ಮನಸಿಗಿಳಿಯದ ಮಲ್ಲಿಗೆ

Update: 2017-04-01 19:00 GMT

ಕಳೆದ ವರ್ಷ ತೆರೆಕಂಡಿದ್ದ ಮರಾಠಿ ಸಿನೆಮಾ ‘ಸೈರಾಟ್’ ದೊಡ್ಡ ಸದ್ದು ಮಾಡಿತ್ತು. ಮರ್ಯಾದಾ ಹತ್ಯೆ ಕುರಿತ ಮನಮಿಡಿಯುವ ಪ್ರೇಮಕತೆಯಿದು. ಸಾಮಾಜಿಕ ಸಂಕಟವೊಂದಕ್ಕೆ ಬಲಿಯಾಗುವ ಪ್ರೇಮಿಗಳಿಬ್ಬರ ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗಾಗಿ ಸಹಜವಾಗಿಯೇ ಈ ಚಿತ್ರದ ಕನ್ನಡ ಅವತರಣಿಕೆ ‘ಮನಸು ಮಲ್ಲಿಗೆ’ ಬಗ್ಗೆ ನಿರೀಕ್ಷೆಯಿತ್ತು. ಅನುಭವಿ ನಿರ್ದೇಶಕ ಎಸ್.ನಾರಾಯಣ್ ಸಾರಥ್ಯದಲ್ಲಿ ತಯಾರಾಗಿರುವ ಸಿನೆಮಾ ಮೂಲ ಕತೆಗೆ ಬದ್ಧವಾಗಿದೆ. ಆದರೆ ತಾಜಾತನ ಕಳೆದುಕೊಂಡಿರುವ ಸಿನೆಮಾಗೆ ಅಲ್ಲಿನ ಘಮಲು ಮಾತ್ರ ದಕ್ಕಿಲ್ಲ.

‘ಸೈರಾಟ್’ನ ದೊಡ್ಡ ಯಶಸ್ಸಿನ ಹಿಂದಿನ ಶಕ್ತಿ ಎಂದರೆ ಅಲ್ಲಿನ ಪ್ರಾದೇಶಿಕತೆ, ಆಕರ್ಷಕ ನಿರೂಪಣೆ ಮತ್ತು ನಾಯಕಿ ರಿಂಕು ರಾಜ್‌ಗುರು. ಕನ್ನಡ ಅವತರಣಿಕೆಯಲ್ಲಿ ನಾಯಕಿಯಾಗಿ ರಿಂಕು ನಟಿಸಿದ್ದಾರಾದರೂ ಇತರ ವಿಭಾಗಗಳಲ್ಲಿ ಚಿತ್ರ ಬಸವಳಿದಿದೆ. ನಿರ್ದೇಶಕ ಎಸ್.ನಾರಾಯಣ್ ನೆಲದ ಗುಣ ಸಿಗುವ ಗಟ್ಟಿಯಾದ ಪ್ರಾದೇಶಿಕತೆಯನ್ನು ಹಿನ್ನೆಲೆಯಾಗಿ ಬಳಕೆ ಮಾಡಿಕೊಳ್ಳುವ ಹಂತದಲ್ಲೇ ಎಡವಿದ್ದಾರೆ. ಹಾಗಾಗಿ ಕತೆಗೆ ಅಗತ್ಯವಿದ್ದ ಸಾಮಾಜಿಕ ಅಸಮಾನತೆ, ರಾಜಕಾರಣ, ಜಾತಿ ವೈಷಮ್ಯದಂತಹ ಸಂಗತಿಗಳು ಮೈದಾಳುವುದಿಲ್ಲ. ಜತೆಗೆ ಹಾಡಿನಲ್ಲಿ ಗ್ರಾಫಿಕ್ಸ್ ಬಳಕೆ, ಮನೆ-ಬಂಗಲೆಯ ಸೆಟ್‌ಗಳು ಅಸಹಜವಾಗಿ ಕಾಣಿಸುವುದರಿಂದ ನವಿರು ಪ್ರೇಮಕತೆಗೆ ಸರಿಯಾದ ಭೂಮಿಕೆಯೇ ಸಿದ್ಧವಾಗುವುದಿಲ್ಲ.
 
ಇಂತಹ ಕೆಲವು ಮಿತಿಗಳ ಮಧ್ಯೆಯೂ ಚಿತ್ರದ ದ್ವಿತೀಯಾರ್ಧ ಕೊಂಚ ಸಹ್ಯವೆನಿಸುತ್ತದೆ. ಅದು ಕೂಡ ಕತೆಯ ಕಾರಣಕ್ಕಾಗಿ. ಮೂಲ ಚಿತ್ರದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ನಟಿ ರಿಂಕು ರಾಜ್‌ಗುರು ಕನ್ನಡ ಅವತರಣಿಕೆಯ ಸಾಮರ್ಥ್ಯ ಮತ್ತು ದೌರ್ಬಲ್ಯವೂ ಹೌದು! ಮರಾಠಿ ಮಾತೃಭಾಷೆಯ ರಿಂಕು ಇಲ್ಲಿ ತಮ್ಮ ಪಾತ್ರಕ್ಕೆ ಸ್ವತಃ ತಾವೇ ಡಬ್ ಮಾಡಿದ್ದಾರೆ. ಮುದ್ದಾಗಿ ಕಾಣಿಸುವ ಅವರ ಕನ್ನಡ ಉಚ್ಚಾರ ಚಿತ್ರದ ಓಘಕ್ಕೆ ಅಡ್ಡಿಯಾಗುತ್ತದೆ. ನವನಟ ನಿಶಾಂತ್ ಚೊಚ್ಚಲ ಸಿನೆಮಾದಲ್ಲೇ ಸೊಗಸಾಗಿ ನಟಿಸಿದ್ದಾರೆ. ‘ಡ್ರಾಮಾ ಜೂನಿಯರ್ಸ್‌’ ಖ್ಯಾತಿಯ ಐದು ವರ್ಷದ ಪುಟಾಣಿ ಅಚಿಂತ್ಯನ ಬಾಯಲ್ಲಿ ಆತನ ವಯಸ್ಸಿಗೆ ಮೀರಿದ ಮಾತುಗಳನ್ನಾಡಿಸುವ ಅಗತ್ಯವಿರಲಿಲ್ಲ. ಇದು ‘ಅಭಿರುಚಿ’ಯ ಪ್ರಶ್ನೆ.

ಕೆಲವು ಸಿನೆಮಾಗಳನ್ನು ರೀಮೇಕ್ ಮಾಡಲು ಸಾಧ್ಯವಿಲ್ಲ ಎನ್ನುವುದಕ್ಕೆ ‘ಮನಸು ಮಲ್ಲಿಗೆ’ ಮತ್ತೊಂದು ಉದಾಹರಣೆಯಾಗಿ ನಿಲ್ಲುತ್ತದೆ.

ನಿರ್ದೇಶನ: ಎಸ್. ನಾರಾಯಣ್, ನಿರ್ಮಾಣ : ರಾಕ್‌ಲೈನ್ ವೆಂಕಟೇಶ್ ಮತ್ತು ಆಕಾಶ್ ಚಾವ್ಲಾ, ಸಂಗೀತ : ಅಜಯ್-ಅತುಲ್ ಮತ್ತು ಎಸ್.ನಾರಾಯಣ್, ಛಾಯಾಗ್ರಹಣ : ಮನೋಹರ್ ಜೋಶಿ, ತಾರಾಗಣ : ನಿಶಾಂತ್, ರಿಂಕು ರಾಜ್‌ಗುರು ಮತ್ತಿತರರು.

ರೇಟಿಂಗ್ - **

Writer - ಶಶಿಧರ ಚಿತ್ರದುರ್ಗ

contributor

Editor - ಶಶಿಧರ ಚಿತ್ರದುರ್ಗ

contributor

Similar News