ಟೇಕ್‌ಆಫ್: ಯುದ್ಧಭೂಮಿಯಲ್ಲಿ ಸಿಲುಕಿಕೊಂಡ ಬಿಳಿ ಪಾರಿವಾಳಗಳು!

Update: 2017-04-01 19:01 GMT

‘ಟೇಕ್ ಆಫ್’ ಮಲಯಾಳಂ ಚಿತ್ರ ತಿಕ್ರಿತ್, ಇರಾಕ್‌ನ ಜರ್ಝರಿತ ಯುದ್ಧಭೂಮಿಯಲ್ಲಿ ಉಗ್ರರ ಕೈಯಾಳುಗಳಾಗಿ ಸಿಲುಕಿ, ಪಾರಾಗಿ ಬಂದ ಕೇರಳದ 46 ದಾದಿಯರ ನಿಜ ಕತೆಯನ್ನು ಆಧರಿಸಿದೆ.

2014ರಲ್ಲಿ ನಡೆದ ಈ ಘಟನೆಯ ಹಿಂದಿರುವ ರಾಜಕೀಯ, ಸಾಮಾಜಿಕ ಆಯಾಮಗಳನ್ನು ಜೊತೆ ಸೇರಿಸಿ ಒಂದು ಹೃದಯಸ್ಪರ್ಶಿ ಚಿತ್ರವನ್ನಾಗಿಸುವಲ್ಲಿ ಮಹೇಶ್ ನಾರಾಯಣನ್ ಸಂಪೂರ್ಣ ಯಶಸ್ವಿಯಾಗಿದ್ದಾರೆ. ಚಿತ್ರ ಎರಡು ನೆಲೆಗಳಲ್ಲಿ ನಮ್ಮನ್ನು ತಟ್ಟುತ್ತದೆ. ಒಂದೆಡೆ, ರೋಗಿಗಳನ್ನು ತಾಯಿಯಂತೆ ಪ್ರೀತಿಸುವ ದಾದಿಯರ ಬದುಕಿನ ಒಳ ಸಂಘರ್ಷಗಳನ್ನು ತೆರೆದಿಡುತ್ತದೆ. ಇನ್ನೊಂದೆಡೆ, ತಮ್ಮ ಕುಟುಂಬಕ್ಕಾಗಿ ಪ್ರಾಣವನ್ನೇ ಒತ್ತೆಯಿಟ್ಟು ಇರಾಕ್‌ನಂತಹ ದೇಶಗಳಿಗೆ ದುಡಿಯಲು ತೆರಳುವ ದಾದಿಯರು ಆ ನರಕಸದೃಶ ಪ್ರದೇಶಗಳಿಂದ ಪಾರಾಗಿ ಬರುವ ದಾರಿಯಲ್ಲ್ಲಿ ಎದುರಾಗುವ ರಾಜಕೀಯ ಬಿಕ್ಕಟ್ಟುಗಳನ್ನು ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡುತ್ತದೆ. ಒಂದು ಭಾವನಾತ್ಮಕ ಚಿತ್ರವನ್ನು ಕ್ಷಣಕ್ಷಣಕ್ಕೂ ಕುತೂಹಲಕರವಾಗಿ ಕಟ್ಟಿಕೊಡುವ ನಿರ್ದೇಶಕನೇ ಚಿತ್ರದ ನಿಜವಾದ ಹೀರೋ.

ದಾದಿ ಸಮೀರಾಳ ಪಾತ್ರವನ್ನು ನಿರ್ವಹಿಸಿರುವ ಪಾರ್ವತಿ ಚಿತ್ರದ ಉದ್ದಗಲಕ್ಕೂ ನಮ್ಮನ್ನು ಆವರಿಸಿಕೊಳ್ಳುತ್ತಾರೆ. ಚಿತ್ರದ ಕೇಂದ್ರ ಬಿಂದುವೇ ಸಮೀರ. ಆಕೆಯ ಮೂಲಕ ದಾದಿಯ ನೋವುಗಳನ್ನು ಪರಿಣಾಮಕಾರಿಯಾಗಿ, ಹೃದಯಮುಟ್ಟುವಂತೆ ಕಟ್ಟಿಕೊಡುವಲ್ಲಿ ಚಿತ್ರಕತೆ ಯಶಸ್ವಿಯಾಗಿದೆ. ತನ್ನ ತಂದೆ, ತಾಯಿ, ತಂಗಿಯರನ್ನು ಸಾಕುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿರುವ ಪತಿಯಿಂದ ವಿಚ್ಛೇದನಗೊಂಡಿರುವ ಸಮೀರಳ ಬದುಕು ಬಹುತೇಕ ದಾದಿಯರದ್ದೂ ಕೂಡ. ವಿಚ್ಛೇದಿತ ಗಂಡನ ಜೊತೆಗಿರುವ ತನ್ನ ಮಗನನ್ನು ನೆನೆದು, ತಂದೆ ತಾಯಿಗಳ ಜೊತೆಗೆ ಬದುಕು ದೂಡುತ್ತಿರುವ ಸಮೀರಳಿಗೆ ನಿದ್ದೆ ಹತ್ತಬೇಕಾದರೆ ನಿದ್ದೆಗುಳಿಗೆ ತೆಗೆದುಕೊಳ್ಳಲೇಬೇಕು.

ಇಂತಹದೇ ಸಂಕಟ, ಒಳಬೇಗುದಿಗಳನ್ನು ಹೊತ್ತ ದಾದಿಯರ ತಂಡವೊಂದು ತಮ್ಮ ಬಡತನ, ಅಸಹಾಯಕತೆ, ಹತಾಶೆ ಇವೆಲ್ಲದಕ್ಕೂ ದೂರದ ಇರಾಕ್‌ನಲ್ಲಿ ಪರಿಹಾರವನ್ನು ಕಾಣುತ್ತಾರೆ. ವಿಚ್ಛೇದಿತ ಸಮೀರಳನ್ನು ಪ್ರೀತಿಸುತ್ತಿರುವ ಒಂದೇ ಕಾರಣಕ್ಕಾಗಿ ಆಕೆಯ ಜೊತೆಗೆ ಇರಾಕ್‌ಗೆ ಹೊರಡುವ ತೀರ್ಮಾನಕ್ಕೆ ಬರುತ್ತಾನೆ ಶಾಹಿದ್(ಕುಂಜಾಕೋ ಬೋಬನ್). ಒಬ್ಬಂಟಿಯಾಗಿ ಇರಾಕ್‌ಗೆ ತೆರಳಲು ಆಕೆಯ ಕುಟುಂಬ ಸಮೀರಳಿಗೆ ಅವಕಾಶ ನೀಡದೆ ಇದ್ದ ಕಾರಣಕ್ಕಾಗಿ, ಅವಸರವಸರವಾಗಿ ಶಾಹಿದ್‌ನ ಜೊತೆಗೆ ವಿವಾಹವಾಗುತ್ತಾಳೆ. ಇರಾಕ್‌ನ ವಿಮಾನ ಹತ್ತುವ ಹೊತ್ತಿಗೆ ಸಮೀರ ಗರ್ಭಿಣಿ. ಇರಾಕ್‌ನ ಅಪರಿಚಿತ ನಗರಗಳಲ್ಲಿ ಸ್ಫೋಟಿಸುವ ಬಾಂಬುಗಳು, ಗುಂಡಿನ ದಾಳಿಗಳು, ಅಪರಿಚಿತ ಆದೇಶಗಳು ಇವೆಲ್ಲವುಗಳ ನಡುವೆ ಅಷ್ಟೂ ದಾದಿಯರು ತಮ್ಮ ಬದುಕಿನ ನೆಮ್ಮದಿಯನ್ನು ಹುಡುಕಲು ಪ್ರಯತ್ನಿಸುತ್ತಾರೆ. ಊರಲ್ಲಿರುವ ತಮ್ಮ ತಂದೆತಾಯಿ, ಕುಟುಂಬದ ಸಂತೋಷಗಳನ್ನು ಅಲ್ಲಿ ಅರಸುತ್ತಿರುತ್ತಾರೆ.

ಇದೇ ಸಂದರ್ಭದಲ್ಲಿ ಸಮೀರಳಿಗೆ ಇನ್ನೊಂದು ಸವಾಲು ಎದುರಾಗುತ್ತದೆ. ವಿಚ್ಛೇದಿತ ಪತಿ ಆಕೆಯ ಮಗುವನ್ನು ಅವಳ ಬಳಿಗೆ ತಂದು ಒಪ್ಪಿಸುತ್ತಾನೆ. ಸಮೀರಳಿಗೆ ಎರಡೆರಡು ಜವಾಬ್ದಾರಿಗಳು. ಒಂದೆಡೆ ಗರ್ಭದೊಳಗಿರುವ ಮಗು. ಮಗದೊಂದೆಡೆ ತನ್ನೆಡೆಗೆ ದುತ್ತನೆ ಬಂದಿಳಿದಿರುವ ಇನ್ನೊಬ್ಬ ಮಗ ಇಬ್ರು. ಅವನಿಗೆ ತಾನು ಇನ್ನೊಂದು ಮದುವೆಯಾಗಿರುವುದು ಗೊತ್ತಿಲ್ಲ. ಜೊತೆಗೆ ತಾನು ಗರ್ಭಿಣಿಯೆನ್ನುವುದನ್ನು ಅವನಿಂದ ಮುಚ್ಚಿಡಬೇಕಾದ ಸ್ಥಿತಿ. ಇದೇ ಸಂದರ್ಭದಲ್ಲಿ ಶಾಹಿದ್‌ನನ್ನು ಇಬ್ರು ದ್ವೇಷಿಸುತ್ತಾನೆ. ಅವನಿಂದ ಪಾರಾಗುವುದಕ್ಕಾಗಿಯೇ ಶಾಹಿದ್ ಪತ್ನಿಯನ್ನು ತೊರೆದು ತಾತ್ಕಾಲಿಕವಾಗಿ ಉಗ್ರವಾದಿಗಳ ನೆಲೆಯಾಗಿರುವ ಮೊಸುಲ್‌ಗೆ ವೈದ್ಯಕೀಯ ತಂಡದ ಜೊತೆಗೆ ಹೊರಡುತ್ತಾನೆ. ಅಲ್ಲಿ ಆತ ಉಗ್ರರ ಬಂದಿಯಾಗುತ್ತಾನೆ.

ಈ ಹೊತ್ತಿನಲ್ಲೇ ಐಸಿಸ್ ಉಗ್ರರು ತಿಕ್ರಿತ್ ನಗರವನ್ನು ವಶಪಡಿಸಿಕೊಳ್ಳುತ್ತಾರೆ. ಇವರಿರುವ ಆಸ್ಪತ್ರೆ ಉಗ್ರರ ಕೈವಶವಾಗುತ್ತದೆ. ಅಲ್ಲಿಂದ ಪಾರಾಗಿ ತೆರಳುವುದಾದರೂ ಎಲ್ಲಿಗೆ? ದಾದಿಯೊಬ್ಬಳು ಹೇಳುತ್ತಾಳೆ ‘‘ನಾನು ಸಂಬಳ ಸಿಗದೆ ವಾಪಸ್ ಭಾರತಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಹಣ ಇಲ್ಲದೆ ಬರಬೇಡ ಎಂದಿದ್ದಾರೆ ತಂದೆ’’ ತಲೆಯ ಮೇಲೆ ಬಾಂಬುಗಳು ಸುರಿಯುತ್ತಿದ್ದರೂ ಆಕೆ ಊರಿಗೆ ಮರಳಲು ಹಿಂಜರಿಯುತ್ತಿದ್ದಾಳೆ. ಇರಾಕ್‌ನ ಯುದ್ಧಭೂಮಿಯಲ್ಲಿ ಸೆರೆ ಸಿಕ್ಕಿರುವ ಪ್ರತೀ ದಾದಿಯ ಮನದೊಳಗೂ ಒಂದೊಂದು ರಣರಂಗ. ಈ ಹೊರಗಿನ ರಣರಂಗದಿಂದ ಪಾರಾಗಿ ಮತ್ತೆ ಊರಿಗೆ ಮರಳಿ ಅಲ್ಲಿನ ನರಕದ ಜೊತೆಗೆ ಮುಖಾಮುಖಿಯಾಗಬೇಕಾದ ಭೀತಿ. ಒಂದು ರೀತಿಯಲ್ಲಿ ಅತ್ತ ಧರಿ, ಇತ್ತ ಪುಲಿ. ಈ ಸಂದರ್ಭದಲ್ಲಿ ಇಡೀ ಸನ್ನಿವೇಶವನ್ನು ಸಮೀರ ಕೈಗೆತ್ತಿಕೊಂಡು ನಿಭಾಯಿಸುವ ರೀತಿ, ಚಿತ್ರದ ಘನತೆಯನ್ನು ಮೇಲೆತ್ತುತ್ತದೆ.

ಒಂದೆಡೆ ಕಳೆದು ಹೋಗಿರುವ ತನ್ನ ಪತಿಯನ್ನು ಹುಡುಕಬೇಕು, ಮಗದೊಂದೆಡೆ ಹೊಟ್ಟೆಯಲ್ಲಿರುವ ಮಗುವನ್ನು ಉಳಿಸಿಕೊಳ್ಳಬೇಕು, ಜೊತೆಗಿರುವ ಮಗನನ್ನು ಸಂಬಾಳಿಸಬೇಕು. ಇವೆಲ್ಲದರ ನಡುವೆ ಉಗ್ರರ ನಡುವಿನಿಂದ ಪಾರಾಗಿ ಸುರಕ್ಷಿತ ದಡ ಸೇರಬೇಕು. ಕತೆ ಬೆಳೆದಂತೆಯೇ ಸಮೀರನ ವ್ಯಕ್ತಿತ್ವವೂ ನಮ್ಮಿಳಗೆ ಬೆಳೆಯ ತೊಡಗುತ್ತದೆ. ಕತೆಗೆ ತಿರುವು ಸಿಗುವುದು ಭಾರತೀಯ ರಾಯಭಾರಿ ಮನೋಜ್‌ಕುಮಾರ್ (ಫಹದ್ ಫಾಝಿಲ್) ಪ್ರವೇಶದ ಮೂಲಕ. ಸಮೀರ ಮತ್ತು ಆತನ ಮುಖಾಮುಖಿ ಚಿತ್ರಕ್ಕೆ ತೀವ್ರತೆಯನ್ನು ಕೊಡುತ್ತದೆ. ಒಂದು ರೀತಿಯ ಹತಾಶೆಯಲ್ಲಿದ್ದ ಮನೋಜ್ ಕುಮಾರ್‌ಗೆ ಸಮೀರಳ ವ್ಯಕ್ತಿತ್ವ, ದಿಗ್ಬಂಧನಕ್ಕೊಳಗಾಗಿದ್ದ ದಾದಿಗಳ ರಕ್ಷಣೆಗೆ ಕಾರ್ಯೋನ್ಮುಖನಾಗುವಂತೆ ಮಾಡುತ್ತದೆ. ದಾದಿಯರ ರಕ್ಷಣೆಗಾಗಿ ಮನೋಜ್ ಹೆಣೆಯುವ ತಂತ್ರ, ಈ ಸಂದರ್ಭದಲ್ಲಿ ಎದುರಾಗುವ ರಾಜಕೀಯ ಬಿಕ್ಕಟ್ಟು ಇವೆಲ್ಲವನ್ನೂ ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿ ಕೊಡುತ್ತಾರೆ ನಿರ್ದೇಶಕರು. ಅಂತಿಮವಾಗಿ ಸಮೀರ ದಾದಿಯರ ರಕ್ಷಣೆಯಲ್ಲೂ, ತನ್ನ ಪತಿಯ ರಕ್ಷಣೆಯಲ್ಲೂ ಯಶಸ್ವಿಯಾಗುತ್ತಾಳೆ.

 ಬರೇ ಒಂದು ಸಾಕ್ಷ ಚಿತ್ರವಾಗಿ ಮುಗಿದು ಬಿಡಬಹುದಾಗಿದ್ದ ಕತೆಯನ್ನು, ಥ್ರಿಲ್ಲರ್ ಕತೆಯಾಗಿ ಪರಿವರ್ತಿಸಿದ ಹೆಗ್ಗಳಿಕೆ ಚಿತ್ರಕತೆಯನ್ನು ರೂಪಿಸಿದ ಮಹೇಶ್ ಮತ್ತು ಪಿವಿ ಶಾಜಿಕುಮಾರ್ ಅವರಿಗೆ ಸಲ್ಲಬೇಕು. ಶಾನ್ ರೆಹಮಾನ್, ಗೋಪಿ ಸುಂದರ್ ಅವರ ಸಂಗೀತ ಚಿತ್ರದ ಲಯಕ್ಕೆ ಪೂರಕವಾಗಿದೆ.

ವಿಚ್ಛೇದಿತ ಪತಿಯ ಪಾತ್ರಕ್ಕೆ ಆಸಿಫ್ ಅಲಿ ನ್ಯಾಯ ನೀಡಿದ್ದಾರೆ. ಚಿತ್ರದ ಕೊನೆಯಲ್ಲಿ ನಮ್ಮಲ್ಲಿ ಉಳಿದುಕೊಳ್ಳುವುದು ನಟಿ ಪಾರ್ವತಿ, ಯಶಸ್ವಿಯಾಗಿ ಕಟ್ಟಿಕೊಟ್ಟ ಸಮೀರಳ ವ್ಯಕ್ತಿತ್ವ. ಮಗಳಾಗಿ, ಪತಿಯಾಗಿ, ತಾಯಿಯಾಗಿ, ಗೆಳತಿಯಾಗಿ ಆಕೆ ನಿಭಾಯಿಸುವ ಹೊಣೆಗಾರಿಕೆ ಬಹು ಸಮಯ ನಮ್ಮನ್ನು ಕಾಡುತ್ತದೆ.

ರೇಟಿಂಗ್ - ****

Writer - ಮುಸಾಫಿರ್

contributor

Editor - ಮುಸಾಫಿರ್

contributor

Similar News