ಉತ್ತರ ಪ್ರದೇಶ: ವಿವಿ, ಕಾಲೇಜುಗಳಲ್ಲಿ ಪ್ರತಿಭಟನೆಗೆ ನಿಷೇಧ
ಲಕ್ನೋ, ಎ.1: ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಲ್ಲಿ ಯಾವುದೇ ಬಗೆಯ ಪ್ರತಿಭಟನೆಯನ್ನು ಉದ್ಯೋಗಿಗಳು ಅಥವಾ ಉಪನ್ಯಾಸಕರು ಹಮ್ಮಿಕೊಳ್ಳುವುದನ್ನು ಉತ್ತರ ಪ್ರದೇಶ ಸರ್ಕಾರ ನಿಷೇಧಿಸಿದೆ.
ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ (ಎಸ್ಮಾ)ಯಡಿ ಕಟ್ಟುನಿಟ್ಟಿನ ಸೂಚನೆ ಹೊರಡಿಸಲಾಗಿದ್ದು, ಜೂನ್ 30ರವರೆಗೆ ಇದು ಜಾರಿಯಲ್ಲಿರುತ್ತದೆ. ಎಸ್ಮಾ ಕಾಯ್ದೆ ಉಲ್ಲಂಘಿಸಿದವರನ್ನು ಯಾವುದೇ ವಾರೆಂಟ್ ಇಲ್ಲದೇ ಬಂಧಿಸಲು ಪೊಲೀಸರಿಗೆ ಅಧಿಕಾರ ನೀಡಲಾಗಿದೆ.
ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ್ ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದು, ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಯಾವುದೇ ಬಗೆಯ ಪ್ರತಿಭಟನೆ ನಿಷೇಧಿಸಲಾಗಿದೆ. ಇದು ಜೂನ್ 30ರವರೆಗೆ ಜಾರಿಯಲ್ಲಿರುತ್ತದ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
ಪರೀಕ್ಷೆಗಳು ಸನಿಹದಲ್ಲಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, 18 ವಿಶ್ವವಿದ್ಯಾನಿಲಯಗಳು ಹಾಗೂ 4 ಸಾವಿರ ಕಾಲೇಜುಗಳಿಗೆ ಇದು ಅನ್ವಯಿಸುತ್ತದೆ.