×
Ad

ಭಾರತದಲ್ಲಿ ಭಯೋತ್ಪಾದನೆ ಕೃತ್ಯಗಳಿಗಿಂತ ಹೆಚ್ಚು ಜನರನ್ನು ಕೊಲ್ಲುವುದು ಯಾವುದು ಗೊತ್ತೇ ?

Update: 2017-04-02 09:12 IST

ಹೊಸದಿಲ್ಲಿ, ಎ.2: ದೇಶದಲ್ಲಿ ಭಯೋತ್ಪಾದನಾ ದಾಳಿಗಳು ಸದಾ ಸುದ್ದಿಯಲ್ಲಿರುತ್ತವೆ. ಆದರೆ ಪ್ರೇಮ ಪ್ರಕರಣಗಳು ಇದಕ್ಕಿಂತ ಆರು ಪಟ್ಟು ಅಧಿಕ ಮಂದಿಯನ್ನು ಬಲಿ ಪಡೆಯುತ್ತಿವೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

2001ರಿಂದ 2015ರ ಅವಧಿಯಲ್ಲಿ ಪ್ರೇಮ ಪ್ರಕರಣಗಳು ದೇಶದಲ್ಲಿ ಒಟ್ಟು 38,585 ಮಂದಿಯನ್ನು ಬಲಿ ಪಡೆದಿವೆ. ಇದರಲ್ಲಿ ಹತ್ಯೆ, ಸಾಮೂಹಿಕ ಹತ್ಯೆ ಘಟನೆಗಳೂ ಸೇರಿವೆ. ಪ್ರೇಮ ಪ್ರಕರಣಗಳ ಸಂಬಂಧಿಸಿ 79,189 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟೇ ಅಲ್ಲದೇ 2.6 ಲಕ್ಷ ಅಪಹರಣ ಪ್ರಕರಣಗಳಿಗೂ ಇದು ಕಾರಣವಾಗಿದ್ದು, ಮದುವೆಗಾಗಿ ಮಹಿಳೆಯರ ಅಪಹರಣ ಪ್ರಕರಣಗಳೂ ದಾಖಲಾಗಿವೆ ಎನ್ನುವುದು ಸರ್ಕಾರದ ಅಂಕಿಅಂಶಗಳಿಂದ ತಿಳಿದು ಬರುತ್ತದೆ.

ಅಂದರೆ ಪ್ರೀತಿ, ಪ್ರೇಮ, ಪ್ರಣಯ ದೇಶದಲ್ಲಿ ಪ್ರತೀದಿನ ಏಳು ಕೊಲೆ, 14 ಆತ್ಮಹತ್ಯೆ, 47 ಅಪಹರಣ ಪ್ರಕರಣಗಳಿಗೆ ಕಾರಣವಾಗುತ್ತಿದೆ. ಇನ್ನೊಂದೆಡೆ ಉಗ್ರರ ದಾಳಿಯಲ್ಲಿ ಈ ಅವಧಿಯಲ್ಲಿ 20 ಸಾವಿರ ಮಂದಿ ಜನಸಾಮಾನ್ಯರು, ಭದ್ರತಾ ಪಡೆ ಸಿಬ್ಬಂದಿ ಹತರಾಗಿದ್ದಾರೆ. ಪ್ರೇಮಹತ್ಯೆಗಳು ಆಂಧ್ರಪ್ರದೇಶದಲ್ಲಿ ಅತ್ಯಧಿಕ. ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಮಧ್ಯಪ್ರದೇಶ ನಂತರದ ಸ್ಥಾನಗಳಲ್ಲಿವೆ ಎನ್ನುವುದನ್ನು ಅಂಕಿಅಂಶಗಳು ಬಹಿರಂಗಪಡಿಸಿವೆ.

ಈ ಅವಧಿಯಲ್ಲಿ ಮೇಲ್ಕಂಡ ರಾಜ್ಯಗಳಲ್ಲಿ 3,000ಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗಿವೆ. ದೊಡ್ಡ ಹಾಗೂ ಅಧಿಕ ಜನಸಂಖ್ಯೆಯ ರಾಜ್ಯಗಳಲ್ಲಿ ಅಧಿಕ ಪ್ರಕರಣಗಳು ದಾಖಲಾಗಿವೆ. ತ್ರಿಕೋನ ಪ್ರೇಮ, ಹತಾಶ ಪ್ರೇಮಿಗಳ ಆತ್ಮಹತ್ಯೆ, ಜಾತಿ, ಧರ್ಮ ಮತ್ತಿತರ ಸಾಮಾಜಿಕ ಕಟ್ಟುಪಾಡುಗಳ ಕಾರಣದಿಂದ ಪ್ರೀತಿ ಹಿನ್ನೆಲೆಯಲ್ಲಿ ರೊಚ್ಚಿಗೆದ್ದು ಕೊಲೆ ಮಾಡುವುದು ಮತ್ತಿತರ ಬಗೆಯ ಸಾವುನೋವು ಇದರಲ್ಲಿ ಸೇರಿವೆ.

ತಮ್ಮ ಬಾಳಸಂಗಾತಿ ಆಯ್ಕೆ ಯುವಜೋಡಿಯ ಪಾಲಿಗೆ ಮಾರಕವಾಗುತ್ತಿರುವುದು ಮುಖ್ಯವಾಗಿ ಪಿತೃಪ್ರಧಾನ ವ್ಯವಸ್ಥೆ ಮತ್ತು ಜಾತಿ ವ್ಯವಸ್ಥೆಯ ಕಾರಣದಿಂದಾಗಿ ಎಂದು ಮಾಜಿ ಪ್ರಾಧ್ಯಾಪಕಿ ಉಮಾ ಚಕ್ರವರ್ತಿ ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News