10 ಚಿತ್ರಗಳಿಗೆ ಪೂಜಾ ಪ್ರೊಡ್ಯೂಸರ್

Update: 2017-04-01 13:09 GMT

‘‘ಮುಂಗಾರುಮಳೆ ಹುಡುಗಿ’’ ಪೂಜಾ ಗಾಂಧಿ ಸ್ಯಾಂಡಲ್‌ವುಡ್‌ನಲ್ಲಿ ಈವರೆಗೆ ಯಾವುದೇ ಕನ್ನಡ ಚಿತ್ರನಿರ್ಮಾಪಕರು ಧೈರ್ಯ ಮಾಡದಂತಹ ಸಾಹಸಕ್ಕೆ ಮುಂದಾಗಿದ್ದಾರೆ. ಒಂದಲ್ಲ, ಎರಡಲ್ಲ...ಬರೋಬ್ಬರಿ 10 ಚಿತ್ರಗಳನ್ನು ನಿರ್ಮಿಸುವ ಬೃಹತ್ ಯೋಜನೆಯನ್ನು ಆಕೆ ಯುಗಾದಿಯ ವೇಳೆ ಘೋಷಿಸಿದ್ದಾರೆ.

‘‘ದಂಡುಪಾಳ್ಯ 2’’ ಚಿತ್ರದ ಶೂಟಿಂಗ್ ಪೂರ್ಣ ಗೊಳಿಸಿರುವ ಪೂಜಾ, ಈಗ ಫಿಲ್ಮ್ ಫ್ಯಾಕ್ಟರಿ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಸದ್ಯಕ್ಕೆ ಅವರು ಏಕಕಾಲಕ್ಕೆ ಮೂರು ಚಿತ್ರಗಳ ನಿರ್ಮಾಣವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈ ಪೈಕಿ ಎರಡು ಚಿತ್ರಗಳನ್ನು ಜೆ.ಡಿ.ಚಕ್ರವರ್ತಿ ಹಾಗೂ ಇನ್ನೊಂದು ಚಿತ್ರವನ್ನು ಲಕ್ಕಿ ಶಂಕರ್ ನಿರ್ದೇಶಿಸಲಿದ್ದಾರೆ.

ಜೆ.ಡಿ.ಆ್ಯಕ್ಷನ್ ಕಟ್ ಹೇಳಲಿರುವ ಚಿತ್ರಗಳಿಗೆ ‘ಯುತೇಹಿ’ ಹಾಗೂ ‘ಭೂ’ ಎಂಬ ವಿಶಿಷ್ಟವಾದ ಹೆಸರುಗಳನ್ನಿಟ್ಟಿದ್ದಾರೆ. ಆ ಮೂಲಕ ಟೈಟಲ್‌ನಿಂದಲೇ ಪ್ರೇಕ್ಷಕರ ಗಮನಸೆಳೆಯುವ ಯತ್ನಕ್ಕೆ ಪೂಜಾ ಮುಂದಾಗಿದ್ದಾರೆ. ಇನ್ನು ಲಕ್ಕಿ ಶಂಕರ್ ನಿರ್ದೇಶಿಸಲಿರುವ ಚಿತ್ರಕ್ಕೆ ‘ಬ್ಲಾಕ್ ವರ್ಸಸ್ ವೈಟ್’ ಎಂದು ಹೆಸರಿಡಲಾಗಿದೆ.

ಅಂದಹಾಗೆ ಈ ಎಲ್ಲಾ ಚಿತ್ರಗಳಿಗೆ ಪೂಜಾ ಹಣ ಸುರಿದರೂ, ಅವರು ಕೇವಲ ಒಂದು ಚಿತ್ರದಲ್ಲಿ ಮಾತ್ರ ನಟಿಸಲಿದ್ದಾರೆ.   ತನ್ನ ಚಿತ್ರಗಳಲ್ಲಿ ಹೊಸಬರಿಗೆ ಹೆಚ್ಚಿನ ಅವಕಾಶ ನೀಡುವ ಇರಾದೆಯನ್ನು ಪೂಜಾ ಹೊಂದಿದ್ದಾರೆ. ತನ್ನ ‘ಫಿಲ್ಮ್ ಫ್ಯಾಕ್ಟರಿ’ ಸಂಸ್ಥೆಯು ಸ್ಯಾಂಡಲ್‌ವುಡ್‌ಗೆ ಅತ್ಯುತ್ತಮ ಹೊಸ ಪ್ರತಿಭೆಗಳನ್ನು ನೀಡಲಿದೆಯೆಂದವರು ಭರವಸೆ ನೀಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News