರೆ. ವಿದ್ಯಾರ್ಥಿಯ ಹೆಸರನ್ನು ಸರ್ಕಾರ ಗುಪ್ತವಾಗಿ ಇರಿಸಿದ್ದು, ಆತನ ಪ್ರಾಣಕ್ಕೆ ಅಪಾಯವಿಲ್ಲ ಎಂದು ಸುಷ್ಮಾ ಟ್ವೀಟ್ ಅಪ್‌ಡೇಟ್‌ನಲ್ಲಿ ತಿಳಿಸಿದ್ದಾರೆ.
"ವಿದ್ಯಾರ್ಥಿಯನ್ನು ಭೀಕರವಾಗಿ ಥಳಿಸಲಾಗಿದೆ. ಘಟನೆಯ ಎಲ್ಲ ಆಯಾಮಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ" ಎಂದು ಸುಷ್ಮಾ ಸ್ಪಷ್ಟಪಡಿಸಿದ್ದಾರೆ. ಪೋಲಂಡ್‌ನಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಹಲ್ಲೆ ನಡೆದಿರುವುದು ಅಲ್ಲಿನ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ಪೋಲನ್ ಟ್ರಾಮ್ ಎಂಬಲ್ಲಿ ಬುಧವಾರ ಈ ಘಟನೆ ನಡೆದಿದ್ದು, ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಯ ವಿವರ ಸಂಗ್ರಹಿಸಲಾಗುತ್ತಿದೆ ಎಂದು ಭಾರತೀಯ ರಾಯಭಾರಿ ಟ್ವೀಟ್ ಮಾಡಿದ್ದಾರೆ.
ಭಾರತೀಯ ಮೂಲದ ಎಂಜಿನಿಯರ್ ಶ್ರೀನಿವಾಸ ಕುಚಿಬೋತ್ಲಾ ಮೇಲೆ ಇತ್ತೀಚೆಗೆ ಅಮೆರಿಕದಲ್ಲಿ ಹಲ್ಲೆ ನಡೆದದ್ದನ್ನು ಸ್ಮರಿಸಬಹುದು.