×
Ad

ಟಿವಿ ಸುದ್ದಿ ನಿರೂಪಕರು ಪ್ಯಾಂಟ್ ಧರಿಸುವುದಿಲ್ಲವೇ ?

Update: 2017-04-01 11:35 IST

ಹೊಸದಿಲ್ಲಿ, ಎ.1: ಟಿವಿ ಸುದ್ದಿ ನಿರೂಪಕರು ಪ್ಯಾಂಟ್ ಧರಿಸುವುದಿಲ್ಲವೇ? ಈ ಪ್ರಶ್ನೆ ಹಲವರನ್ನು ಹಲವು ಬಾರಿ ಕಾಡಿದ್ದಿರಬಹುದು. ಈ ಪ್ರಶ್ನೆಗೆ ವಿಶಿಷ್ಟವಾಗಿ ಉತ್ತರ ನೀಡಲು ಯತ್ನಿಸಿದ್ದಾರೆ ಸಿಎನ್‌ಎನ್ ನ್ಯೂಸ್18 ವಾಹಿನಿಯ ಆಂಕರ್ ಕರ್ಮ ಪಲ್ಜೊರ್. ಸಿಎನ್‌ಎನ್ ನ್ಯೂಸ್ 18ನಲ್ಲಿ ತಮ್ಮ ಕೊನೆಯ ನ್ಯೂಸ್ ಬುಲೆಟಿನ್ ನಲ್ಲಿ ಅವರು ವಿಶಿಷ್ಟವಾಗಿ ಹಾಗೂ ಲಘು ಧಾಟಿಯಲ್ಲಿ ವೀಕ್ಷಕರಿಗೆ ವಿದಾಯ ಹೇಳಿದ್ದಾರೆ.

ಟಿವಿ ಸುದ್ದಿ ನಿರೂಪಕರ ಬಗ್ಗೆ ಇರುವ ಒಂದು ಜನಪ್ರಿಯ ತಪ್ಪು ಅಭಿಪ್ರಾಯವನ್ನು ದೂರಗೊಳಿಸುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಟಿವಿ ನಿರೂಪಕರು ನ್ಯೂಸ್ ಬುಲೆಟಿನ್ ಪ್ರಸ್ತುತ ಪಡಿಸುವ ಸಂದರ್ಭ ಪ್ಯಾಂಟ್ ಧರಿಸುವುದಿಲ್ಲವೆಂಬುದನ್ನು ಬಿಂಬಿಸುವ ವೀಡಿಯೋವೊಂದು ಇಂಗ್ಲೆಂಡಿನಲ್ಲಿ ವೈರಲ್ ಆಗಿದೆ ಎಂದು ಹೇಳಿದ ಕರ್ಮ, ಇದರಿಂದಾಗಿ ಟಿವಿ ನಿರೂಪಕರು ಪ್ಯಾಂಟ್ ಧರಿಸುವುದಿಲ್ಲವೆಂಬ ತಪ್ಪು ಕಲ್ಪನೆ ಹುಟ್ಟಿಗೊಂಡಿದೆ ಎಂದು ಹೇಳುತ್ತಲೇ ತಮ್ಮ ಸೀಟಿನಿಂದ ಎದ್ದು ಆಚೆಗೆ ಬಂದ ಅವರು ''ನಮ್ಮಲ್ಲಿ ಹೆಚ್ಚಿನವರು ಪ್ಯಾಂಟ್ ಧರಿಸುತ್ತಾರೆ. ನೀವೇ ನೋಡುತ್ತಿದ್ದೀರಿ'' ಎಂದು ಬಿಟ್ಟರು.

ಅವರು ತಮ್ಮ ಕೊನೆಯ ಕಾರ್ಯಕ್ರಮವನ್ನು ಮೈಕ್ ಡ್ರಾಪ್ ಅಥವಾ ಮೈಕ್ ಕೆಳಕ್ಕೆ ಬೀಳಿಸುವ ಮೂಲಕ ನಾಟಕೀಯವಾಗಿ ಮುಗಿಸಬಹುದಿತ್ತಾದರೂ, ಹಾಸ್ಯ ಚಟಾಕಿಯೊಂದನ್ನು ಹಾರಿಸಿ, ''ಈಗಿಂದೀಗಲೇ ಕೆಳಕ್ಕೆ ಬೀಳಿಸಲು ನನ್ನ ಬಳಿ ಮೈಕ್ ಇರಬೇಕಿತ್ತು ಎಂದೆನಿಸುತ್ತದೆ. ಆದರೆ ಇಲ್ಲ, ಮೇಲಾಗಿ ಇಲ್ಲಿರುವ ವಸ್ತುಗಳನ್ನು ಕೆಳಕ್ಕೆ ಬೀಳಿಸಲು ಅವು ಬಲು ದುಬಾರಿ'' ಎಂದು ಬಿಟ್ಟರಲ್ಲದೆ ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ''ಸೋ, ದಿಸ್ ಈಸ್ ಕರ್ಮ ಪಲ್ಜೊರ್ ಸೈನಿಂಗ್ ಆಫ್, ವಿದ್ ಹಿಸ್ ಟ್ರೌಸರ್ಸ್‌ ಆನ್'' ಎಂದು ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News