×
Ad

ಇಬ್ಬರು ಯುವತಿಯರನ್ನು ಬಲಿ ಪಡೆದ ಮಾದಕವಸ್ತು

Update: 2017-04-01 09:25 IST

ಹೊಸದಿಲ್ಲಿ, ಎ.1: ಸ್ನೇಹಿತರ ಜತೆ ಮೋಜಿನ ಪಾರ್ಟಿಯಲ್ಲಿ ಪಾಲ್ಗೊಂಡ ಮಣಿಪುರ ಮೂಲದ ಇಬ್ಬರು ಯುವತಿಯರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ನಡೆದಿದೆ. ದಕ್ಷಿಣ ದಿಲ್ಲಿಯ ವಸಂತ ವಿಹಾರದಲ್ಲಿ ಪಾರ್ಟಿ ನಡೆಸಿದ ಬಳಿಕ ಅಸ್ವಸ್ಥಗೊಂಡ ಇವರ ಸಾವಿಗೆ ಮಾದಕವಸ್ತುಗಳ ಅಧಿಕ  ಸೇವನೆಯೇ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ಕ್ಲಾರಾ ಮತ್ತು ರಕಿಮ್ ಅವರು ಮಾದಕವಸ್ತುಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿ, ಇದು ವಿಷವಾಗಿ ಪರಿಣಮಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅಂದಾಜಿಸಿದ್ದು, ಅವರ ಮೇಲೆ ಯಾವುದೇ ರೀತಿಯ ಕಿರುಕುಳ ಅಥವಾ ಹಲ್ಲೆ ನಡೆದಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ.

ಇಬ್ಬರೂ ಯುವತಿಯರನ್ನು ದೂರದ ಸಂಬಂಧಿ ಯುವಕ ಆಸ್ಪತ್ರೆಗೆ ದಾಖಲಿಸಿದ್ದಾನೆ. ಸಫ್ದರ್‌ಜಂಗ್ ಆಸ್ಪತ್ರೆಗೆ ಕರೆತಂದಾಗ ಕ್ಲಾರಾ ಉಸಿರಾಡಲು ಕಷ್ಟಪಡುತ್ತಿದ್ದರು. ರಕಿಮ್ ಪ್ರಜ್ಞಾಶೂನ್ಯರಾಗಿದ್ದರು. ಇಬ್ಬರೂ ಮೃತಪಟ್ಟಿರುವುದಾಗಿ ವೈದ್ಯರು ಬಳಿಕ ದೃಢಪಡಿಸಿದರು.

ಕ್ಲಾರಾ ಹಾಗೂ ರಕಿಮ್ ಕೆಲ ವರ್ಷಗಳಿಂದ ಪರಿಚಿತರಾಗಿದ್ದರು. ಬಿಪಿಓದಲ್ಲಿ ಉದ್ಯೋಗಿಯಾಗಿದ್ದ ಕ್ಲಾರಾ ಇತ್ತೀಚೆಗೆ ಅದನ್ನು ಬಿಟ್ಟಿದ್ದರು. ಸ್ನೇಹಿತೆ ಜೆನ್ನಿ ಮತ್ತು ರಕಿಮ್‌ಳ ದೂರದ ಸಂಬಂಧಿ ಲೈಂಖನ್‌ಮಂಗ್ ಎಂಬವರ ಜತೆಗೆ ಬಾಡಿಗೆ ಮನೆಯಲ್ಲಿ ಕ್ಲಾರಾ ವಾಸಿಸುತ್ತಿದ್ದರು. ಲಕ್ನೋದ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ರಕಿಮ್, ಜೆನ್ನಿ ಹಾಗೂ ಕ್ಲಾರಾ ಅವರನ್ನು ಭೇಟಿ ಮಾಡುವ ಸಲುವಾಗಿ ಆಗಮಿಸಿದ್ದರು.

ಗುರುವಾರ ಸಂಜೆ 6ರ ಸುಮಾರಿಗೆ ರಕಿಮ್ ಆಗಮಿಸಿದ್ದು, ಕ್ಲಾರಾ ಜತೆಗೆ ಊಟಕ್ಕೆ ತೆರಳಿದ್ದರು. 11 ಗಂಟೆಯ ವರೆಗೆ ಮೋಜು ಪಾರ್ಟಿಯಲ್ಲಿ ಸಂಭ್ರಮಿಸಿದ ಬಳಿಕ ಜೆನ್ನಿ ಬಿಪಿಓ ಕೆಲಸಕ್ಕೆ ತೆರಳಿದ್ದರು. ಮತ್ತೆ ಕೂಡಾ ಕ್ಲಾರಾ ಹಾಗೂ ರಕಿಮ್ ಮದ್ಯಪಾನ ಮಾಡುತ್ತಿದ್ದರು ಎಂದು ಜೆನ್ನಿ ಹೇಳಿಕೆ ನೀಡಿದ್ದಾರೆ.

ಜೆನ್ನಿ ಬೆಳಗ್ಗೆ 6ಕ್ಕೆ ಕೆಲಸ ಮುಗಿಸಿ ಮನೆಗೆ ಬಂದಾಗ ಇಬ್ಬರೂ ಒದ್ದಾಡುತ್ತಿದ್ದುದು ಕಂಡುಬಂತು ಎನ್ನಲಾಗಿದೆ. ಬಳಿಕ ಸ್ನೇಹಿತರಿಗೆ ಕರೆ ಮಾಡಿ ಅವರಿಬ್ಬರನ್ನು ಆಸ್ಪತ್ರೆಗೆ ಸಾಗಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News