ನೋಟು ನಿಷೇಧದ ಹಿನ್ನೆಲೆಯ ‘ಶೂನ್ಯತಾ’ಗೆ ಸೆನ್ಸರ್ ಕಿರಿಕ್

Update: 2017-04-01 13:11 GMT

ಮೋದಿ ಸರಕಾರದ ನಗದು ಅಮಾನ್ಯತೆಯಿಂದ ಶ್ರೀಸಾಮಾನ್ಯರ ಬದುಕನ್ನು ಯಾವ ರೀತಿಯಲ್ಲಿ ಬಾಧಿಸಿತೆಂಬ ಬಗ್ಗೆ ಬೆಳಕು ಚೆಲ್ಲುವ ಕಥಾ ವಸ್ತುವನ್ನು ಒಳಗೊಂಡ ಬಂಗಾಳಿ ಚಿತ್ರ ‘ಶೂನ್ಯತಾ’ದ ಬಿಡುಗಡೆಗೆ ಸೆನ್ಸ್ಸರ್ ಅಡ್ಡಗಾಲು ಹಾಕಿದೆ.ಎಲ್ಲವೂ ಅಂದುಕೊಂಡಂತೆ ನಡೆದಿದ್ದಲ್ಲಿ ‘ಶೂನ್ಯತಾ’ ಮಾರ್ಚ್ 31ರಂದು ಬಿಡುಗಡೆಯಾಗಬೇಕಿತ್ತು.

ಆದರೆ ಸೆನ್ಸರ್ ಮಂಡಳಿಯ ಪರಿಶೀಲನಾ ಸಮಿತಿಯು ಮಾರ್ಚ್ 27ರಂದು ಚಿತ್ರವನ್ನು ವೀಕ್ಷಿಸಿತ್ತು. ಈ ಚಿತ್ರಕ್ಕೆ ‘ಯು’ ಅಥವಾ ‘ಎ’ ಸರ್ಟಿಫಿಕೇಟ್ ನೀಡಬೇಕೇ ಎಂಬ ಬಗ್ಗೆ ಸಮಿತಿಯ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಈ ಹಿನ್ನೆಲೆಯಲ್ಲಿ ಚಿತ್ರವನ್ನು ಕೇಂದ್ರೀಯ ಸೆನ್ಸರ್ ಸರ್ಟಿಫಿಕೇಟ್ ಮಂಡಳಿ (ಸಿಬಿಎಫ್‌ಸಿ) ಅಧ್ಯಕ್ಷರ ಪರಿಶೀಲನೆಗಾಗಿ ಕಳುಹಿಸಿಕೊಡಲಾಗಿದೆ.

ನೋಟು ನಿಷೇಧದಿಂದ ಸಮಾಜದ ವಿವಿಧ ವರ್ಗಗಳ ಜನಸಾಮಾನ್ಯರು ಅನುಭವಿಸಿದ ಬವಣೆಗಳನ್ನು ಚಿತ್ರವು ವಿವರಿಸಿದೆ. ಇದರ ಜೊತೆಗೆ ನಗದು ವಹಿವಾಟಿನಲ್ಲಿ ಪಾರದರ್ಶಕತೆ ಹೆಚ್ಚಾಗಲು ನೋಟು ನಿಷೇಧ ನೆರವಾಗಿರುವ ವಿಚಾರದ ಬಗ್ಗೆಯೂ ಈ ಚಿತ್ರ ಗಮನಸೆಳೆದಿದೆ. ಹೀಗಾಗಿ ಈ ಚಿತ್ರಕ್ಕೆ ಯಾವುದೇ ರೀತಿಯ ರಾಜಕೀಯ ಬಣ್ಣ ಬಳಿಯುವ ಅಗತ್ಯವಿಲ್ಲವೆಂದು ನಿರ್ದೇಶಕ ಸುವೇಂದು ಘೋಷ್ ಹೇಳುತ್ತಾರೆ.

ಇಷ್ಟಕ್ಕೂ ‘ಶೂನ್ಯತಾ’ ಚಿತ್ರದ ಪ್ರದರ್ಶನಕ್ಕಾಗಿ ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಿಂದ ಆಹ್ವಾನ ಬಂದಿದೆಯಂತೆ. ಬ್ರಿಟನ್ ಚಲನಚಿತ್ರೋತ್ಸವದಲ್ಲಿ ‘ಶೂನ್ಯತಾ’ವನ್ನು ಉದ್ಘಾಟನಾ ಚಿತ್ರವಾಗಿ ಪ್ರದರ್ಶನ ಗೊಳ್ಳಲಿದೆ ಎಂದು ಸುವೇಂದ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.‘ಶೂನ್ಯತಾ’ ಚಿತ್ರವನ್ನು ಸುವೇಂದ್ ಮೂರು ಭಾಗಗಳಾಗಿ ಚಿತ್ರೀಕರಿಸಿದ್ದರು.

ಮೊದಲ ಎರಡು ಭಾಗಗಳ ಬಗ್ಗೆ ಸೆನ್ಸಾರ್ ಮಂಡಳಿಯಿಂದ ಯಾವುದೇ ಆಕ್ಷೇಪ ಬಂದಿರಲಿಲ್ಲ ಹಾಗೂ ಅವುಗಳನ್ನು ಸಾಕ್ಷಚಿತ್ರವೆಂದು ಪರಿಗಣಿಸಿತ್ತು. ಆದರೆ ಮೂರು ಭಾಗಗಳನ್ನು ಸೇರಿಸಿ, ಒಂದು ಪೂರ್ಣಪ್ರಮಾಣದ ಕಥಾಚಿತ್ರವಾಗಿ ರೂಪಿಸಿದಾಗ ಸೆನ್ಸಾರ್ ಕಿರಿಕ್ ತೆಗೆದಿರುವುದು ಎಷ್ಟು ಸರಿ ಎಂದು ಸುವೇದ್ ಪ್ರಶ್ನಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News